ಬ್ರಾಂಚ್ ಬದಲಿಸಿದ ವಿಚಾರ: ವಿಶ್ವೇಶ್ವರಯ್ಯ ತಾಂತ್ರಿಕ ವಿವಿಗೆ ಹೈಕೋರ್ಟ್ ತುರ್ತು ನೋಟಿಸ್

Update: 2018-12-28 16:51 GMT

ಬೆಂಗಳೂರು, ಡಿ.28: ಇಂಜಿನಿಯರಿಂಗ್ ಕೋರ್ಸ್‌ನ 3ನೇ ಸೆಮಿಸ್ಟರ್‌ನಲ್ಲಿ ಬ್ರಾಂಚ್ ಬದಲಿಸಿದ ವಿದ್ಯಾರ್ಥಿಗಳ ಅಂತಿಮ ಪರೀಕ್ಷೆ ವಿಚಾರದಲ್ಲಿ ತಟಸ್ಥ ಧೋರಣೆ ತಳೆದಿರುವ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಗೆ ಹೈಕೋರ್ಟ್ ತುರ್ತು ನೋಟಿಸ್ ಜಾರಿಗೊಳಿಸಿದೆ.

ಈ ಕುರಿತಂತೆ ಬೆಂಗಳೂರಿನ ಎಂ.ಎಸ್. ರಾಮಯ್ಯ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯ ಬಿ.ಇ 3ನೆ ಸೆಮಿಸ್ಟರ್ ವಿದ್ಯಾರ್ಥಿ ಬಿ. ಸಾತ್ವಿಕ್ ಸೇರಿ ವಿವಿಧ ವಿಭಾಗಗಳ 14 ವಿದ್ಯಾರ್ಥಿಗಳು ಸಲ್ಲಿಸಿದ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ. ಬಿ. ವೀರಪ್ಪ ಅವರಿದ್ದ ನ್ಯಾಯಪೀಠ, ಅರ್ಜಿಗೆ ಸಂಬಂಧಿಸಿದಂತೆ ತಾಂತ್ರಿಕ ವಿವಿಗೆ ತುರ್ತು ನೋಟಿಸ್ ಜಾರಿಗೆ ಆದೇಶಿಸಿ ವಿಚಾರಣೆ ಮುಂದೂಡಿತು. ಅದೇ ರೀತಿ ಅರ್ಜಿಯ ಅಂತಿಮ ಇತ್ಯರ್ಥಕ್ಕೊಳಪಡುವಂತೆ ಬ್ರಾಂಚ್ ಬದಲಿಸಿದ ವಿದ್ಯಾರ್ಥಿಗಳಿಗೆ ಇದೇ ಡಿ.31ರಿಂದ ಆರಂಭಗೊಳ್ಳುತ್ತಿರುವ 3ನೇ ಸೆಮಿಸ್ಟರ್‌ನ ಅಂತಿಮ ಪರೀಕ್ಷೆಗೆ ಅವರು ಬದಲಾಯಿಸಿಕೊಂಡಿರುವ ಬ್ರಾಂಚ್‌ನ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆಯೂ ನ್ಯಾಯಪೀಠ ವಿವಿಗೆ ನಿರ್ದೇಶನ ನೀಡಿತು.

