ಜ.6ರಂದು 16ನೆ ಚಿತ್ರಸಂತೆ: ದೇಶಾದ್ಯಂತ 1500ಕ್ಕೂ ಹೆಚ್ಚು ಕಲಾವಿದರಿಂದ ಕಲಾಕೃತಿಗಳ ಪ್ರದರ್ಶನ

Update: 2019-01-02 14:21 GMT

ಬೆಂಗಳೂರು, ಜ.2: ಕರ್ನಾಟಕ ಚಿತ್ರಕಲಾ ಪರಿಷತ್ ಪ್ರತಿವರ್ಷ ಆಯೋಜಿಸುವ ದೇಶದ ಅತಿ ದೊಡ್ಡ ಸಾಂಸ್ಕೃತಿಕ ಹಬ್ಬವಾಗಿ ಪ್ರಸಿದ್ಧಿ ಪಡೆದಿರುವ ‘ಚಿತ್ರಸಂತೆ’ ಜ.6ರಂದು ನಗರದ ಕುಮಾರಕೃಪಾ ರಸ್ತೆ ಮತ್ತು ಚಿತ್ರಕಲಾ ಪರಿಷರಿತ್‌ನ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಪರಿಷತ್‌ನ ಅಧ್ಯಕ್ಷ ಬಿ.ಎಲ್.ಶಂಕರ್ ತಿಳಿಸಿದರು.

ಬುಧವಾರ ನಗರದ ಚಿತ್ರಕಲಾ ಪರಿಷತ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚಿತ್ರಸಂತೆಯನ್ನು ಉದ್ಘಾಟಿಸಲಿದ್ದಾರೆ. ಈ ವೇಳೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಡಿ.ಕೆ.ಶಿವಕುಮಾರ್, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ, ಶಾಸಕ ರೋಷನ್ ಬೇಗ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.

ಚಿತ್ರಸಂತೆಯಲ್ಲಿ ಸಾಮಾನ್ಯವಾಗಿ ಮೈಸೂರು ಸಾಂಪ್ರದಾಯಕ ಶೈಲಿ, ತಂಜಾವೂರು ಶೈಲಿ, ರಾಜಸ್ಥಾನಿ ಶೈಲಿ, ಮಧುಬನಿಯ ಶೈಲಿ, ತೈಲ ಮತ್ತು ಜಲವರ್ಣ ಚಿತ್ರಗಳು ಲಭ್ಯವಿರುತ್ತವೆ. ಇದಲ್ಲದೆ ಅಕ್ರಿಲಿಕ್, ಕೊಲಾಝ್ ಮೊದಲಾದ ಪ್ರಕಾರಗಳ ಕಲಾಕೃತಿಗಳ ದೊರೆಯಲಿವೆ. ಕುಂಚ ಅಥವಾ ಪೆನ್ಸಿಲ್‌ಗಳಿಂದ ಕಲಾರಸಿಕರ ಭಾವಚಿತ್ರಗಳನ್ನು ರಚಿಸಿ ಕೊಡುವ ಕಲಾವಿದರಿರುತ್ತಾರೆ. ಇವರ ಕೈಯಿಂದ ಆ ಕ್ಷಣದಲ್ಲಿಯೆ ತಮ್ಮ ಭಾವಚಿತ್ರಗಳನ್ನು ರಚಿಸಿಕೊಳ್ಳಬಹುದು ಎಂದು ಅವರು ಹೇಳಿದರು.

ವಾಹನಗಳ ನಿರ್ಬಂಧ: ಶಿವಾನಂದ ಸರ್ಕಲ್‌ನಿಂದ ವಿಂಡ್ಸರ್ ಮ್ಯಾನರ್, ಕ್ರೆಸೆಂಟ್ ರಸ್ತೆಯ ಸ್ವಲ್ಪಭಾಗದಲ್ಲಿ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತಿದ್ದು, ಲಕ್ಷಾಂತರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಹೀಗಾಗಿ ಕುಮಾರ ಕೃಪಾ ಸೇರಿದಂತೆ ಸುತ್ತಮುತ್ತಲ ರಸ್ತೆಗಳಲ್ಲಿ ಬೆಳಗ್ಗೆ 6ರಿಂದ ರಾತ್ರಿ 9ರವರೆಗೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಅವರು ಹೇಳಿದರು.

ಪೊಲೀಸ್ ಬಿಗಿ ಭದ್ರತೆ: ಚಿತ್ರಸಂತೆಗೆ ಸುಮಾರು 4ಲಕ್ಷ ಮಂದಿ ಆಗಮಿಸುವ ನಿರೀಕ್ಷೆಯಿದ್ದು, ಪೊಲೀಸ್ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಚಿತ್ರಪ್ರದರ್ಶನ ನಡೆಯುವ ಎಲ್ಲ ಕಡೆಗೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜತೆಗೆ ಚಿತ್ರಕಲಾಪರಿಷತ್‌ನ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಅವರು ಹೇಳಿದರು. 

ಜ.5ರಂದು ಚಿತ್ರಕಲಾ ಸಮ್ಮಾನ್ ಪ್ರಶಸ್ತಿ

ಚಿತ್ರಸಂತೆಯ ಅಂಗವಾಗಿ ಜ.5ರಂದು ಬೆಳಗ್ಗೆ 11.30ಕ್ಕೆ ಚಿತ್ರಕಲಾಪರಿಷತ್‌ನ ಆವರಣದಲ್ಲಿ ಗಾಂಧಿ 150-ಕಲಾ ಪ್ರದರ್ಶನ ಮತ್ತು ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಎಚ್.ಕೆ.ಕೇಜರಿವಾಲ್ ಪ್ರಶಸ್ತಿಯನ್ನು ಹಿರಿಯ ಚಿತ್ರಕಲಾವಿದ ಜೆಎಂಎಸ್ ಮಣಿಗೆ, ಡಿ.ದೇವರಾಜ ಅರಸು ಪ್ರಶಸ್ತಿಯನ್ನು ಜೆಸು ರಾವಲ್ ಹಾಗೂ ಎಂ.ಆರ್ಯಮೂರ್ತಿ ಪ್ರಶಸ್ತಿಯನ್ನು ಹಿರಿಯ ಸಾಂಪ್ರದಾಯಿಕ ಚಿತ್ರಕಲಾವಿದ ನೀಲಾ ಪಂಚ್‌ಗೆ ಪ್ರದಾನ ಮಾಡಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಎಂ.ಎಸ್.ಕೃಷ್ಣಾ ಪ್ರದಾನ ಮಾಡಲಿದ್ದಾರೆ. ಈ ವೇಳೆ ಮುಖ್ಯ ಅತಿಥಿಗಳಾಗಿ ರಮೇಶ್ ಅರವಿಂದ್, ಡಾ.ಜಯಮಾಲ ಭಾಗವಹಿಸಲಿದ್ದಾರೆ ಎಂದು ಬಿ.ಎಲ್.ಶಂಕರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News