ಜಾತಿಯಾಧಾರಿತ ದೌರ್ಜನ್ಯಗಳ ತಡೆಗೆ ಕ್ರಮಕ್ಕೆ ಆಗ್ರಹ

Update: 2019-01-02 16:44 GMT

ಬೆಂಗಳೂರು, ಜ.2: ಸರಕಾರಿ ಸ್ವಾಯತ್ತ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಜಾತಿ ಆಧಾರಿತ ದೌರ್ಜನ್ಯಗಳ ತಡೆಗೆ ಸರಕಾರ ಸೂಕ್ತವಾದ ಕ್ರಮ ಕೈಗೊಳ್ಳಬೇಕು ಎಂದು ಎಚ್‌ಎಎಲ್‌ನ ಉದ್ಯೋಗಿ ಆರ್.ಬಾಲಸರವಣ ಕುಮಾರ್ ಆಗ್ರಹಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರಿ ಸಂಸ್ಥೆಗಳಲ್ಲಿ ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ನೀಡುವ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತದೆ. ಆದರೆ, ಕೆಲಸದ ಸಂದರ್ಭದಲ್ಲಿ ಕೆಳಜಾತಿಯವರು ಒಂದು ಉನ್ನತ ಸ್ಥಾನಕ್ಕೆ ತಲುಪಿದಾಗ ಕೆಲವರು ಅದನ್ನು ಸಹಿಸದೇ ಸುಳ್ಳುಗಳನ್ನು ಸೃಷ್ಟಿಸಿ ಬದುಕನ್ನು ಅತಂತ್ರ ಮಾಡುವ ಪದ್ಧತಿ ವ್ಯಾಪಕವಾಗಿ ಬೆಳೆಯುತ್ತಿದೆ ಎಂದರು.

ಜಾತಿಯ ಕಾರಣದಿಂದಾಗಿ ತಳಜಾತಿಗಳವರು ಮೇಲ್ಮಟ್ಟದ ಹುದ್ದೆಗಳಿಗೆ ತಲುಪಬಾರದು ಎಂಬ ದುರುದ್ದೇಶದಿಂದ ಮಾಡುವ ಕುತಂತ್ರದಿಂದ ಹತ್ತಾರು ವರ್ಷಗಳ ಕಾಲ ಸೇವೆ ಸಲ್ಲಿಸುವವರು ತೀವ್ರ ಸಂಕಷ್ಟಕ್ಕೀಡು ಮಾಡಲಾಗುತ್ತಿದೆ. ಅನಗತ್ಯ ದೂರುಗಳನ್ನು ನೀಡಿ ಕೆಲಸವನ್ನೇ ಕಿತ್ತುಕೊಳ್ಳುತ್ತಿದ್ದಾರೆ. ಇದರಿಂದಾಗಿ ಹಲವಾರು ಜನರು ಮಾನಸಿಕ ದೌರ್ಜನ್ಯ ಅನುಭವಿಸುತ್ತಾರೆ. ಅಲ್ಲದೆ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ತೀರ ಸಂಕಷ್ಟವನ್ನು ಅನುಭವಿಸುವಂತಾಗುತ್ತಿದೆ ಎಂದು ಹೇಳಿದರು.

ಎಚ್‌ಎಎಲ್‌ನಲ್ಲಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಳಿಕ ಅಲ್ಲಿನ ಎಸ್ಸಿ-ಎಸ್ಟಿ ನೌಕರರ ಸಂಘದ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆಯಾಗಿದ್ದೆ. ಇದನ್ನು ಸಹಿಸದ ಕೆಲವರು ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂದು ದೂರು ನೀಡಿದ್ದರು. ಇದರ ಪರಿಣಾಮ ನಾನು ಕೆಲಸವನ್ನೇ ಕಳೆದುಕೊಳ್ಳುವಂತಾಯಿತು. 1998 ರಲ್ಲಿ ಕೆಲಸದಿಂದ ವಜಾಗೊಂಡ ಬಳಿಕ ಜಿಲ್ಲಾಧಿಕಾರಿಗಳು, ಕಂದಾಯ ಅಧಿಕಾರಿಗಳು ಎಲ್ಲರೊಂದಿಗೆ ಶಾಮೀಲಾಗಿ ನನ್ನ ವಿರುದ್ಧ ಪಿತೂರಿ ನಡೆಸಿದ್ದರು ಎಂದು ನುಡಿದರು.

ಸುಮಾರು 17 ವರ್ಷಗಳ ಕಾಲ ನಿರಂತರವಾದ ಹೋರಾಟ ನಡೆಸಿ ನ್ಯಾಯಾಲಯದ ಮೆಟ್ಟಿಲೇರಿದ ಬಳಿಕ ಕೋರ್ಟ್ ತೀರ್ಪು ನೀಡಿ ನನ್ನ ಜಾತಿಯನ್ನು ದೃಢೀಕರಿಸಿದೆ. ಅಲ್ಲದೆ, ಕೆಲಸಕ್ಕೆ ಮರು ನೇಮಕ ಮಾಡಿಕೊಳ್ಳಲು ಸೂಚಿಸಿದೆ. ಇದೇ ರೀತಿ ರಾಜ್ಯದಲ್ಲಿ ಹಲವಾರು ಪ್ರಕರಣಗಳು ನಡೆದಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರಕಾರ ಕಠಿಣ ಕಾನೂನು ಜಾರಿ ಮಾಡಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News