ರಾಜ್ಯದಲ್ಲೂ ರಾಜಸ್ತಾನದಂತೆ ಗಣಿಗಾರಿಕೆ: ರಾಜಶೇಖರ್ ಪಾಟೀಲ್

Update: 2019-01-08 13:13 GMT

ಬೆಂಗಳೂರು, ಜ.8: ರಾಜಸ್ತಾನ ಮಾದರಿಯಲ್ಲಿಯೇ ರಾಜ್ಯದಲ್ಲೂ ಗಣಿಗಾರಿಕೆ ನಿಯಮಗಳ ಅಡಿ ಕಾರ್ಯ ನಿರ್ವಹಿಸಲು ಸರಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ರಾಜಶೇಖರ ಪಾಟೀಲ್ ಹೇಳಿದರು.

ಮಂಗಳವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಗ್ರಾನೈಟ್ ಮತ್ತು ಕಲ್ಲುಗಣಿಗಾರಿಕೆ ಒಕ್ಕೂಟ ಏರ್ಪಡಿಸಿದ್ದ, ಗಣಿಗಾರಿಕೆಯಲ್ಲಿನ ಸಮಸ್ಯೆಗಳು ಮತ್ತು ಪರಿಹಾ ರೋಪಾಯಗಳ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾನೈಟ್ ಉದ್ಯಮ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ನಡೆಯುತ್ತಿರುವ ಗಣಿಗಾರಿಕೆಯನ್ನು ಅಧ್ಯಯನ ನಡೆಸಲು ಮತ್ತು ರಾಜ್ಯದ ಗಣಿಗಾರಿಕೆ ನಿಯಮಗಳು ಉದ್ಯಮಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ರಚಿಸುವ ಸಂಬಂಧ ಸಮಿತಿಯೊಂದನ್ನು ರಚಿಸಲಾಗಿದೆ ಎಂದರು.

ವಿವಿಧ ರಾಜ್ಯಗಳ ಕಲ್ಲು ಗಣಿಗಾರಿಕೆ ಅಧ್ಯಯನಕ್ಕಾಗಿ ರಚಿಸಿರುವ ಸಮಿತಿ ವರದಿಯಾಧರಿಸುವ ಜತೆಗೆ ರಾಜಸ್ತಾನ್ ಮಾದರಿ ಗಣಿಗಾರಿಕೆ ನಿಯಮಗಳನ್ನು ಅಳವಡಿಸಿಕೊಳ್ಳಲು ಚಿಂತನೆ ನಡೆಸಲಾಗಿದೆ ಎಂದ ಅವರು, ರಾಜಸ್ತಾನ್ ಸೇರಿ ಇತರ ರಾಜ್ಯಗಳ ಗಣಿಗಾರಿಕೆ ನಡೆಸುವ ಸಂಬಂಧ ಅಧ್ಯಯನ ನಡೆಸಿರುವ ಸಮಿತಿಯೂ ಈಗಾಗಲೇ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ. ಈ ಸಂಬಂಧ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಅಧಿಕಾರಿಗಳ ಸಭೆ ನಡೆಸಿ ಗಣಿಗಾರಿಕೆಯಲ್ಲಿನ ನಿಯಮ ಬದಲಿಸುವ ಕುರಿತಂತೆ ಕ್ರಮಕೈಗೊಳ್ಳಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದೊಳಗೆ, 798 ಮಿಲಿಯನ್ ಕ್ಯೂಬಿಕ್ ಮೀಟರ್ ಗ್ರಾನೈಟ್ ನಿಕ್ಷೇಪವಿರುವುದಾಗಿ ಕಂಡುಕೊಳ್ಳಲಾಗಿದೆ. 450 ಆಲಂಕಾರಿಕ ಶಿಲೆಕಲ್ಲು ಗುತ್ತಿಗೆಗಳನ್ನು ಮಂಜೂರು ಮಾಡಲಾಗಿದೆ. ಪ್ರಸ್ತುತ 242 ಕಲ್ಲು ಗಣಿ ಗುತ್ತಿಗೆಗಳು ಚಾಲ್ತಿಯಲ್ಲಿವೆ ಎಂದು ಮಾಹಿತಿ ನೀಡಿದರು.

