ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ್ ಅಂತರ್ಜಾಲದ ಅನಕ್ಷರಸ್ಥರೇ ?

Update: 2019-01-02 16:15 GMT

ಉಡುಪಿ, ಜ.2: ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮನು ಬಳಿಗಾರ್ ಅವರು ಅಂತರ್ಜಾಲದ ವಿಷಯದಲ್ಲಿ ಅನಕ್ಷರಸ್ಥರೇ ? ಹೌದು ಅವರೇ ಹೇಳಿಕೊಂಡಂತೆ ಅವರಿಗೆ ‘ಯೂ ಟ್ಯೂಬ್’ ಎಂದರೆ ಏನೆಂದೇ ಗೊತ್ತಿಲ್ಲವಂತೆ. ಅವರು ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಂತೆ.....

ಇಂದು ಪ್ರಾಥಮಿಕ ಶಾಲೆಯಲ್ಲಿ ಕಲಿಯುವ ಪುಟ್ಟ ಮಕ್ಕಳು ಇಂಟರ್‌ನೆಟ್ ಲೋಕದಲ್ಲಿ ಲೀಲಾಜಾಲವಾಗಿ ಈಜುತ್ತಾ, ಫೇಸ್‌ಬುಕ್, ವಾಟ್ಸ್ಆ್ಯಪ್, ಯೂ ಟ್ಯೂಬ್‌ಗಳನ್ನು ಯಾರದೇ ನೆರವಿಲ್ಲದೇ ಬಳಸುತಿದ್ದರೆ, ಕೆಎಎಸ್ ಅಧಿಕಾರಿಯಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ಹಲವು ಸರಕಾರಿ ಇಲಾಖೆಗಳಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಎರಡು ವರ್ಷಗಳ ಹಿಂದಷ್ಟೇ ನಿವೃತ್ತರಾಗಿರುವ, ಕನ್ನಡದ ಪ್ರಮುಖ ಸಾಹಿತಿಗಳಲ್ಲಿ ಒಬ್ಬರಾಗಿ ಗುರುತಿಸಿ ಕೊಳ್ಳುವ ಮನು ಬಳಿಗಾರ್‌ಗೆ ಮಾತ್ರ ಈ ಕುರಿತು ಏನು ತಿಳಿದಿಲ್ಲವಂತೆ.

ಧಾರವಾಡದಲ್ಲಿ ಜ.4ರಿಂದ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಂತಿಮ ಕ್ಷಣದ ಸಿದ್ಧತೆ ನಡೆಯುತ್ತಿರುವಂತೆ, ಈ ಸಮ್ಮೇಳನದಲ್ಲಿ ನೇರವಾಗಿ ಭಾಗವಹಿಸಲು ಸಾಧ್ಯವಾಗದ ಲಕ್ಷಾಂತರ ಮಂದಿ ಕನ್ನಡಿಗರಿಗಾಗಿ, ಕನ್ನಡಾಭಿಮಾನಿಗಳು ಹಾಗೂ ಸಾಹಿತ್ಯಾಭಿಮಾನಿಗಳಿಗಾಗಿ ಈ ಸಮ್ಮೇಳನವನ್ನು ‘ಯೂ ಟ್ಯೂಬ್’ನಲ್ಲಿ ನೇರ ಪ್ರಸಾರ ಮಾಡಿ ಎಂದು ಉಡುಪಿಯ ಹಿರಿಯ ಲೇಖಕ, ಸಾಹಿತ್ಯ ವಿಮರ್ಶಕ, ನಿವೃತ್ತ ಪ್ರಾದ್ಯಾಪಕ ಪ್ರೊ.ಮುರಳೀಧರ ಉಪಾಧ್ಯಾಯ ಹಿರಿಯಡಕ ಇವರು ಮನವಿ ಮಾಡಿದಾಗ, ಕಸಾಪ ಅಧ್ಯಕ್ಷರು ಈ ಉತ್ತರ ನೀಡಿದ್ದರು.

