ವಿದ್ಯಾರ್ಥಿಗಳಿಗಾಗಿ ಕುವೆಂಪು ಓದು ಅಭಿಯಾನ

Update: 2019-01-05 16:26 GMT

ಬೆಂಗಳೂರು, ಜ.5: ನೆಲಸಿರಿ, ಡಾ.ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯ ಹಾಗೂ ಪ್ರಜಾವಾಣಿ ಮಾಧ್ಯಮ ಸಹಯೋಗದಲ್ಲಿ ಯುವಜನತೆಗಾಗಿ ‘ಕಾಲೇಜು ವಿದ್ಯಾರ್ಥಿಗಳ ಕುವೆಂಪು ಓದು-ಸ್ಪರ್ಧೆ’ಯನ್ನು ಆಯೋಜಿಸಲಾಗಿದೆ.

ಕುವೆಂಪುರವರ ಸಾಹಿತ್ಯ ಹಾಗೂ ವೈಚಾರಿಕತೆಯನ್ನು ನಾಡಿನ ಯುವಜನತೆಗೆ ಪರಿಚಯಿಸುವ ಉದ್ದೇಶದಿಂದ ಅಭಿಯಾನವನ್ನು ಕೈಗೊಂಡಿದ್ದು, ಈ ನಿಟ್ಟಿನಲ್ಲಿ ಕುವೆಂಪುರವರು ವಿದ್ಯಾರ್ಥಿಗಳು ಹಾಗೂ ಯುವಜನರನ್ನುದ್ದೇಶಿಸಿ ನೀಡಿರುವ ವಿಚಾರೋಪನ್ಯಾಸಗಳನ್ನು, ಕಾಲೇಜು ವಿದ್ಯಾರ್ಥಿಗಳು ಓದಲು ಹಾಗೂ ಲೇಖನ, ಕಲೆ, ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸಲು ಈ ಮೂಲಕ ಆಹ್ವಾನಿಸಲಾಗಿದೆ.

ಅಭಿಯಾನದ ವಿವರ: ಕುವೆಂಪುರವರ ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ, ವಿದ್ಯಾರ್ಥಿಗಳಲ್ಲಿ ಮತಿ ಗೌರವದ ಅವಶ್ಯಕತೆ, ವಿಚಾರ ಕ್ರಾಂತಿಗೆ ಆಹ್ವಾನ ಲೇಖನಗಳನ್ನು ವಿದ್ಯಾರ್ಥಿಗಳು ಓದಬೇಕು. ನಂತರ ವಿದ್ಯಾರ್ಥಿಗಳು ಅವರ ಅನಿಸಿಕೆ, ಅಭಿಪ್ರಾಯ, ಭಾವನೆಗಳನ್ನು ಬರೆಯಬೇಕು. ಆಸಕ್ತರು ಚಿತ್ರಕಲೆ, ನಾಟಕ, ಅಭಿಯನಗಳ ಮೂಲಕವೂ ಸ್ಪಂದಿಸಬಹುದು. ಅಲ್ಲದೆ, ಆಯ್ದ ಸ್ಪಂದನೆಗಳಿಗೆ ಬಹುಮಾನವಿರುತ್ತದೆ.

ಪದವಿ ಪೂರ್ವ ಹಂತ: ಮೆಟ್ರಿಕ್ ನಂತರದ ಕಲೆ, ವಿಜ್ಞಾನ, ಚಿತ್ರಕಲೆ, ನಾಟಕ, ಸಂಗೀತ, ನರ್ಸಿಂಗ್ ಮುಂತಾದ ವೃತ್ತಿಪರ ಕೋರ್ಸ್‌ಗಳು ಸೇರಿದಂತೆ ಎಲ್ಲ ಪದವಿ ಪೂರ್ವ ಕೋರ್ಸ್‌ಗಳ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು.

ಪದವಿ ಹಂತ: ಕಲೆ, ವಿಜ್ಞಾನ, ವೈದ್ಯಕೀಯ, ಇಂಜಿನಿಯರಿಂಗ್, ವ್ಯವಹಾರ, ಚಿತ್ರಕಲೆ, ನಾಟಕ, ಸಂಗೀತ, ನರ್ಸಿಂಗ್ ಮುಂತಾದ ಎಲ್ಲ ಪದವಿ ಕೋರ್ಸ್‌ಗಳ ವಿದ್ಯಾರ್ಥಿಗಳು ಭಾಗವಹಿಸಬಹುದು. ಆದರೆ, ಸ್ಪರ್ಧೆಯನ್ನು ಏರ್ಪಡಿಸಲು ಕನಿಷ್ಠ 10 ವಿದ್ಯಾರ್ಥಿಗಳು ಲಭ್ಯವಿರಬೇಕು.

ಅಭಿಯಾನದ ನಿರ್ವಹಣೆಗಾಗಿ ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್ ಅಧ್ಯಕ್ಷತೆಯಲ್ಲಿ ಚಾಲನಾ ಸಮಿತಿ ರಚಿಸಲಾಗಿದ್ದು, ಪ್ರೊ.ಕೆ.ದೊರೈರಾಜು, ಕೆ.ಅರ್ಕೇಶ್, ಇಂದಿರಾ ಕೃಷ್ಣಪ್ಪ ಸಮಿತಿಯ ಭಾಗವಾಗಿದ್ದಾರೆ. ನೋಂದಣಿಗಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಕಾಲೇಜು ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಮುಖ್ಯಸ್ಥರು ಮೊಬೈಲ್ ಸಂಖ್ಯೆ: 88611 36933, 97436 66781 ಅನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News