ಗ್ರಾನೈಟ್ ಮತ್ತು ಕಲ್ಲುಗಣಿಗಾರಿಕೆ ನಿಯಂತ್ರಣಕ್ಕೆ ಕೆಎಂಎಂಸಿಆರ್ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಈ ನಿಯಮಗಳ ಮೂಲಕ ಸರಕಾರಿ ಮತ್ತು ಪಟ್ಟಾ ಜಮೀನುಗಳಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗುತ್ತದೆ. ಹರಾಜು ಮೂಲಕ ಗಣಿಗಾರಿಕೆಗೆ ಅನುಮತಿ ನೀಡಲಾಗುತ್ತಿದೆ ಎಂದರು.

ರಾಜ್ಯದ ಚಾಮರಾಜನಗರ ಜಿಲ್ಲಾ ವ್ಯಾಪ್ತಿಯ ಕಪ್ಪುಶಿಲೆ ಹಾಗೂ ಇಳಕಲ್‌ನ ಪಿಂಕ್ ಗ್ರಾನೈಟ್ ವಿಶ್ವವಿಖ್ಯಾತಿಯನ್ನು ಪಡೆದಿವೆ ಎಂದ ಅವರು, ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಉದ್ಯಮ, ಪರಿಸರ ಸ್ನೇಹಿ ಹಾಗೂ ಸರಕಾರದ ಬೊಕ್ಕಸಕ್ಕೆ ಉತ್ತಮ ಆದಾಯ ತಂದುಕೊಡುವ ನಿಟ್ಟಿನಲ್ಲಿ ಗಣಿಗಾರಿಕೆ ನಿಯಮಗಳನ್ನು ರೂಪಿಸಲಾಗುವುದು ಎಂದು ಅವರು ತಿಳಿಸಿದರು.

ಚೀನಾ ದೇಶದ ನಂತರ ಭಾರತ ವಿಶ್ವದಲ್ಲಿ ಅತಿ ದೊಡ್ಡ ಗ್ರಾನೈಟ್ ಉದ್ಯಮ ನಡೆಸುತ್ತಿದೆ. ದೇಶದ ವಿವಿಧ ಭಾಗಗಳಲ್ಲಿ 200ಕ್ಕೂ ಹೆಚ್ಚು ಮಾದರಿಯ ಕಲ್ಲುಗಳು ಲಭ್ಯವಿವೆ. ದೇಶದ ಗ್ರಾನೈಟ್ ಉದ್ಯಮ ಅಭಿವೃದ್ಧಿಗಾಗಿ ಗ್ರಾನೈಟ್ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದೆ ಎಂದು ರಾಜಶೇಖರ ಪಾಟೀಲ್ ವಿವರಿಸಿದರು.

ಕೇಂದ್ರ ಗಣಿ ಭೂವಿಜ್ಞಾನ ಇಲಾಖೆ ನಿರ್ದೇಶಕಿ ಡಾ.ವೀಣಾ ಕುಮಾರಿ ಮಾತನಾಡಿ, ಗ್ರಾನೈಟ್ ಮತ್ತು ಕಲ್ಲುಗಣಿಗಾರಿಕೆ ನಡೆಸುವ ರಾಜ್ಯಗಳು ತಮ್ಮದೇ ಆದ ನಿಯಮ ರೂಪಿಸಿಕೊಳ್ಳಲು ಅಧಿಕಾರ ಹೊಂದಿವೆ. ಸಮಿತಿ ಗಣಿಗಾರಿಕೆ ನಿಯಮಗಳಲ್ಲಿ ತಿದ್ದುಪಡಿ ತರುವ ಅವಶ್ಯಕತೆಯನ್ನು ಪರಿಗಣಿಸಿದೆ ಹಾಗೂ ಇದಕ್ಕಾಗಿ ರಚಿಸಿರುವ ಉಪಸಮಿತಿಗಳು ಗುತ್ತಿಗೆ ಕಾಲಾವಧಿ, ಗುತ್ತಿಗೆ ನೀಡುವ ಒಟ್ಟು ಪ್ರದೇಶ ಹಾಗೂ ಇನ್ನುಳಿದ ಮಾಹಿತಿಯನ್ನು ಸಂಗ್ರಹಿಸಿ ನೀಡಲಿದೆ ಎಂದರು.

ಈ ಸಂದರ್ಭದಲ್ಲಿ ಎಫ್‌ಐಜಿಎಸ್ ಸಂಸ್ಥಾಪಕ ನಿರ್ದೇಶಕ ಆರ್.ವೀರಮಣಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News