ಮುಖ್ಯೋಪಾಧ್ಯಾಯ ಹುದ್ದೆಗೆ ಭಡ್ತಿ ನೀಡಲು ಶಿಕ್ಷಕರ ಆಗ್ರಹ

Update: 2019-01-02 16:34 GMT

ಬೆಂಗಳೂರು, ಜ.2: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 120 ವಿದ್ಯಾರ್ಥಿಗಳ ಹಾಜರಾತಿ ಇದ್ದರೆ, ಪದವೀಧರೇತರ ಮುಖ್ಯೋಪಾಧ್ಯಾಯ ಹುದ್ದೆಗೆ ಭಡ್ತಿ ನೀಡಬೇಕೆಂದು ಶಿಕ್ಷಕರು ಇಂದಿಲ್ಲಿ ಆಗ್ರಹಿಸಿದರು.

ಬುಧವಾರ ನಗರದ ಕೆಜಿ ರಸ್ತೆಯ ಶಿಕ್ಷಕರ ಸದನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರಕಾರಿ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘ ಆಯೋಜಿಸಿದ್ದ, ಪದಾಧಿಕಾರಿಗಳ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕಾರ್ಯಾಗಾರದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ರಾಜ್ಯ ವ್ಯಾಪ್ತಿಯ ಸರಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಸಂಖ್ಯೆ ಕಡಿಮೆ ಇರುವ ಕಾರಣ, ಬಹಳಷ್ಟು ಪದವೀಧರೇತರ ಮುಖ್ಯ ಶಿಕ್ಷಕರ ಹುದ್ದೆಗಳು ಖಾಲಿ ಇರುತ್ತದೆ. ಇದರಿಂದ, 2ನೇ ಭಡ್ತಿಗೆ ಅವಕಾಶದಿಂದ ವಂಚಿತರಾಗುತ್ತಿದ್ದೇವೆ. ಹೀಗಾಗಿ, ಪದವೀಧರೇತರ ಮುಖ್ಯೋಪಾಧ್ಯಾಯ ಹುದ್ದೆಗೆ ಭಡ್ತಿ ನೀಡಿ ಎಂದರು. ಪ್ರಾಥಮಿಕ ಶಾಲಾ ಶಿಕ್ಷಣ ಸಂಯೋಜಕರ ಹುದ್ದೆಗೆ ನೇಮಿಸುವಾಗ ಸೇವಾ ಹಿರಿತನವನ್ನು, ಪರಿಗಣಿಸಿ ಹಿಂದೆ ಇದ್ದ ಹಾಗೆಯೇ, ಪರೀಕ್ಷೆ ಇಲ್ಲದೆ, ರಾಜ್ಯದಲ್ಲಿ ಖಾಲಿ ಇರುವ ಎಲ್ಲ ಶಿಕ್ಷಣ ಸಂಯೋಜಕರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವಂತೆ ಮನವಿ ಮಾಡಿದರು.

ಅದೇ ರೀತಿ, ರಾಜ್ಯ ವ್ಯಾಪ್ತಿಯಲ್ಲಿ ಪದವಿಧರೇತರ ಮುಖ್ಯೋಪಾಧ್ಯಾಯರ ಹುದ್ದೆಗಳು, 1,842 ರಷ್ಟು ಖಾಲಿ ಇದ್ದು, ಈ ಹುದ್ದೆಗಳಿಗೆ ನೇಮಕ ಮಾಡಿ ಆದೇಶ ಹೊರಡಿಸಬೇಕು. ಜೊತೆಗೆ, ಸರಕಾರಿ ಸಹ ಶಿಕ್ಷಕರಿಗೆ, ಒಂದೇ ಹುದ್ದೆಯಲ್ಲಿ 30 ವರ್ಷ ಸೇವೆ ಸಲ್ಲಿಸಿದರೆ, ವಿಶೇಷ ಭತ್ತೆ ನೀಡಲಾಗುತ್ತದೆ. ಅದೇ, ಮಾದರಿಯಲ್ಲಿ ಭಡ್ತಿ ಪಡೆದ ಮುಖ್ಯ ಶಿಕ್ಷಕರಿಗೂ ನೀಡಬೇಕು. 30 ದಿನ ಗಳಿಕೆ ರಜೆ ಅನ್ನು ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಿಕ್ಷಣ ನಿರ್ದೇಶಕ ಎಸ್.ಜಯಕುಮಾರ್, ಸಂಘದ ಅಧ್ಯಕ್ಷ ಕೆ.ಕೃಷ್ಣಪ್ಪ, ನಿವೃತ್ತ ಶಿಕ್ಷಣಾಧಿಕಾರಿ ಕೆ.ಪಿ.ಹನುಮಂತರಾಯಪ್ಪ, ಕೆ.ಎನ್.ನಂಜಪ್ಪಗೌಡ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News