ಬಿಬಿಎಂಪಿ ಕಾರ್ಪೊರೇಟರ್ ಸುರೇಶ್‌ನನ್ನು ಬಂಧಿಸುವಂತೆ ವಕೀಲರ ಒಕ್ಕೂಟ ಆಗ್ರಹ

Update: 2019-01-07 17:12 GMT

ಬೆಂಗಳೂರು, ಜ.7: ಬೆಂಗಳೂರು ವಕೀಲರ ಸಂಘದ ಸದಸ್ಯೆಯಾದ ಕುಮಾರಿ ಧರಣಿ ಎಂಬುವವರ ಆತ್ಮಹತ್ಯೆಗೆ ಕಾರಣರಾದ, ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯ ಸುರೇಶ್ ಹಾಗೂ ಆತನ ಸಹವರ್ತಿಗಳನ್ನು ಬಂಧಿಸುವಂತೆ ಅಖಿಲ ಭಾರತ ವಕೀಲರ ಒಕ್ಕೂಟ ಆಗ್ರಹಿಸಿದೆ.

ಸೋಮವಾರ ನಗರದದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಸದಸ್ಯ ವಕೀಲ ಹರೀಂದ್ರ ಮಾತನಾಡಿ, ಜಾಗದ ವಿವಾದಕ್ಕೆ ಸಂಬಂಧಪಟ್ಟಂತೆ ವಾರ್ಡ್ ಕಾರ್ಪೋರೇಟರ್ ನೀಡಿದ ಕಿರುಕುಳವೇ ವಕೀಲೆ ಧರಣಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಮುಖ ಕಾರಣ ಎಂದು ಆರೋಪಿಸಿದರು.

ಉದಯನಗರದ ಪುಟ್ಟ ಸ್ಥಳದಲ್ಲಿ ಧರಣಿ ಅವರು ಮನೆ ಕಟ್ಟಿಕೊಂಡು, ತಾಯಿ ಜತೆ ನೆಲೆಸಿದ್ದರು. ಸಣ್ಣ-ಪುಟ್ಟ ವಿಷಯಗಳಿಗೂ ಅಕ್ಕ ಪಕ್ಕದವರು ಧರಣಿ ಕುಟುಂಬದ ಜತೆ ನಿರಂತರವಾಗಿ ಜಗಳ ತೆಗೆಯುತ್ತಲೇ ಇದ್ದರು. ನಿಮ್ಮ ಜಾಗವನ್ನು ನಮಗೆ ಮಾರಾಟ ಮಾಡಿಬಿಡಿ. ನಿಮ್ಮ ಜಾಗದ ಬೆಲೆಗಿಂತ 5 ಲಕ್ಷ ರೂ. ಹೆಚ್ಚಿಗೆ ಕೊಡುತ್ತೇವೆ ಎಂದು ದುಂಬಾಲು ಬಿದ್ದಿದ್ದರು ಎಂದು ತಿಳಿಸಿದರು.

ಹೀಗಾಗಿ, ಮಾನಸಿಕವಾಗಿ ಧರಣಿ ನೊಂದಿದ್ದರು. ಅಲ್ಲದೆ, ಕಾರ್ಪೊರೇಟರ್ ಏಕಪಕ್ಷೀಯವಾಗಿ ವರ್ತಿಸಿದ್ದರು ಹಾಗೂ ಕಾರ್ಪೊರೇಟರ್‌ನ ಹಿಂಬಾಲಕರು ಅನಗತ್ಯ ಕಿರುಕುಳ ನೀಡಿ, ಅವಾಚ್ಯ ಶಬ್ದಗಳನ್ನು ಬಳಸಿ ಕಿರುಕುಳ ನೀಡಿರುವುದೇ ಆತ್ಮಹತ್ಯೆಗೆ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಿಐಡಿಗೆ ವಹಿಸಿ: ಮಹದೇವಪುರದ ಆರಕ್ಷಕ ಠಾಣೆಯವರು ಇದುವರೆಗೂ ಪ್ರಕರಣಕ್ಕೆ ಸಂಬಂಧಿಸಿದ ಆಪಾದಿತರನ್ನು ಬಂಧಿಸದೆ ನಿರ್ಲಕ್ಷ ವಹಿಸಿರುತ್ತಾರೆ ಹಾಗೂ ಪಾಲಿಕೆ ಸದಸ್ಯನಾದ ಸುರೇಶ್ ಮತ್ತು ಆತನ ಸಹವರ್ತಿಗಳು ಪ್ರಬಲ ವ್ಯಕ್ತಗಳಾಗಿದ್ದು, ಪ್ರಕರಣದ ಸಾಕ್ಷಾಧಾರಗಳ ಮೇಲೆ ಸಾಕಷ್ಟು ಪ್ರಭಾವ ಬೀರುವ ವ್ಯಕ್ತಿಗಳಾಗಿರುತ್ತಾರೆ. ಹೀಗಾಗಿ, ಪ್ರಕರಣದ ತನಿಖೆಯನ್ನು ದಿಕ್ಕುತಪ್ಪಿಸುವ ಸಾಧ್ಯತೆಯಿದ್ದು, ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಬೇಕೆಂದು ಮನವಿ ಮಾಡಿದರು.

ಕಳೆದ ವರ್ಷ ರಾಜ್ಯದಲ್ಲಿ 4 ವಕೀಲರ ಕೊಲೆಗಳಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿರುವ ವಕೀಲರ ರಕ್ಷಣೆಗಾಗಿ ಸರಕಾರ ‘ಅಡ್ವೋಕೇಟ್ಸ್ ಪ್ರೊಟೆಕ್ಷನ್ ಆಕ್ಟ್’ ಅನ್ನು ಜಾರಿಗೊಳಿಸಿ ವಕೀಲರಿಗೂ ಜೀವ ಭದ್ರತೆ ನೀಡಿ.

-ಹರೀಂದ್ರ, ಅಖಿಲ ಭಾರತ ವಕೀಲರ ಒಕ್ಕೂಟದ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News