ಮೇಲ್ಸೇತುವೆ ದುರಸ್ಥಿ ಕಾರ್ಯ ಹಿನ್ನೆಲೆ: ವಾಹನ ಸಂಚಾರ ನಿಷೇಧ

Update: 2018-12-25 17:06 GMT

ಬೆಂಗಳೂರು, ಡಿ.25: ನಗರದ ಕೆ.ಆರ್.ಮಾರುಕಟ್ಟೆ ವ್ಯಾಪ್ತಿಯ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ ದುರಸ್ಥಿ ಕಾರ್ಯ ಹಿನ್ನೆಲೆ ಡಿ.28ರಿಂದ ಮೇಲ್ಸೇತುವೆಯಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಜ.15ರವರೆಗೆ ಕಾಮಗಾರಿಯನ್ನು ನಡೆಸಲು ಬಿಬಿಎಂಪಿ ನಿರ್ಧರಿಸಿದ್ದು, ಹಾಗಾಗಿ, ಮೈಸೂರು ರಸ್ತೆಯ ಮೇಲ್ಸೇತುವೆಯಲ್ಲಿ ಸಾಗುವವರು ಇನ್ನು ಮುಂದೆ ಪರ್ಯಾಯ ರಸ್ತೆಗಳನ್ನು ಆಶ್ರಯಿಸಬೇಕಿದೆ.

ಕಳೆದ ವರ್ಷದಲ್ಲಿ ಈ ಮೇಲ್ಸೇತುವೆಗೆ ರಸ್ತೆ ಡಾಂಬರೀಕರಣ ಮಾಡಲಾಗಿತ್ತು. ಆದರೆ, ಕೆಲವೇ ತಿಂಗಳುಗಳಲ್ಲಿ ಡಾಂಬರೀಕರಣ ಕಿತ್ತು ಬಂದು ರಸ್ತೆ ಗುಣಮಟ್ಟದ ಬಗ್ಗೆ ಶಂಕೆ ಉಂಟಾಗಿತ್ತು. ಮಳೆಗಾಲದಲ್ಲಿ ಇಡೀ ಮೇಲ್ಸೇತುವೆಯ ರಸ್ತೆ ಸಂಪೂರ್ಣವಾಗಿ ಹಾಳಾಗಿತ್ತು. ಎಚ್ಚೆತ್ತುಕೊಂಡ ಬಿಬಿಎಂಪಿ, ಸೇತುವೆ ಮೇಲೆ ಬಿದ್ದಿದ್ದ ರಸ್ತೆ ಗುಂಡಿಗಳನ್ನು ಮುಚ್ಚಿ ತೇಪೆ ಹಾಕಿತ್ತು.

ಸುಮಾರು 2.64 ಕಿ.ಮೀ ಉದ್ದವಿರುವ ಮೇಲ್ಸೇತುವೆಯ ಸಂಪೂರ್ಣ ದುರಸ್ಥಿಗಾಗಿ 4.30 ಕೋಟಿ ಅಂದಾಜು ವೆಚ್ಚ ಮಾಡಲಾಗಿದೆ. ನಾಳೆಯಿಂದ ಕಾಮಗಾರಿ ಆರಂಭವಾಗಬೇಕಿತ್ತು. ಆದರೆ, ಬದಲಿ ಮಾರ್ಗದ ಬಗ್ಗೆ ಪೊಲೀಸರು ಕ್ರಮಕೈಗೊಳ್ಳದ ಕಾರಣ ಡಿ. 28 ಅಥವಾ 29 ರಿಂದ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News