‘ಕಳೆದ ಬಾರಿ ಮಡಿಕೇರಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆದಾಗ ಅದನ್ನು ಅಂತರ್ಜಾಲದಲ್ಲಿ ನೇರ ಪ್ರಸಾರ ಮಾಡಲಾಗಿತ್ತು. ಇದರಿಂದ ಸಮ್ಮೇಳನದಲ್ಲಿ ಅನೇಕ ಕಾರಣಗಳಿಂದ ಭಾಗವಹಿಸಲು ಸಾಧ್ಯವಾಗದ ನಮ್ಮಂಥ ನಿವೃತ್ತ ಮಂದಿಗೆ ಅನುಕೂಲವಾಗಿತ್ತು. ಸಮ್ಮೇಳನದಲ್ಲಿ ಕೆಲವು ಸಾವಿರ ಮಂದಿ ಮಾತ್ರ ನೇರವಾಗಿ ಭಾಗವಹಿಸಬಹುದಾದರೆ, ದೇಶ-ವಿದೇಶಗಳ ಕೋಟ್ಯಂತರ ಮಂದಿ ಆಸಕ್ತ ಕನ್ನಡಾಭಿಮಾನಿ ಸಾಹಿತ್ಯಾಸಕ್ತರು ಉಚಿತವಾಗಿರುವ ಯೂ-ಟ್ಯೂಬ್‌ನ ನೇರ ಪ್ರಸಾರದಲ್ಲಿ ಅವುಗಳನ್ನು ನೋಡಲು ಸಾಧ್ಯವಿದೆ.’ ಎಂದು ಮುರಳೀಧರ ಉಪಾಧ್ಯರು ಪತ್ರಿಕೆಯೊಂದಿಗೆ ಮಾತನಾಡುತ್ತಾ ಕಸಾಪ ಅಧ್ಯಕ್ಷರ ಮಾತಿಗೆ ಬೇಸರ ವ್ಯಕ್ತಪಡಿಸುತ್ತಾ ನುಡಿದರು.

ಧಾರವಾಡ ಸಾಹಿತ್ಯ ಸಮ್ಮೇಳನದ ಆಯೋಜನೆಗೆ ರಾಜ್ಯ ಸರಕಾರ ಈಗಾಗಲೇ ಎಂಟು ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದೆ. ಇನ್ನೂ ಎರಡು ಕೋಟಿ ರೂ.ಗಳನ್ನು ಬಿಡುಗಡೆಗೊಳಿಸುವ ಭರವಸೆಯನ್ನು ನೀಡಿದೆ. ಕನ್ನಡ ಟಿವಿ ಚಾನೆಲ್‌ಗಳು ಕೇವಲ ರಾಜಕಾರಣಿಗಳು ಭಾಗವಹಿಸುವ ಉದ್ಘಾಟನಾ ಸಮಾರಂಭವನ್ನು ಮಾತ್ರ ನೇರ ಪ್ರಸಾರ ಮಾಡುತ್ತವೆ. ಹೀಗಾಗಿ ನನ್ನಂಥವರ ಅನುಕೂಲಕ್ಕಾಗಿ ಸಮ್ಮೇಳನವನ್ನು ಯೂ-ಟ್ಯೂಬ್‌ನಲ್ಲಿ ನೇರ ಪ್ರಸಾರ ಗೊಳಿಸುವಂತೆ ಮನು ಬಳಿಗಾರ್ ಅವರಿಗೆ ಮೊಬೈಲ್ ಸಂದೇಶವನ್ನು ಕಳುಹಿಸಿದ್ದೆ. ತಕ್ಷಣ ನನಗೆ ದೂರವಾಣಿ ಕರೆ ಮಾಡಿದ ಅವರು ಈ ಉತ್ತರವನ್ನು ಸ್ವಲ್ಪ ಸಿಟ್ಟಿನಿಂದಲೇ ನೀಡಿದರು ಎಂದು ಪ್ರೊ.ಉಪಾಧ್ಯಾಯ ತಿಳಿಸಿದರು.

ಸರಕಾರದಿಂದ ಅಷ್ಟೊಂದು ಅನುದಾನವನ್ನು ಪಡೆಯುವ ಕಸಾಪಕ್ಕೆ, ಸಮ್ಮೇಳನದ ಕಲಾಪವನ್ನು ಸುಲಭದ ತಂತ್ರಜ್ಞಾನವನ್ನು ಬಳಸಿ ಸಮಸ್ತ ಕನ್ನಡಿಗರಿಗೆ ತಲುಪುವಂತೆ ನೋಡಿಕೊಳ್ಳುವ ಸಾಮಾಜಿಕ ಜವಾಬ್ದಾರಿಯೂ ಇದೆ ಎಂಬ ಅಂಶವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹಲವು ದಶಕಗಳಿಂದ ಕಸಾಪದ ಸದಸ್ಯರೂ ಆಗಿರುವ ಪ್ರೊ. ಮುರಳೀಧರ ಉಪಾಧ್ಯಾಯ ಹಿರಿಯಡಕ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News