ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿಗೆ ಅಂತಿಮ ನಮನ

Update: 2018-12-29 12:23 GMT

ಬೆಂಗಳೂರು, ಡಿ.29: ಅನಾರೋಗ್ಯದಿಂದ ಹೈದರಾಬಾದ್‌ನಲ್ಲಿ ಮೃತಪಟ್ಟಿರುವ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರ ಪಾರ್ಥಿವ ಶರೀರಕ್ಕೆ ಗಣ್ಯರು ಅಂತಿಮ ನಮನ ಸಲ್ಲಿಸಿದರು.

ಶನಿವಾರ ಹೈದರಾಬಾದ್‌ನಿಂದ ವಿಶೇಷ ವಿಮಾನದ ಮೂಲಕ ಮೃತದೇಹವನ್ನು ಮಧ್ಯಾಹ್ನ 1:15 ಸುಮಾರಿಗೆ ದೇವನಹಳ್ಳಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಗಿದ್ದು, ಅಲ್ಲಿಂದ ಯಲಹಂಕದ ಸಶಸ್ತ್ರ ಪೊಲೀಸ್ ತರಬೇತಿ ಕೇಂದ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು.

ಗೃಹ ಸಚಿವ ಎಂ.ಬಿ.ಪಾಟೀಲ್, ರಾಜ್ಯ ಪೊಲೀಸ್ ಮಹಾನಿರ್ದೇಶಕಿ ಎನ್.ನೀಲಮಣಿ ರಾಜು, ಹಿರಿಯ ಪೊಲೀಸ್ ಅಧಿಕಾರಿಗಳಾದ ಕಿಶೋರ್ ಚಂದ್ರ, ಎಂಎನ್ ರೆಡ್ಡಿ, ಎ.ಎಂ.ಪ್ರಸಾದ್, ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ(ಎಡಿಜಿಪಿ) ಕಮಲ್‌ ಪಂತ್, ನಿವೃತ್ತ ಡಿಜಿಪಿಗಳಾದ ಆರ್.ಕೆ.ದತ್ತಾ, ಶಂಕರ್ ಬಿದರಿ ಸೇರಿ ಹಿರಿಯ ಅಧಿಕಾರಿಗಳು, ಸಂಬಂಧಿಕರು, ಸಾರ್ವಜನಿಕರು ಅಂತಿಮ ನಮನ ಸಲ್ಲಿಸಿದರು.

ಇಂದು ರಾತ್ರಿ 8:15 ಸುಮಾರಿಗೆ ಯಲಹಂಕದಿಂದ ವಿಮಾನ ನಿಲ್ದಾಣಕ್ಕೆ ರಸ್ತೆ ಮಾರ್ಗವಾಗಿ ಕೊಂಡೊಯ್ದು, ವಿಮಾನದಲ್ಲಿ ಮಂಗಳೂರಿಗೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುವುದು ಎಂದು ಮೂಲಗಳು ತಿಳಿಸಿವೆ.

ವಿಮಾನ ನಿಲ್ದಾಣದಲ್ಲಿ ಅಂತಿಮ ನಮನಕ್ಕೆ ವ್ಯವಸ್ಥೆ

ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಅವರ ಪಾರ್ಥಿವ ಶರೀರವನ್ನು ಶನಿವಾರ ರಾತ್ರಿ ಮಂಗಳೂರು ವಿಮಾನ ನಿಲ್ದಾಣಕ್ಕೆ ತರಲಾಗುತ್ತಿದ್ದು, ಮಂಗಳೂರು ನಗರ ಕಮಿಷನರೇಟ್ ವತಿಯಿಂದ ಭಾವಪೂರ್ವ ಶ್ರದ್ಧಾಂಜಲಿ ಸಲ್ಲಿಸಲಾಗುವುದು. ಈ ಸಮಯದಲ್ಲಿ ನಗರದ ಪ್ರಮುಖರಿಗೆ ಮತ್ತು ಸಾರ್ವಜನಿಕರಿಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಮಧುಕರ್ ಶೆಟ್ಟಿ ಪಾರ್ಥಿವ ಶರೀರಕ್ಕೆ ರಾಷ್ಟ್ರಧ್ವಜ ಹೊದಿಸಿ, ಪಾರ್ಥಿವ ಶರೀರದ ಎಡಭಾಗ ಅವರ ಸಮವಸ್ತ್ರ, ಟೋಪಿ, ಪೊಲೀಸ್ ಬೆಲ್ಟ್, ಲಾಠಿ ಇಟ್ಟು ಗೌರವ ಸಲ್ಲಿಸಲಾಯಿತು.

