‘ವಾಸ್ತವವಾದದ ಎಲ್ಲೆಗಳನ್ನು ಮೀರಿ ನಿಂತ ಕಾದಂಬರಿ’

Update: 2019-01-05 16:42 GMT

ಉಡುಪಿ, ಜ.5: ಮಲೆನಾಡನ್ನು ವ್ಯಾಪಕವಾದ ಕ್ಯಾನ್ವಾಸ್‌ನಲ್ಲಿ ಕಟ್ಟಿಕೊಡುವ, ಮಲೆನಾಡಿನ ಸಕಲ ಜೀವಚರಗಳಿಗೂ, ಮನುಷ್ಯನ ಎಲ್ಲಾ ಜಾತಿಗಳೊಂದಿಗೆ ಸಮಾನ ಸ್ಥಾನಮಾನ ನೀಡಿದ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕನ್ನಡದ ಅಪರೂಪದ ಹಾಗೂ ಅತೀ ವಿಶಿಷ್ಟವಾದ ಕಾದಂಬರಿಯಾಗಿದ್ದು, ಅದರ ವಸ್ತು ಇಂದಿನ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತ ಎನಿಸಿಕೊಳ್ಳುತ್ತಿದೆ ಎಂದು ನಿವೃತ್ತ ಕುಲಪತಿ ಹಾಗೂ ಹಿರಿಯ ವಿದ್ವಾಂಸರಾದ ಡಾ.ಬಿ.ಎ.ವಿವೇಕ್ ರೈ ಅಭಿಪ್ರಾಯ ಪಟ್ಟಿದ್ದಾರೆ.

ಶಿವಮೊಗ್ಗದ ಲೋಹಿಯಾ ಜನ್ಮ ಶತಾಬ್ದಿ ಪ್ರತಿಷ್ಠಾನ ಹಾಗೂ ಉಡುಪಿಯ ರಥಬೀದಿ ಗೆಳೆಯರು ಇವರ ಜಂಟಿ ಆಶ್ರಯದಲ್ಲಿ ಎಂಜಿಎಂ ಕಾಲೇಜಿನ ಧ್ವನ್ಯಾಲೋಕ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಳ್ಳಲಾದ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು-50’ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

1967-68ರಲ್ಲಿ ಈ ಕಾದಂಬರಿ ಮೊದಲ ಬಾರಿ ಪ್ರಕಟಗೊಂಡಾಗ,ಅದಕ್ಕೆ ಒಳ್ಳೆಯ ವಿಮರ್ಶೆ ಸಿಕ್ಕಿರಲಿಲ್ಲ. ಡಾ.ಅನಂತಮೂರ್ತಿ ಅವರ ‘ಸಂಸ್ಕಾರ’, ಡಾ.ಶಾಂತಿನಾಥ ದೇಸಾಯಿ ಅವರ ಕಾದಂಬರಿ, ಗಿರಿಯವರ ‘ಗತಿ-ಸ್ಥಿತಿ’ಯಂಥ ನವ್ಯ ಕಾದಂಬರಿಯ ನಡುವೆ ಇದು ಅಂದಿನ ವಿಮರ್ಶಕರಿಂದ ವಿಶೇಷ ಮನ್ನಣೆ ಪಡೆದಿರಲಿಲ್ಲ ಎಂದು ಡಾ.ರೈ ನೆನಪಿಸಿಕೊಂಡರು.

