ಮಧುಕರ್ ಶೆಟ್ಟಿ ಲೋಕಾಯುಕ್ತ ಚರಿತ್ರೆಯಲ್ಲೇ ದಕ್ಷ ಅಧಿಕಾರಿ: ಸಂತೋಷ್ ಹೆಗ್ಡೆ

Update: 2018-12-29 16:16 GMT

ಬೆಂಗಳೂರು, ಡಿ.29: ಲೋಕಾಯುಕ್ತ ಚರಿತ್ರೆಯಲ್ಲೇ ಮಧುಕರ್ ಶೆಟ್ಟಿ ಅವರು ಒಬ್ಬ ಉತ್ತಮ ಪೊಲೀಸ್ ಅಧಿಕಾರಿ ಎಂದು ಲೋಕಾಯುಕ್ತದ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧುಕರ್ ನಿಷ್ಠಾವಂತ, ದಕ್ಷ ಅಧಿಕಾರಿ. ಯಾವ ರಾಜಕಾರಣಿಗೂ ಅಥವಾ ಯಾವುದೇ ವ್ಯಕ್ತಿಗಳಿಗೂ ಅವರು ಹೆದರದೇ ಕೆಲಸ ನಿರ್ವಹಿಸುತ್ತಿದ್ದರು ಎಂದರು.

ಗಣಿ ವಿಚಾರವೇ ಅಲ್ಲ, ಬದಲಾಗಿ, ಕೆಂಪೇಗೌಡ ವಿಮಾನ ನಿಲ್ದಾಣ ಭೂ-ಕಬಳಿಕೆ ಮಾಡಿಕೊಂಡ ಹಿರಿಯ ರಾಜಕಾರಣಿಗಳನ್ನು ವಿಚಾರಣೆ ಮಾಡಿ ಅವರನ್ನು ಹಾಗೂ ಅವರ ಪುತ್ರಿಯನ್ನು ಜೈಲಿಗೆ ಕಳುಹಿಸಿದ್ದರು. ಯಾರಿಗೂ ಹೆದರುವ ವ್ಯಕ್ತಿಯಲ್ಲ, ರಾತ್ರಿ ಹಗಲು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ನೆನೆದರು.

ಸುಮಾರು 750 ಕ್ಕೂ ಹೆಚ್ಚು ಭ್ರಷ್ಟರನ್ನು ವಿಚಾರಣೆ ಮಾಡಿ ಕೋರ್ಟ್ ಮೆಟ್ಟಿಲು ಏರಿಸಿದ ಅಧಿಕಾರಿಗಳಲ್ಲಿ ಮಧುಕರ್ ಅವರು ಒಬ್ಬರು. ಆಡಳಿತದಲ್ಲಿ ಇರುವ ನಾಯಕರು ತಮಗೆ ಬೇಕಾದ ಅಧಿಕಾರಿಗಳನ್ನು ಮಾತ್ರ ವಿಚಾರಣೆ ಹಾಗೂ ಇತರೇ ಹುದ್ದೆಯಲ್ಲಿ ಇಡುತ್ತಿದ್ದರು. ಮಧುಕರ್ ಅವರನ್ನು ಹಲವಾರು ಬಾರಿ ವರ್ಗಾವಣೆ ಮಾಡಿ ಅವರನ್ನು ವಿಚಾರಣೆ ವಿಭಾಗದಿಂದ ದೂರವಿಟ್ಟಿದ್ದರು ಎಂದರು.

ಮಧುಕರ್ ಶೆಟ್ಟಿ ಅವರಂತಹ ದಕ್ಷ ಅಧಿಕಾರಿಗಳು ನನ್ನ ಅವಧಿಯಲ್ಲಿ ಸಿಕ್ಕಿದ್ದು ನನ್ನ ಭಾಗ್ಯ. ಅವರು ಲೋಕಾಯುಕ್ತದಲ್ಲಿ ಇದ್ದಿದ್ದು ಕೇವಲ 2 ವರ್ಷ ಮಾತ್ರ. ಆದರೆ, ಈ ಇಲಾಖೆಯಲ್ಲಿ ಅವರ ಕೊಡುಗೆ ಅಪಾರ ಎಂದು ನೆನಪು ಮಾಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News