ಇಷ್ಟವಾದ ಹಾಡು ಹಾಡಿದರು

ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರಿಗೆ ಇಷ್ಟದ ಹಾಡು ಹಾಡುವ ಮೂಲಕ ಸಹೋದ್ಯೋಗಿಗಳು ಗೀತ ನಮನ ಸಲ್ಲಿಸಿದರು.

ಹೈದರಾಬಾದ್‌ನಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನದ ಸಂದರ್ಭದಲ್ಲಿ ಅವರ ಸಹೋದ್ಯೋಗಿ ಪವನ್ ಕುಮಾರ್ ಅವರು ಮಧುಕರ್ ಅವರ ಇಷ್ಟವಾದ ಹಿಂದಿ ಹಾಡೊಂದನ್ನು ಹಾಡಿ ಕಣ್ಣೀರಿನ ವಿದಾಯ ಹೇಳಿದರು, ಬಿಕ್ಕಿ ಬಿಕ್ಕಿ ಅಳುತ್ತಾ ಹೇಳುತ್ತಿದ್ದ ಪವನ್ ಹಾಡಿಗೆ ಅಂತಿಮ ದರ್ಶನ ಪಡೆಯಲು ಬಂದಿದ್ದ ಜನಸಾಗರವೇ ದುಃಖದ ಕಡಲಲ್ಲಿ ಮುಳುಗಿತ್ತು. ಪವನ್‌ ಕುಮಾರ್ ಅವರು 2009ರ ಬ್ಯಾಚ್‌ನಲ್ಲಿ ಮಧುಕರ್ ಶೆಟ್ಟಿ ಅವರ ಜೊತೆಯಾಗಿದ್ದರು.

ರವಿವಾರ ಸರಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ

ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರ ಅಂತ್ಯಕ್ರಿಯೆ ಕುಂದಾಪುರ ತಾಲೂಕಿನ ಯಡ್ಡಾಡಿಯಲ್ಲಿ ರವಿವಾರ ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ರಾತ್ರಿ ಬೆಂಗಳೂರು ವಿಮಾನ ನಿಲ್ದಾಣದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ತರಲಾಗುವುದು. ಬಳಿಕ ಹುಟ್ಟೂರು ಯಡ್ಡಾಡಿಗೆ ತಂದು ದರ್ಶನಕ್ಕೆ ಇಡಲಾಗುವುದು. ರವಿವಾರ ಬೆಳಗ್ಗೆ 10 ಗಂಟೆಗೆ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಜರುಗಲಿದೆ

-ಎಂ.ಬಿ.ಪಾಟೀಲ್, ಗೃಹ ಸಚಿವ

ಅವರ ಸೇವೆ ಅಭೂತಪೂರ್ವ

ಮಧುಕರ್ ಶೆಟ್ಟಿ ನಿಧನ ನನಗೆ ಅಘಾತ ತಂದಿದೆ. ಅವರ ಕುಟುಂಬಕ್ಕೆ ಶಾಂತಿ ಸಿಗಲಿ. ಒಬ್ಬ ದಕ್ಷ ಅಧಿಕಾರಿ ಈ ರೀತಿ ಸಿಗಲು ಸಾಧ್ಯವಿಲ್ಲ. ಅವರು ಚಿಕ್ಕಮಗಳೂರಿನಲ್ಲಿ ನೀಡಿದ ಸೇವೆ ಅಭೂತಪೂರ್ವ.

-ಅಣ್ಣಾಮಲೈ, ಡಿಸಿಪಿ, ನಗರದ ದಕ್ಷಿಣ ವಿಭಾಗ

ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ಅತ್ಯುತ್ತಮ ಅಧಿಕಾರಿಯಾಗಿದ್ದ ಮಧುಕರ ಶೆಟ್ಟಿ ಅವರು ನೇರ ನಡೆ ನುಡಿಗಳಿಂದ ಜನಪ್ರಿಯರಾಗಿದ್ದರು. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಕುಟುಂಬದವರಿಗೆ ಆಘಾತ ಸಹಿಸುವ ಶಕ್ತಿ ನೀಡಲಿ

-ಎನ್.ನೀಲಮಣಿ ರಾಜು, ಪೊಲೀಸ್ ಮಹಾ ನಿರ್ದೇಶಕಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News