ವಿಚಾರಣೆ ವೇಳೆ ವಿದ್ಯಾರ್ಥಿಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ಪಿ.ಪಿ. ಹೆಗ್ಡೆ, ಇಂಜಿನಿಯರಿಂಗ್ ಕೋರ್ಸ್‌ನ 3ನೇ ಸೆಮಿಸ್ಟರ್‌ನಲ್ಲಿ ಬ್ರಾಂಚ್ ಬದಲಿಸಿಕೊಳ್ಳಲು ಅವಕಾಶವಿದೆ. ಅದರಂತೆ 2017ರಲ್ಲಿ ಇನ್‌ಫಾರ್ಮೇಷನ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ಬ್ರಾಂಚ್ ಆಯ್ಕೆ ಮಾಡಿಕೊಂಡಿದ್ದ ಅರ್ಜಿದಾರ ವಿದ್ಯಾರ್ಥಿ 3ನೇ ಸೆಮಿಸ್ಟರ್‌ನಲ್ಲಿ ಅದನ್ನು ಬದಲಿಸಿಕೊಂಡು ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ಬ್ರಾಂಚ್ ಆಯ್ಕೆ ಮಾಡಿಕೊಂಡಿದ್ದಾರೆ. ಇದಕ್ಕೆ ಕಾಲೇಜು ಒಪ್ಪಿಗೆ ನೀಡಿದೆ. 2018ರ ಆಗಸ್ಟ್ 30ರಿಂದ 3ನೇ ಸೆಮಿಸ್ಟರ್ ತರಗತಿಗಳು ಆರಂಭಗೊಂಡಿವೆ. ನಿಗದಿತ ಶುಲ್ಕ ಪಾವತಿಸಿ ಬದಲಾಯಿಸಿಕೊಂಡ ಬ್ರಾಂಚ್‌ನ 3ನೇ ಸೆಮಿಸ್ಟರ್‌ನ ಎಲ್ಲ ಥಿಯರಿ, ಪ್ರಾಕ್ಟಿಕಲ್ ಮತ್ತು ಇಂಟರ್‌ನಲ್ ಅಸೆಸ್‌ಮೆಂಟ್ ಪರೀಕ್ಷೆಗಳಿಗೆ ಹಾಜರಾಗಿದ್ದಾರೆ.

ಬ್ರಾಂಚ್ ಬದಲಿಸಿದ್ದರ ಬಗ್ಗೆ ಕಾಲೇಜು ವಿವಿಗೆ ಅಗತ್ಯ ಮಾಹಿತಿ ಸಹ ರವಾನಿಸಿದೆ. ಆದರೆ, ಅಂತಿಮ ಪರೀಕ್ಷೆಗಳು ಡಿ.31ರಂದು ಆರಂಭಗೊಳ್ಳಲಿದ್ದು, ಇಲ್ಲಿವರೆಗೆ ವಿವಿ ಏನನ್ನೂ ಹೇಳಿಲ್ಲ. ಹಾಗಾಗಿ, ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಆತಂಕಗೊಂಡಿದ್ದಾರೆ. ಬ್ರಾಂಚ್ ಬದಲಿಸಲು ವಿದ್ಯಾರ್ಥಿಗಳಿಗೆ ಅನುಮತಿ ಕೊಡಲು ವಿವಿಗೆ ನಿರ್ದೇಶನ ನೀಡುವಂತೆ ಕೋರಿದರು. ಅಲ್ಲದೇ ಹೈಕೋರ್ಟ್ ಮೆಟ್ಟಿಲೇರಿರುವ ಬ್ರಾಂಚ್ ಬದಲಿಸಿರುವ ಇತರ ವಿಭಾಗಗಳ ವಿದ್ಯಾರ್ಥಿಗಳ ಕೋರಿಕೆಯೂ ಇದೆ ಆಗಿದೆ ಎಂದು ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, 3ನೇ ಸೆಮಿಸ್ಟರ್‌ನಲ್ಲಿ ಬ್ರಾಂಚ್ ಬದಲಿಸಲು ಅವಕಾಶವಿರುವ ಬಗ್ಗೆ ನಿರ್ದಿಷ್ಟ ಮಾರ್ಗಸೂಚಿಗಳೇನಾದರೂ ಇದ್ದರೆ ತೋರಿಸಿ ಎಂದು ಅರ್ಜಿದಾರ ಪರ ವಕೀಲರನ್ನು ಪ್ರಶ್ನಿಸಿದರು. ಇದಕ್ಕೆ ‘ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ’ಯ (ಎಐಸಿಇಟಿ) ಮಾರ್ಗಸೂಚಿಗಳನ್ನು ವಕೀಲರು ನ್ಯಾಯಪೀಠಕ್ಕೆ ಸಲ್ಲಿಸಿದರು. ಎಐಸಿಇಟಿ ಮಾರ್ಗಸೂಚಿಗಳನ್ನು ಪರಿಗಣಿಸಿದ ಹಾಗೂ ವಕೀಲರ ವಾದವನ್ನು ಮಾನ್ಯ ಮಾಡಿದ ನ್ಯಾಯಪೀಠ, ಅರ್ಜಿಯ ಅಂತಿಮ ಇತ್ಯರ್ಥಕ್ಕೊಳಪಡುವಂತೆ ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆ ಬರೆಯಲು ಅನುಮತಿ ನೀಡುವಂತೆ ವಿವಿಗೆ ನಿರ್ದೇಶನ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News