ಲೋಕಸಭಾ ಚುನಾವಣೆ: ಬೆಂಗಳೂರು ಕ್ಷೇತ್ರಗಳ ಹೊಣೆ ರಾಮಲಿಂಗಾರೆಡ್ಡಿ ಹೆಗಲಿಗೆ ?

Update: 2019-01-01 14:33 GMT

 ಬೆಂಗಳೂರು, ಜ.1: ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕೆಂದು ಪಣತೊಟ್ಟಿರುವ ಕಾಂಗ್ರೆಸ್ ಪಕ್ಷವು, ರಾಜಧಾನಿ ಬೆಂಗಳೂರಿನ ವ್ಯಾಪ್ತಿಗೆ ಒಳಪಡುವ ನಾಲ್ಕು ಕ್ಷೇತ್ರಗಳ ಚುನಾವಣಾ ಉಸ್ತುವಾರಿಯನ್ನಾಗಿ ಮಾಜಿ ಸಚಿವ ರಾಮಲಿಂಗಾರೆಡ್ಡಿಯನ್ನು ನೇಮಕ ಮಾಡಲು ಕೆಪಿಸಿಸಿ ಮುಂದಾಗಿದೆ.

ಸಚಿವ ಸಂಪುಟದಲ್ಲಿ ಸ್ಥಾನ ವಂಚಿತರಾಗಿ ಕಾಂಗ್ರೆಸ್ ನಾಯಕತ್ವದ ವಿರುದ್ಧ ಅಸಮಾಧಾನಗೊಂಡಿರುವ ರಾಮಲಿಂಗಾರೆಡ್ಡಿ ಹೆಗಲಿಗೆ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳ ಜವಾಬ್ದಾರಿ ವಹಿಸುವ ಚಿಂತನೆ ಕಾಂಗ್ರೆಸ್ ಪಾಳಯದಲ್ಲಿ ಮೂಡಿ ಬಂದಿದೆ.

ಬೆಂಗಳೂರು ಜಿಲ್ಲೆಯಲ್ಲಿ ತಮ್ಮದೇ ಆದ ಪ್ರಭಾವ ಹಾಗೂ ಹಿಡಿತವನ್ನು ಹೊಂದಿರುವ ರಾಮಲಿಂಗಾರೆಡ್ಡಿಗೆ ಲೋಕಸಭಾ ಚುನಾವಣೆಯ ಹೊಣೆಗಾರಿಕೆ ವಹಿಸುವ ಮೂಲಕ ಅವರಲ್ಲಿರುವ ಅಸಮಾಧಾನ ಶಮನಗೊಳಿಸುವ ರಣತಂತ್ರವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆಯಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್ ಸಿದ್ಧಗೊಳಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಹೊರತುಪಡಿಸಿದರೆ ಉಳಿದ ಮೂರು ಕ್ಷೇತ್ರಗಳಲ್ಲೂ ಬಿಜೆಪಿ ಪಾರುಪತ್ಯವಿದೆ. ಬೆಂಗಳೂರಿನಲ್ಲಿ ಕಾಂಗ್ರೆಸ್ ಬಲ ವೃದ್ಧಿಸಿಕೊಂಡಿದ್ದೆ ಆದಲ್ಲಿ, ರಾಮಲಿಂಗಾರೆಡ್ಡಿ ಸಚಿವ ಸಂಪುಟ ಸೇರ್ಪಡೆ ಸಾಧ್ಯತೆಗಳು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.

ಅಲ್ಲದೆ, ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಬಿಟ್ಟುಕೊಡಲು ನಿರಾಕರಿಸಿದ್ದ ಪರಮೇಶ್ವರ್‌ರನ್ನು ಹಣಿಯಲು ರಾಮಲಿಂಗಾರೆಡ್ಡಿ ಪ್ರಬಲ ಅಸ್ತ್ರವಾಗಿ ಬಳಕೆಯಾಗುವ ಸಾಧ್ಯತೆಗಳಿವೆ. ರಾಮಲಿಂಗಾರೆಡ್ಡಿ ಹೊಸ ವರ್ಷದ ಶುಭಕೋರುವ ನೆಪದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್, ಈ ವಿಚಾರದ ಕುರಿತು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News