52 ಕೋಟಿ ರೂ. ವಂಚನೆ: ಮೂರು ಮಹಿಳೆಯರು ಸೇರಿ ನಾಲ್ವರ ಬಂಧನ

Update: 2019-01-08 15:11 GMT

ಬೆಂಗಳೂರು, ಜ.8: 52 ಕೋಟಿ ರೂ. ವಂಚನೆ ಪ್ರಕರಣ ಸಂಬಂಧ ಮೂವರು ಮಹಿಳೆಯರು ಸೇರಿ ನಾಲ್ವರನ್ನು ಇಲ್ಲಿನ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಸಂದೀಪ್ ಗುರುರಾಜ್, ಚಾರುಸ್ಮಿತಾ, ಅಮ್ರಿತ್ ಚೆಂಗಪ್ಪ ಮತ್ತು ಮೀರಾ ಚೆಂಗಪ್ಪ ಎನ್ನಲಾಗಿದ್ದು, ಇದೇ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ವಿಶಾಲ್ ಸೋಮಣ್ಣ ಎಂಬಾತ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಸಂದೀಪ್ ಗುರುರಾಜ್, ಕಳೆದ ಹದಿನೈದು ವರ್ಷಗಳಿಂದ ಮಣಿಪಾಲ್ ಗ್ರೂಪ್ಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಹಂತ ಹಂತವಾಗಿ 52 ಕೋಟಿ ಗೂ ಹೆಚ್ಚು ಹಣವನ್ನು ವಂಚಿಸಿದ್ದಾನೆ ಎಂದು ದೂರಲಾಗಿದೆ. ಆರೋಪಿ ಗುರುರಾಜ್ ಮೊದಲಿಗೆ ಕಂಪೆನಿ ಮುಖ್ಯಸ್ಥನ ಖಾತೆಯಿಂದ 7.65 ಕೋಟಿ ರೂ. ತನ್ನ ಹೆಸರಿಗೆ ಮತ್ತು ಆತನ ಪತ್ನಿ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದನು ಎನ್ನಲಾಗಿದೆ.

ನಂತರ ಹಂತ ಹಂತವಾಗಿ ಎಲ್ಲರೂ ಒಟ್ಟಿಗೆ ಸೇರಿ ಸುಮಾರು 52 ಕೋಟಿಗೂ ಹೆಚ್ಚು ವಂಚನೆ ಮಾಡಿದ್ದು, ಆರೋಪಿತರು ವಂಚನೆ ಮಾಡಿದ್ದ ಹಣದಿಂದ, ಬೆಂಗಳೂರಿನ ಪದ್ಮನಾಭ ನಗರದಲ್ಲಿ ನಿವೇಶನ, ತಮಿಳುನಾಡಿನ ಶ್ರೀರಂಗಂನಲ್ಲಿ 32 ಲಕ್ಷದ ಮನೆ, ಮುಂಬೈ ಥಾಣೆಯ ಲೋದ ಅಪಾರ್ಟ್‌ಮೆಂಟ್‌ನಲ್ಲಿ 95 ಲಕ್ಷ ಮೌಲ್ಯದ ನಿವೇಶನ ಖರೀದಿಸಿದ್ದರು ಎಂದು ತಿಳಿದುಬಂದಿದೆ.

ಅದೇ ರೀತಿ, ಕನಕಪುರ ರಸ್ತೆ ಬಳಿಯೂ 1.25 ಕೋಟಿ ರೂ. ಮೌಲ್ಯದ ಅಪಾರ್ಟ್‌ಮೆಂಟ್ ಮತ್ತು ಜಿಗಣಿಯಲ್ಲಿ 20 ಲಕ್ಷದ ನಿವೇಶನ ಅನ್ನು ಖರೀದಿಸಿದ್ದಾರೆ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಕಂಪೆನಿಯ ಮುಖ್ಯಸ್ಥ ನೀಡಿದ ದೂರಿನ ಮೇರೆಗೆ ಪ್ರಕರಣ ತನಿಖೆ ನಡೆಸಿದ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿ, ಎರಡು ಕಾರು ಜಪ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News