ಋತುಚಕ್ರ ಮೈಲಿಗೆ ಎನ್ನುವವರಲ್ಲಿ ಅಶುದ್ಧತೆ ಅಡಗಿದೆ: ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ

Update: 2019-01-03 17:17 GMT

ಬೆಂಗಳೂರು, ಜ.3: ಜನನ ಕ್ರಿಯೆಗೆ ಬಹುಮುಖ್ಯವಾದ ಋತುಚಕ್ರವನ್ನು ಮೈಲಿಗೆ ಎನ್ನುವ ಮನಸ್ಸುಗಳಲ್ಲಿ ಅಶುದ್ಧತೆ ಅಡಗಿದೆ ಎಂದು ವಿಮರ್ಶಕಿ ಡಾ.ಎಂ.ಎಸ್. ಆಶಾದೇವಿ ಹೇಳಿದರು.

ಗುರುವಾರ ನಗರದ ಗಾಂಧಿ ಭವನದಲ್ಲಿ ಸಾಧನ ಮಹಿಳಾ ಸಂಘಟನೆ ವತಿಯಿಂದ ಏರ್ಪಡಿಸಿದ್ದ, ನೆಲತಾಯಿ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಋತುಚಕ್ರ ಕ್ರಿಯೆಯಿಂದಲೇ ಪ್ರಕೃತಿ ಸೃಷ್ಟಿಯಾಗಿದ್ದು, ದೇಹ ಸೂತಕ ಪದ್ಧತಿಯನ್ನು ಹೆಣ್ಣು ಮಕ್ಕಳು ತಮ್ಮ ಮನಸ್ಸಿನಿಂದ ಕಿತ್ತೊಗೆಯಬೇಕು. ದೇಹ ಸೂತಕದ ಮೂಲಕ ವ್ಯವಸ್ಥೆ ಹೆಣ್ಣನ್ನು ಅಳೆಯುವುದು ಸರಿಯಲ್ಲ. ದೇಹ ಶುದ್ಧಿ ಹಾಗೂ ಶೀಲದ ಕಲ್ಪನೆ ಮೂಲಕ ಸಮಾಜ ಹೆಣ್ಣು ಮಕ್ಕಳನ್ನು ಬಂಧಿಸುತ್ತಿದೆ ಎಂದರು.

ಹೆಣ್ಣು ಎಂದರೆ ಸ್ತನ ಮತ್ತು ಯೋನಿ ಹೊಂದಿರುವ ಒಂದು ಜೀವವಲ್ಲ. ಅವಳಿಗೊಂದು ಅಸ್ಮಿತೆ, ಘನತೆ, ಚಹರೆ ಹಾಗೂ ಆತ್ಮಗೌರವವಿದೆ. ಕಾಲಚಕ್ರ ಬದಲಾದರೂ ಹೆಣ್ಣಿನ ಸ್ಥಿತಿಗತಿಗಳು ಹಾಗೇ ಇವೆ. ಸ್ವಚ್ಛ ಭಾರತದ ಬದಲಿಗೆ ಭಾರತದಲ್ಲಿರುವ ಮನುಷ್ಯರ ಮನಸ್ಸು ಮತ್ತು ಬುದ್ಧಿ ಸ್ವಚ್ಛವಾಗಬೇಕಿದೆ. ಹೆಣ್ಣು ಎಂದರೆ ದೇಹ ಎಂಬ ದೃಷ್ಟಿಕೋನ ಬದಲಾಗಬೇಕಿದೆ. ಆಕೆಯ ದೇಹ ನಿಂದನೆಗೆ ಮುಂದಾಗುವ ವ್ಯವಸ್ಥೆ ಅವಳ ಆಂತರ್ಯದ ಧ್ವನಿಗೆ ಅವಕಾಶ ನೀಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸೀಜಾಗೃತಿ ಸಂಘಟನೆಯ ಕರ್ನಾಟಕ ವಿಭಾಗದ ಕಾರ್ಯದರ್ಶಿ ಗೀತಾ ಮೆನನ್ ಮಾತನಾಡಿ, ಋತುಚಕ್ರ ಕ್ರಿಯೆ ವೈಜ್ಞಾನಿಕವಾದುದು. ಪುರುಷರ ದೇಹದಲ್ಲೂ ಅನೇಕ ವೈಜ್ಞಾನಿಕ ಬದಲಾವಣೆ ಕ್ರಿಯೆಗಳು ನಡೆಯುತ್ತಿರುತ್ತವೆ. ಆದರೆ ಹೆಣ್ಣು ಮಕ್ಕಳಲ್ಲಿ ಆಗುವ ಋತುಚಕ್ರ ಕ್ರಿಯೆಯನ್ನು ಮೈಲಿಗೆ ಎಂದು ಶಬರಿಮಲೆ ದೇವಾಲಯಕ್ಕೆ ಪ್ರವೇಶಾತಿ ನೀಡದಿರುವುದು ಸರಿಯಲ್ಲ ಎಂದರು.

ಕರ್ನಾಟಕ ಅರಣ್ಯಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟದ ಜೆ.ಕೆ.ಪ್ರೇಮಾ, ರಂಗಭೂಮಿ ಕಲಾವಿದೆ ಆರ್.ಮಂಗಳ ಲಿಲ್ಲಿ, ಸ್ಲಂ ಮಹಿಳಾ ಸಂಘಟನೆಯ ಜಾನ್ಸಿರಾಣಿ, ಗಾರ್ಮೆಂಟ್ ಮತ್ತು ಟೆಕ್ಸ್‌ಟೈಲ್ ಕಾರ್ಮಿಕರ ಸಂಘಟನೆಯ ರಾಜೇಶ್ವರಿ, ಸ್ವರಾಜ್ ಸಂಘಟನೆಯ ಜಯಲಕ್ಷ್ಮಿ ಅವರಿಗೆ ನೆಲತಾಯಿ ಪುರಸ್ಕಾರ ನೀಡಿ ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News