ಮಕ್ಕಳಲ್ಲಿ ಸೃಜನಶೀಲ ಶಕ್ತಿ ಬೆಳೆಸಿ: ಚಂದ್ರಶೇಖರ್ ಕಂಬಾರ

Update: 2019-01-01 12:43 GMT

ಬೆಂಗಳೂರು, ಜ.1: ಮಕ್ಕಳಲ್ಲಿ ಸೃಜನಶೀಲ ಶಕ್ತಿಯನ್ನು ಸೃಷ್ಟಿಸಿ ದೇಶಕ್ಕೆ ಉಪಯೋಗವಾಗುವ ಪ್ರತಿಭೆಗಳನ್ನು ಬೆಳೆಸಬೇಕೆಂದು ಕೇಂದ್ರ ಸಾಹಿತ್ಯ ಅಕಾಡಮಿ ಅಧ್ಯಕ್ಷ ಡಾ.ಚಂದ್ರಶೇಖರ್ ಕಂಬಾರ ಹೇಳಿದ್ದಾರೆ.

ಮಂಗಳವಾರ ಪೀಣ್ಯದಾಸರಹಳ್ಳಿ ಸಮೀಪ ಹಾವನೂರು ಬಡಾವಣೆಯ ಸೌಂದರ್ಯ ಶಿಕ್ಷಣ ಸಂಸ್ಥೆಯ ರಜತ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಒಳ್ಳೆಯ ಶಿಕ್ಷಣ ಪಡೆದ ಮಕ್ಕಳು ಪ್ರತಿಭಾವಂತರಾಗಿ ಬೇರೆ ದೇಶಕ್ಕೆ ಹೋಗಿ ಸೇವೆ ಮಾಡುವುದಲ್ಲ. ನಮ್ಮಲ್ಲೇ ಇದ್ದು ಸಾಧನೆಯ ಸೇವೆ ಮಾಡಬೇಕು. ಶಿಕ್ಷಣ ಸೇವೆ ಎಷ್ಟು ನೀಡುತ್ತೇವೆಯೋ ಅಷ್ಟು ಸಾರ್ಥಕವಾದ ಸುಖ ದೊರಕುತ್ತದೆ ಎಂದು ಹೇಳಿದರು.

ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಕೀರ್ತನ್‌ಕುಮಾರ್ ಮಾತನಾಡಿ, 1993ರಲ್ಲಿ ಆರಂಭವಾದ ಶಾಲೆಯಲ್ಲಿ 63 ವಿದ್ಯಾರ್ಥಿಗಳಿದ್ದರು. ಇಂದಿಗೆ ಎಲ್ಲರ ಶ್ರಮದಿಂದಾಗಿ ಆ ಸಂಖ್ಯೆ 5 ಸಾವಿರಕ್ಕೆ ಏರಿದೆ. ಗುಣಮಟ್ಟದ ಶಿಕ್ಷಣವೇ ಇದಕ್ಕೆ ಕಾರಣ ಎಂದು ತಿಳಿಸಿದರು. ಮುಖ್ಯಶಿಕ್ಷಕಿ ಚೆನ್ನಮ್ಮ ವರದಿ ಮಂಡಿಸಿದರು.

ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ಶಾಸಕ ಆರ್.ಮಂಜುನಾಥ್, ಸಂಸ್ಥಾಪಕ ಸೌಂದರ್ಯ ಪಿ. ಮಂಜಪ್ಪ, ವ್ಯವಸ್ಥಾಪಕ ನಿರ್ದೇಶಕಿ ಸುನೀತಾ ಪಿ.ಮಂಜಪ್ಪ, ವರುಣ್‌ಕುಮಾರ್, ಪ್ರಾಂಶುಪಾಲ ಸುರೇಶ್ ಸಿ.ಹೆಗಡಿ, ಮುಖ್ಯ ಶಿಕ್ಷಕಿ ಪ್ರಸನ್ನಲಕ್ಷ್ಮಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News