ಆದರೆ ಕನ್ನಡದ ಮಟ್ಟಿಗೆ ಇದೊಂದು ವಿಶಿಷ್ಟ ಕಾದಂಬರಿಯಾಗಿತ್ತು. ಇಲ್ಲಿನ ಎಲ್ಲಾ ಪಾತ್ರಗಳು ಮುಖ್ಯವಾಗಿದ್ದವು. ಯಾವುದೂ ಅಮುಖ್ಯವೆನಿಸಿರಲೇ ಇಲ್ಲ. ಮಲೆನಾಡಿನ 10-12 ಜಾತಿಗಳೊಂದಿಗೆ ಅಲ್ಲಿನ ನಾಯಿ, ಹಂದಿ, ಹುಲಿ, ಕ್ರಿಮಿಕೀಟಗಳು, ಮರಗಿಡಗಳು, ಪ್ರಕೃತಿ ಎಲ್ಲವೂ ಪಾತ್ರಗಳ ರೀತಿಯಲ್ಲಿ ಕಾಣಿಸಿಕೊಂಡವು. ಮಹಿಳೆಯರಿಗೂ ಅವರೆಲ್ಲಾ ಗುಣಾವಗುಣಗಳೊಂದಿಗೆ ಪ್ರದಾನ ಸ್ಥಾನ ಈ ಕಾದಂಬರಿಯಲ್ಲಿ ದೊರಕಿದೆ ಎಂದು ಅವರು ವಿಶ್ಲೇಷಿಸಿದರು.

ನಮ್ಮ ಸಮಾಜದ ಜಾತಿಗಳ ಶ್ರೇಣಿಕೃತ ವ್ಯವಸ್ಥೆಯನ್ನು ತೆರೆದು ತೋರಿಸುವ ಕಾದಂಬರಿ ಇದಾಗಿದೆ. ಜಾತಿಗಳ ಸಾಂಸ್ಕೃತಿಕ ಸ್ತರಗಳೂ ಇದರಲ್ಲಿ ಸ್ಪಷ್ಟವಾಗಿ ಕಾಣಿಸುತ್ತವೆ. ಜಾತಿಯನ್ನು ಇಟ್ಟುಕೊಂಡು ಜಾತಿ ಕರಗುತ್ತಾ ಬರುವ ಸೂಚನೆಯನ್ನು ಕಾದಂಬರಿ ನೀಡುತ್ತದೆ. ಇದರೊಂದಿಗೆ ಪ್ರತಿಷ್ಠಿತ ಜಾತಿಗಳು ಪ್ರತಿಷ್ಠೆಯನ್ನು ಕಳೆದುಕೊಳ್ಳುವುದರ ಚಿತ್ರಣವಿದೆ ಎಂದರು.

ಕಾದಂಬರಿಯಲ್ಲಿ ಕ್ರೈಸ್ತರ ಬಲಾತ್ಕಾರದ ಮತಾಂತರವನ್ನು ವಿರೋಧಿಸುವ ಕುವೆಂಪು, ಅವರು ಊರಿನಲ್ಲಿ ನಿರ್ಮಿಸುವ ಎಲ್ಲಾ ಜಾತಿಗಳಿಗೂ ಅವಕಾಶ ವಿರುವ ಶಾಲೆ ಹಾಗೂ ಆಸ್ಪತ್ರೆಗಳ ನಿರ್ಮಾಣದ ಪರವಾಗಿ ಮಾತನಾಡುತ್ತಾರೆ. ಅದೇ ರೀತಿ ಜ್ಯೋತಿಷಿಗಳ ಮೂಢನಂಬಿಕೆಯ ಪ್ರತಿಪಾದನೆಯನ್ನು ಕಟುವಾಗಿ ವಿರೋಧಿಸುತ್ತಾರೆ ಎಂದರು.

