ಜಾನುವಾರು ವ್ಯಾಪಾರಿ ಹುಸೇನಬ್ಬ ಹತ್ಯೆ ಪ್ರಕರಣ: ಆರೋಪಿ ಸುರೇಶ್ ಮೆಂಡನ್‌ಗೆ ಜಾಮೀನು ನಿರಾಕರಿಸಿದ ಹೈಕೋರ್ಟ್

Update: 2019-01-04 16:18 GMT

ಬೆಂಗಳೂರು, ಜ.4: ಅಕ್ರಮ ಗೋ ಸಾಗಣೆ ಆರೋಪದ ಮೇಲೆ ಉಡುಪಿ ಜಿಲ್ಲೆಯ ಪೆರ್ಡೂರು ಗ್ರಾಮದಲ್ಲಿ ಹುಸೇನಬ್ಬ ಎಂಬವರ ಮೇಲೆ ದಾಳಿ ನಡೆಸಿ ಹತ್ಯೆಗೈದ ಪ್ರಕರಣದ ಮೊದಲ ಆರೋಪಿ ಸುರೇಶ್ ಮೆಂಡನ್‌ಗೆ ಜಾಮೀನು ನಿರಾಕರಿಸಿದ ಹೈಕೋರ್ಟ್, ಇತರೆ ಐವರು ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಪ್ರಕರಣ ಸಂಬಂಧ ಜಾಮೀನು ಕೋರಿ ಸುರೇಶ್ ಮೆಂಡನ್ ಸೇರಿ ಆರು ಮಂದಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್. ಮುದಗಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸುರೇಶ್ ಮೆಂಡನ್‌ಗೆ ಜಾಮೀನು ನಿರಾಕರಿಸಿತು. ಆದರೆ, ನ್ಯಾಯಾಂಗ ಬಂಧನದಲ್ಲಿರುವ ಶೈಲೇಶ್ ಶೆಟ್ಟಿ, ಚೇತನ್ ಆಚಾರಿ, ರತನ್, ಉಮೇಶ್ ಶೆಟ್ಟಿ ಮತ್ತು ಗಣೇಶ್ ನಾಯ್ಕಗೆ ಜಾಮೀನು ನೀಡಿದ್ದು, ತಲೆಮರೆಸಿಕೊಂಡಿರುವ ಆರೋಪಿ ಕುಶಾಲ್ ನಾಯ್ಕಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಜಾಮೀನು ಪಡೆದವರು ತಲಾ ಒಂದು ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಅದೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ಒದಗಿಸಬೇಕು. ಸಾಕ್ಷಿಗಳನ್ನು ಬೆದರಿಸುವ ಹಾಗೂ ಸಾಕ್ಷಾಧಾರಗಳನ್ನು ನಾಶಪಡಿಸಲು ಯತ್ನಿಸಬಾರದು. ಅಧೀನ ನ್ಯಾಯಾಲಯದ ವಿಚಾರಣೆಗೆ ತಪ್ಪದೇ ಹಾಜರಾಗಬೇಕು ಎಂದು ನ್ಯಾಯಪೀಠ ಜಾಮೀನು ಮಂಜೂರಾತಿಗೆ ಷರತ್ತು ವಿಧಿಸಿದೆ.

ಪ್ರಕರಣವೇನು: ಗೋ ಅಕ್ರಮ ಸಾಗಣೆ ಮಾಡಲಾಗುತ್ತಿದೆ ಎಂದು ಹೇಳಿ 2018ರ ಮೇ 30ರಂದು ಉಡುಪಿ ಜಿಲ್ಲೆಯ ಪೆರ್ಡೂರು ಗ್ರಾಮದಲ್ಲಿ ಸುರೇಶ್ ಮೆಂಡನ್ ಸೇರಿ ಹಲವರು ಹುಸೇನಬ್ಬ ಎಂಬವರ ಮೇಲೆ ಸಾಮೂಹಿಕವಾಗಿ ದಾಳಿ ನಡೆಸಿದ್ದರು. ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಹುಸೇನಬ್ಬ ಸಾವನ್ನಪ್ಪಿದ್ದರು.

ಈ ಕುರಿತು ಮೃತರ ಸಹೋದರ ಹಿರಿಯಡ್ಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸುರೇಶ್ ಮೆಂಡನ್ ಸೇರಿ ಹಲವರನ್ನು ಬಂಧಿಸಿದ್ದರು. ಪ್ರಕರಣದಲ್ಲಿ ಒಟ್ಟು 15 ಮಂದಿಯನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಆ ಪೈಕಿ ಕುಶಾಲ್ ನಾಯಕ್ ತಲೆಮರೆಸಿಕೊಂಡಿದ್ದು, ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದರೆ, ನ್ಯಾಯಾಂಗ ಬಂಧನದಲ್ಲಿರುವ ಇತರೆ ಐವರು ಜಾಮೀನು ಅರ್ಜಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News