ಅಮೆರಿಕನ್ ತುಳು ಜಾನಪದ ವಿದ್ವಾಂಸ ಪ್ರೊ. ಪೀಟರ್ ಜೆ. ಕ್ಲಾಸ್ ನಿಧನ
ಉಡುಪಿ, ಡಿ.30: ಅಮೆರಿಕದ ಕ್ಯಾಲಿಫೋರ್ನಿಯ ವಿವಿಯ ಮಾನವಶಾಸ್ತ್ರ ಮತ್ತು ಜಾನಪದ ವಿದ್ವಾಂಸ ಹಾಗೂ ಕರಾವಳಿಯ ತುಳು ಭಾಷೆ ಹಾಗೂ ಪಾಡ್ದನಗಳನ್ನು ವಿಶೇಷವಾಗಿ ಅಭ್ಯಸಿಸಿ ಪರಿಣಿತಿಯನ್ನು ಪಡೆದಿದ್ದ ಪ್ರೊ. ಪೀಟರ್ ಜೆ. ಕ್ಲಾಸ್ (76) ಶುಕ್ರವಾರ ನಿಧನರಾಗಿದ್ದಾರೆ.
ಪೀಟರ್ ಕ್ಲಾಸ್ ಅವರು ತುಳು ಸಂಪನ್ಮೂಲಗಳ ಹಾಗೂ ಕರಾವಳಿ ಕರ್ನಾಟಕದ ಜನಜೀವನದ ಬಗ್ಗೆ ವಿಶೇಷವಾಗಿ 1970ರಲ್ಲಿ ಡ್ಯೂಕ್ ವಿವಿ ಯಿಂದ ಡಾಕ್ಟರೇಟ್ ಪದವಿಯನ್ನು ಪಡೆದರು. 1967ರಲ್ಲಿ ಓರ್ವ ಸಂಶೋಧಕನಾಗಿ ಭಾರತಕ್ಕೆ ಆಗಮಿಸಿದ ಅವರು ತುಳುನಾಡಿನ ಪ್ರಕೃತಿ, ಇಲ್ಲಿಯ ಜನರ ಜೀವನ ಕ್ರಮದಿಂದ ಆಕರ್ಷಿಕರಾಗಿ ಇಲ್ಲಿಯೇ ತುಳು ಭಾಷೆ ಹಾಗೂ ಇಲ್ಲಿನ ಪಾಡ್ದನಗಳ ಸಂಶೋಧನೆಗೆ ನಿರ್ಧರಿಸಿದರು.
ಸಿರಿ ಆವೇಶದ ಹಲವು ಆಯಾಮಗಳನ್ನು, ತುಳುನಾಡಿನ ಭಾಷೆ-ಸಂಸ್ಕೃತಿಯ ಚಿತ್ರಣಗಳ ಅಧ್ಯಯನ ಹಾಗೂ ದಾಖಲೀಕರಣ ನಡೆಸಿದರು. ಪೀಟರ್ ಜೆ. ಕ್ಲಾಸ್ ಉಡುಪಿಗೆ ಬಂದು ಯಕ್ಷಗಾನದ ಹಲವು ಆಯಾಮಗಳನ್ನು ತಿಳಿಯಲು ಹಿರಿಯಡ್ಕದ ಗೋಪಾಲರಾವ್‌ರ ಶಿಷ್ಯರಾದರು. ಸಿರಿ-ಪರಂಪರೆಯ ಬಗ್ಗೆ ಮೌಖಿಕ ಕಾವ್ಯಗಳತ್ತ ಹಾಗೂ ಪಾಡ್ದನಗಳ ಕುರಿತೂ ವಿಶೇಷ ಆಸಕ್ತಿ ತೋರಿಸಿದರು. ಇಲ್ಲಿ ತಾವಿದ್ದ ಕೊನೆಯ ದಿನಗಳಲ್ಲಿ ಕನ್ನಡ ಹಾಗೂ ಆಂಧ್ರ ಪ್ರದೇಶದ ಜನಪದ ಮೌಖಿಕ ಕಾವ್ಯಗ ದಾಖಲೀಕರಣವನ್ನು ನಡೆಸಿದರು.
1984ರಲ್ಲಿ ಪ್ರೊ. ಕು.ಶಿ. ಹರಿದಾಸ ಭಟ್ಟರ ಮೂಲಕ ಕ್ಷೇತ್ರಕಾರ್ಯಕ್ಕೆ ಬಂದ ಪೀಟರ್ ಕ್ಲಾಸ್, ಎಸ್.ಎ.ಕೃಷ್ಣಯ್ಯ ಜೊತೆಗೂಡಿ ವಿಶೇಷ ಅಧ್ಯಯನ ನಡೆಸಿದ್ದರು. ಹಿರಿಯಡ್ಕದ ಕರ್ಗಿ -ಪಯ್ಯು ಇವರಲ್ಲಿನ ಸಿರಿ ಪಠ್ಯ, ನಂದಳಿಕೆ ಅವಳಿ ಸಹೋದರಿಯರಾದ ಕರ್ಗಿ, ಅವರ ಮಕ್ಕಳು, ಓಬ್ಬ ಪಾಣಾರ ಇವರ ಎರುಕೋಲದ ಮೆರವವಣಿಗೆ ಚಿತ್ರಣ, ಕೊರಗ ಜನಸಮುದಾಯದ ಮಾಹಿತಿಗಳು, ಕೆದಿಂಜೆ, ಬೆಳ್ಮಣ್ಣು, ನಿಡ್ಗಲ್-ಹಿರಿಯಡ್ಕ, ಹೀಗೆ ಬಹುತೇಕ ಸಿರಿ ಆಲಡೆಗಳನ್ನು ಶೋಧನೆ ನಡೆಸಿದ್ದರು.