ಇಂಗ್ಲಿಷ್ ಶಬ್ದಗಳು ಕನ್ನಡದಲ್ಲಿ ಬೇಡ: ನಿಘಂಟು ತಜ್ಞ ಜಿ.ವೆಂಕಟಸುಬ್ಬಯ್ಯ

Update: 2018-12-25 16:58 GMT

ಬೆಂಗಳೂರು, ಡಿ.25: ಕನ್ನಡ ಭಾಷೆಯ ಜೊತೆಗೆ ಇಂಗ್ಲಿಷ್ ಶಬ್ದಗಳನ್ನು ಸೇರಿಸುವುದಕ್ಕೆ ನನ್ನ ವಿರೋಧವಿದೆ ಎಂದು ನಿಘಂಟು ತಜ್ಞ ಜಿ.ವೆಂಕಟಸುಬ್ಬಯ್ಯ ಹೇಳಿದರು.

ಮಂಗಳವಾರ ಇಲ್ಲಿನ ಜಯನಗರದ ಜಿ.ವಿ.ಜನ್ಮಶತಾಬ್ದಿ ಕಲಾ ಮಂದಿರದಲ್ಲಿ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದು, ‘ಭಾಷಾ ಸಮ್ಮಾನ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಕನ್ನಡ ಭಾಷೆಯ ಪ್ರಯೋಗದಲ್ಲಿ ಸಾಕಷ್ಟು ಸ್ಥಿತ್ಯಂತರಗಳು ಆಗುತ್ತಿವೆ. ಯುವ ಬರಹಗಾರರ ಬರಹದಲ್ಲಿ ಅದನ್ನು ಗಮನಿಸುತ್ತಿದ್ದೇನೆ. ಕನ್ನಡವನ್ನೇ ಮತ್ತಷ್ಟು ಪಕ್ವವಾಗಿ ಬಳಸಬೇಕು. ಆದರೆ, ಈ ಭಾಷೆಯ ನಡುವೆ ಇಂಗ್ಲಿಷ್ ಶಬ್ದಗಳನ್ನು ಸೇರಿಸುವುದಕ್ಕೆ ನನ್ನ ವಿರೋಧವಿದೆ ಎಂದು ಹೇಳಿದರು.

ಕನ್ನಡವನ್ನು ನಿಮ್ಮ ಕೈಗಿಟ್ಟಿದ್ದೇನೆ, ಕಾಪಾಡಿಕೊಂಡು ಹೋಗಿ ಎಂದು ಗುರುಗಳಾಗಿದ್ದ ಬಿ.ಎಂ.ಶ್ರೀಕಂಠಯ್ಯ ಹೇಳಿದ್ದರು. ಅದರಂತೆಯೇ ನಿಘಂಟು ಸಿದ್ಧಪಡಿಸುವಾಗ ಗುರುಗಳ ಜತೆ ಕೆಲಸ ಮಾಡಿದೆ. ಪ್ರತಿಯೊಂದು ಶಬ್ದಕ್ಕೂ ಪಾರಿಭಾಷಿಕ ಶಬ್ದ, ಜನರ ಆಡುಭಾಷೆಯ ನುಡಿ ಹುಡುಕಬೇಕಿತ್ತು. ಇದು ಬಹಳ ದೀರ್ಘಕಾಲ ತೆಗೆದುಕೊಂಡಿತು. ಆಗ ಗುರುಗಳು ಇದು ನನ್ನ ಕಾಲದಲ್ಲಿ ಮುಗಿಯುವುದಿಲ್ಲ. ನೀವು ಮುಂದುವರಿಸಿ ಎಂದರು. ಹಾಗೆ ಮುಂದುವರಿಸಿದೆ. ಆ ಪುಣ್ಯದ ಫಲವೇ ಈ ಗೌರವ ಎಂದು ವೆಂಕಟಸುಬ್ಬಯ್ಯ ನುಡಿದರು.

ಚಳವಳಿ: ಮಕ್ಕಳಿಗೆ ಶಾಲಾ ಹಂತದಲ್ಲಿಯೇ ಸರಿಯಾಗಿ ಭಾಷೆಯನ್ನು ಕಲಿಸುವ ಕೆಲಸ ಆಗಬೇಕು. ಅದಕ್ಕಾಗಿ ಸರಿಗನ್ನಡ ಚಳವಳಿ ಮಾಡಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ, ಕಾರ್ಯದರ್ಶಿ ಕೆ.ಶ್ರೀನಿವಾಸರಾವ್, ಸಾಹಿತಿ ಹಂಪ ನಾಗರಾಜಯ್ಯ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News