ಕಾದಂಬರಿಯಲ್ಲಿ ಕ್ರೈಸ್ತರ ಬಲಾತ್ಕಾರದ ಮತಾಂತರವನ್ನು ವಿರೋಧಿಸುವ ಕುವೆಂಪು, ಅವರು ಊರಿನಲ್ಲಿ ನಿರ್ಮಿಸುವ ಎಲ್ಲಾ ಜಾತಿಗಳಿಗೂ ಅವಕಾಶ ವಿರುವ ಶಾಲೆ ಹಾಗೂ ಆಸ್ಪತ್ರೆಗಳ ನಿರ್ಮಾಣದ ಪರವಾಗಿ ಮಾತನಾಡುತ್ತಾರೆ. ಅದೇ ರೀತಿ ಜ್ಯೋತಿಷಿಗಳ ಮೂಢನಂಬಿಕೆಯ ಪ್ರತಿಪಾದನೆಯನ್ನು ಕಟುವಾಗಿ ವಿರೋಧಿಸುತ್ತಾರೆ ಎಂದರು. ಕಾದಂಬರಿ ಕುರಿತು ಮಾತನಾಡಿದ ಉಡುಪಿಯ ಚಿಂತಕ ಹಾಗೂ ವಿಮರ್ಶಕ ಜಿ.ರಾಜಶೇಖರ್, ಮಲೆನಾಡಿನ ಹಳ್ಳಿಗಳ ಸಾಮಾಜಿಕ ಬಿಕ್ಕಟ್ಟು, ಕಟ್ಟುಕಟ್ಟಲೆ, ಮದುವೆ, ಅಡುಗೆ ಎಲ್ಲವೂ ಕಾದಂಬರಿಯಲ್ಲಿವೆ. ಮಲೆನಾಡಿನಲ್ಲಿ ಮನುಷ್ಯ ಮತ್ತು ನಿಸರ್ಗದ ನಡುವಿನ ಸಾಮರಸ್ಯ ಹಾಗೂ ಸಂಘರ್ಷದ ಚಿತ್ರಣವೂ ಕಾಣಿಸಿಕೊಳ್ಳುತ್ತದೆ. ಮಲೆನಾಡು ಇಲ್ಲಿ ರೂಪಕ, ಪ್ರತಿಮೆ, ಕನಸು ಎಲ್ಲಾ ಆಗಿದೆ ಎಂದರು.

ಅತಿಥಿಗಳನ್ನು ಸ್ವಾಗತಿಸಿದ ಶಿವಮೊಗ್ಗದ ಪ್ರತಿಷ್ಠಾನ ಅಧ್ಯಕ್ಷ ಹಾಗೂ ಚಿಂತಕ ಡಿ.ಎಸ್. ನಾಗಭೂಷಣ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಕುವೆಂಪು ಅವರ ಈ ಕಾದಂಬರಿಯನ್ನು ದೇವನೂರು ಮಹಾದೇವ ಅವರು ‘ಭಾರತದ ಮಟ್ಟಿಗೆ ಶತಮಾನದ ಕಾಂಬರಿ’ ಎಂದು ಕರೆದಿದ್ದಾರೆ ಎಂದರು.

ಇದು ವಾಸ್ತವವಾದದ ಎಲ್ಲೆಗಳನ್ನು ಮೀರಿನಿಂತ ಕಾದಂಬರಿ ಇದಾಗಿದ್ದು, ಇದು ಧರ್ಮಜಿಜ್ಞಾಸೆಯನ್ನು ನಡೆಸುತ್ತದೆ ಎಂದು ಹೇಳಿದ ಡಿಎಸ್‌ಎನ್, ಕಾದಂಬರಿ ಪ್ರಕಟಗೊಂಡು 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರತಿಷ್ಠಾನ ಈಗಾಗಲೇ ಮೈಸೂರು ಮತ್ತು ಧಾರವಾಡಗಳಲ್ಲಿ ಕಾದಂಬರಿ ಕುರಿತಂತೆ ವಿಚಾರ ಸಂಕಿರಣ ನಡೆಸಿದ್ದು, ಇದು ಈ ಸರಣಿಯಲ್ಲಿ ಮೂರನೇಯದು ಎಂದರು.

ಪುತ್ತೂರಿನ ಚಿಂತಕ, ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿ ಹಾಗೂ ಮಂಗಳೂರಿನ ಡಾ.ವಾಸುದೇವ ಬೆಳ್ಳೆ ಅವರು ತಮ್ಮ ವಿಚಾರಗಳನ್ನು ಮಂಡಿಸಿದರು. ರಥಬೀದಿ ಗೆಳೆಯರು ಸಂಘಟನೆಯ ಅಧ್ಯಕ್ಷ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡಕ ವಂದಿಸಿದರೆ, ಪ್ರೊ.ಸುಬ್ರಹ್ಮಣ್ಯ ಜೋಶಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News