ಕಿರಂ ಹೆಸರಿನ ಈ ಪ್ರಶಸ್ತಿಯೇ ನನಗೆ ಸರ್ವಶ್ರೇಷ್ಠ: ಹಿರಿಯ ಸಾಹಿತಿ ಕೆ.ಬಿ.ಸಿದ್ಧಯ್ಯ

Update: 2018-12-25 15:59 GMT

ಬೆಂಗಳೂರು, ಡಿ.25: ಹಿಂದೆ ದೊರೆತಿರುವ ಪ್ರಶಸ್ತಿ, ಮುಂದೆ ಸಿಗಲಿರುವ ಪ್ರಶಸ್ತಿಗಿಂತ ಪ್ರೊ.ಕಿ.ರಂ.ನಾಗರಾಜ ಹೆಸರಿನ ಈ ಪ್ರಶಸ್ತಿಯೇ ನನಗೆ ಸರ್ವಶ್ರೇಷ್ಠ ಎಂದು ಹಿರಿಯ ಸಾಹಿತಿ ಡಾ.ಕೆ.ಬಿ.ಸಿದ್ಧಯ್ಯ ಹರ್ಷ ವ್ಯಕ್ತಪಡಿಸಿದರು.

ಮಂಗಳವಾರ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪ್ರಜ್ಞಾ ಸಾಂಸ್ಕೃತಿಕ ವೇದಿಕೆ ಆಯೋಜಿಸಿದ್ದ ಪ್ರೊ.ಕಿ.ರಂ.ನಾಗರಾಜರವರ 75ನೇ ಹುಟ್ಟು ಹಬ್ಬದಲ್ಲಿ ಪ್ರೊ.ಕಿ.ರಂ.ನಾಗರಾಜ ಸಂಸ್ಕೃತಿ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು, ಕಿರಂ ಪದವೇ ಹೀಗೆ ರೋಮಾಂಚನ, ಘನತೆ, ಸಂತೋಷ, ಸಂಭ್ರಮ. ಇನ್ನು, ಅವರ ಹೆಸರಿನಲ್ಲಿ ಪ್ರಶಸ್ತಿ ದೊರೆತಿರುವುದು ಸೌಭಾಗ್ಯ ಎಂದು ಹೇಳಿದರು.

ನಾನು ಆಳ್ವಾಸ್ ನುಡಿಸಿರಿಗೆ ಹೋಗಿದ್ದಾಗ ಮಾತನಾಡಲು ಅವಕಾಶ ನೀಡಿದರು. ಆಗ ಪ್ರಶಸ್ತಿ ಸ್ವೀಕರಿಸಿ, ಮಂಟೇಸ್ವಾಮಿ ಶರಣರ ಸಭೆಗೆ ಹೇಗೆ ಕರಿಯ ಕಂಬಳಿ ಹೊದ್ದುಕೊಂಡು ಹೋಗಿದ್ದರೋ, ಇಲ್ಲಿಗೆ ನಾನು ಹಾಗೇ ಬಂದಿದ್ದೇನೆ ಎಂದು ಹೇಳಿದೆ. ಆದರೆ, ಕಿರಂ ಪ್ರಶಸ್ತಿ ಸ್ವೀಕರಿಸಲು ಮಂಟೇಸ್ವಾಮಿಯ ಶಿಶು ಮಗನಾಗಿ ಇಲ್ಲಿಗೆ ಬಂದಿದ್ದೇನೆ ಎಂದು ಕಿರಂ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದರು.

ಕಿರಂ ಕನ್ನಡ ಕಾವ್ಯ ಪರಂಪರೆಯನ್ನು ಆಳವಾಗಿ ಅರಿತಿದ್ದ ಸಂತ, ಇದರಿಂದಲೇ ಕಿರಂನ ಶಿಷ್ಯ ಪರಂಪರೆ, ಒಲವಿನ ಕೂಟವನ್ನು ಕಿರಂ ಹೆಸರಿನಲ್ಲಿ ನಡೆಸಿಕೊಂಡು ಬರುತ್ತಿದೆ. ಶಿಷ್ಯರು ಹಾಗೂ ಒಡನಾಡಿಗಳ ಜೊತೆಗೆ ಅವರು ಕಾವ್ಯದಲ್ಲೇ ಸಂಭ್ರಮ ಪಡುತ್ತಿದ್ದರು. ಆದರೆ, ಮುಂದಿನ ಪೀಳಿಗೆಯಲ್ಲಿ ಇಂತಹ ಗುರು ಪರಂಪರೆ ದೊರೆಯುವುದಿಲ್ಲ. ಅಲ್ಲದೆ, ಕಿರಂ ಪ್ರಶಸ್ತಿಯನ್ನು ವಿನಯಪೂರ್ವಕವಾಗಿ ಪಡೆಯುತ್ತಿದ್ದೇನೆ ಎಂದು ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಮಾತನಾಡಿ, ಕಿರಂ ಹೆಚ್ಚು ಇಷ್ಟ ಪಡುತ್ತಿದ್ದ ಕವಿ ಡಾ.ಕೆ.ಬಿ.ಸಿದ್ದಯ್ಯ. ಚಳವಳಿಗಳನ್ನು ಅನ್ನದ ರೀತಿ ಅರಗಿಸಿಕೊಂಡಿದ್ದ ಸಿದ್ದಯ್ಯ, ಯಾವ ನೆಲೆಯಲ್ಲಿ ನಿಂತು ಏನು ಯೋಚಿಸಬೇಕು ಎಂಬುದನ್ನು ಕಾವ್ಯದಲ್ಲಿ ಹೇಳುತ್ತಿದ್ದ ಪರಿ ಇಷ್ಟವಾಗುತ್ತದೆ ಎಂದರು.

ಇನ್ನು, ಕಾರ್ಯಕ್ರಮದಲ್ಲಿ ಕಿರಂ ಶಿಷ್ಯರು ಹಾಗೂ ಒಡನಾಡಿಗಳು ಪ್ರೊ.ಕಿ.ರಂ.ನಾಗರಾಜ ನೆನಪಿನ ಕವಿಗೋಷ್ಠಿಯನ್ನು ನಡೆಸಿದರು ಹಾಗೂ ಸಮಾರಂಭದಲ್ಲಿ ಪ್ರಜ್ಞಾ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಾ.ಆರ್.ಕೆ.ನಲ್ಲೂರು ಪ್ರಸಾದ್, ಕಸಾಪದ ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ ಹಾಗೂ ಕವಿ ಪ್ರೊ.ಎಲ್.ಎನ್.ಮುಕುಂದರಾಜು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News