ಅಂಬೇಡ್ಕರ್ ದಾರಿಯಲ್ಲಿ ಸಾಗುವುದೊಂದೆ ನಮ್ಮ ಕರ್ತವ್ಯವಾಗಲಿ: ಎಂ.ನಂಜುಂಡಸ್ವಾಮಿ

Update: 2019-01-01 12:42 GMT

ಬೆಂಗಳೂರು, ಜ.1: ದಲಿತ ಸಮುದಾಯ ಅವರಿವರ ಮರ್ಜಿಗೆ ಕಾಯದೆ, ಡಾ.ಬಿ.ಆರ್.ಅಂಬೇಡ್ಕರ್ ನಡೆದ ದಾರಿಯಲ್ಲಿ ಸಾಗುತ್ತಾ ಸ್ವಾಭಿಮಾನಿಗಳಾಗಿ ಬದುಕೋಣವೆಂದು ಹೆಚ್ಚುವರಿ ಪೊಲೀಸ್ ಆಯುಕ್ತ ಎಂ.ನಂಜುಂಡಸ್ವಾಮಿ ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಆಯೋಜಿಸಿದ 201ನೇ ಭೀಮಾ ಕೋರೆಗಾಂವ್ ಜಯೋತ್ಯುತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವೆಲ್ಲರೂ ಜಾಗೃತರಾಗಿ ಬದುಕುವುದೆ ಅಂಬೇಡ್ಕರ್‌ಗೆ ಸಲ್ಲಿಸುವ ಗೌರವವಾಗಿದೆ ಎಂದರು.

ಸತ್ಯ, ಸ್ವಾತಂತ್ರ ಹಾಗೂ ಹಕ್ಕಿಗಾಗಿ ಹೋರಾಟ ನಿರಂತರವಾಗಿರಬೇಕು. ಇತಿಹಾಸದಲ್ಲಿ ನಡೆದಿರುವ ನೈಜ ಘಟನೆಗಳನ್ನು ದಾಖಲಿಸುವಂತಹ ಕೆಲಸ ಹೆಚ್ಚಾಗಿ ನಡೆಯಬೇಕಾಗಿದೆ. ಆ ನಿಟ್ಟಿನಲ್ಲಿ ಯುವ ಸಮುದಾಯದ ಅಂಬೇಡ್ಕರ್ ಸೇರಿದಂತೆ ಸಮಾಜ ಸುಧಾರಕರ ವ್ಯಕ್ತಿತ್ವವನ್ನು ಅರಿಯಬೇಕಾಗಿದೆ ಎಂದು ಅವರು ಹೇಳಿದರು.

ಸಮತಾ ಸೈನಿಕ ದಳ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಮಾತನಾಡಿ, ದಲಿತ ಸಮುದಾಯದ ಯುವಜನತೆ ಕೋರೆಗಾಂವ್‌ನ ದರ್ಶನವನ್ನು ಮಾಡಬೇಕು. ಕೋರೆಗಾಂವ್‌ನ ರೀತಿಯಲ್ಲಿ ಮುಚ್ಚಿಹೋಗಿರುವ ದಲಿತ ಸಮುದಾಯದ ಹಲವು ಚರಿತ್ರೆಯನ್ನು ಬಾಬಾಸಾಹೇಬರ ರೀತಿಯಲ್ಲಿ ಹುಡುಕಿ ತೆಗೆಯಬೇಕು ಎಂದು ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ಸಂವಹನ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಬಿ.ಪಿ. ಮಹೇಶ್ ಚಂದ್ರಗುರು ಮಾತನಾಡಿ, ಬಾಬಾಸಾಹೇಬರು ಬದುಕಿರುವವರೆಗೂ ಕೋರೆಗಾಂವ್‌ಗೆ ಪ್ರತಿವರ್ಷವು ಕೊರೆಗಾಂವ್ ಯುದ್ಧದಲ್ಲಿ ಮಡಿದ ವೀರರಿಗೆ ಗೌರವ ಸಲ್ಲಿಸಲು ಬರುತ್ತಿದ್ದರು. ಅದೇ ರೀತಿಯಲ್ಲಿ ವರ್ಷದಲ್ಲಿ ಒಮ್ಮೆಯಾದರು ಕೋರೆಂಗಾವ್‌ಗೆ ಭೇಟಿ ಕೊಡಬೇಕೆಂದು ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ್, ಪರಿಶಿಷ್ಟ ಜಾತಿ, ಪಂಗಡದ ಘಟಕದ ವಿಶೇಷಾಧಿಕಾರಿ ಪ್ರೊ.ಎಂ. ನಾರಾಯಣಸ್ವಾಮಿ, ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಎನ್. ಸಂಜೀವ್‌ರಾಜ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News