ಬಡವರು-ರೈತರ ಸಮಸ್ಯೆ ಬಗೆಹರಿಸುವಲ್ಲಿ ಕೇಂದ್ರ ವಿಫಲ: ಎಚ್.ಕೆ.ಪಾಟೀಲ್

Update: 2019-01-10 13:34 GMT

ಬೆಂಗಳೂರು, ಜ.10: ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸರಕಾರ ಕೇವಲ ಭಾಷಣಗಳಿಗಷ್ಟೇ ಸೀಮಿತವಾಗಿದೆ. ಬಡವರು, ರೈತರು, ಕಾರ್ಮಿಕರು ಸೇರಿದಂತೆ ಯಾವ ವರ್ಗಗಳ ಸಮಸ್ಯೆಗಳಿಗೂ ಪರಿಹಾರ ಒದಗಿಸಿಲ್ಲ ಎಂದು ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ನಗರದಲ್ಲಿರುವ ಭಾರತೀಯ ಅಭಿಯಂತರರ ಸಂಸ್ಥೆಯ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಹಿತದೃಷ್ಟಿಯಿಂದ ಮುಂದಿನ ಲೋಕಸಭಾ ಚುನಾವಣೆಯು ಅತ್ಯಂತ ಮಹತ್ವದ್ದಾಗಿದೆ. ಪ್ರಸ್ತುತ ರಾಷ್ಟ್ರದಲ್ಲಿ ಏನೆಲ್ಲಾ ನಡೆಯುತ್ತಿದೆ ಅನ್ನೋದು, ಜನರ ಮುಂದಿದೆ ಎಂದರು. ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರದ ಆಡಳಿತದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಲೂಟಿ ಎಲ್ಲವನ್ನೂ ಜನತೆ ಅರ್ಥ ಮಾಡಿಕೊಂಡಿದ್ದಾರೆ. ಆದರೂ, ಸುಳ್ಳು ಪ್ರಚಾರಗಳನ್ನು ಮಾಡಿ, ಜನರಲ್ಲಿ ಗೊಂದಲ ಸೃಷ್ಟಿಸುವ ಕೆಲಸವನ್ನು ಮಾಡಲಾಗುತ್ತಿದೆ. ಈ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಎಚ್.ಕೆ.ಪಾಟೀಲ್ ಹೇಳಿದರು.

ಕೇಂದ್ರ ಸರಕಾರ ಕಳೆದ ನಾಲ್ಕೂವರೆ ವರ್ಷಗಳಲ್ಲಿ ದೇಶದ ಜನತೆಗೆ ನೀಡಿರುವ ಭರವಸೆಗಳು ಕೇವಲ ರಾಜಕೀಯ ಭಾಷಣಗಳಿಗೆ ಸೀಮಿತವಾಗಿದೆ. ಹಿಂದಿನ ಯುಪಿಎ ಸರಕಾರದ ಸಾಧನೆಗಳನ್ನು ತಮ್ಮದೆಂದು ಬಿಂಬಿಸುವ ಮೂಲಕ ದೇಶದದಲ್ಲಿ ಗೊಂದಲದ ವಾತಾವರಣ ನಿರ್ಮಿಸುತ್ತಿರುವುದು ದುರಾದೃಷ್ಟಕರ ಸಂಗತಿ ಎಂದು ಎಚ್.ಕೆ.ಪಾಟೀಲ್ ಹೇಳಿದರು.

ಭ್ರಷ್ಟಾಚಾರವನ್ನು ಕಾರ್ಪೋರೇಟ್ ವಿಧಾನದಲ್ಲಿ ನಡೆಸಲಾಗುತ್ತಿದೆ. ಭ್ರಷ್ಟಾಚಾರದ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಕೇಳುವ ಪ್ರಶ್ನೆಗೆ ಉತ್ತರ ನೀಡಬೇಕಾದ ಪ್ರಧಾನಿ ಮೋದಿ, ಸಂಸತ್ತಿಗೆ ಬರುವುದಿಲ್ಲ. ಭ್ರಷ್ಟಾಚಾರ ನಿಗ್ರಹದ ಬಗ್ಗೆ ಮಾತನಾಡುವ ಬಿಜೆಪಿಯವರು, ಲೋಕಪಾಲ ನೇಮಕದ ಕುರಿತು ಚಕಾರವೆತ್ತುವುದಿಲ್ಲ ಎಂದು ಅವರು ಕಿಡಿಗಾರಿದರು.

ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡೆದುಕೊಳ್ಳುವ ಕೆಲಸವನ್ನು ಕೇಂದ್ರ ಸರಕಾರ ಮಾಡಿದೆ. ದೇಶದ ಅತ್ಯುನ್ನತ ತನಿಖಾ ಸಂಸ್ಥೆಯ ಸಿಬಿಐ ಮುಖ್ಯಸ್ಥರನ್ನು ರಾತ್ರೋರಾತ್ರಿ ಕಿತ್ತೊಗೆಯಲಾಗಿತ್ತು. ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಸುಪ್ರೀಂಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳು, ಬಹಿರಂಗವಾಗಿ ದೇಶದಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆ ಆತಂಕದಲ್ಲಿರುವ ಕುರಿತು ಎಚ್ಚರಿಕೆ ನೀಡಿದ್ದರು ಎಂದು ಅವರು ಸ್ಮರಿಸಿದರು.

ಕೇಂದ್ರ ಸರಕಾರದ ವೈಫಲ್ಯಗಳು, ಯುಪಿಎ ಸರಕಾರದ ಅವಧಿಯಲ್ಲಿ ಮಾಡಿರುವ ಸಾಧನೆಗಳನ್ನು ಮುಂದಿಟ್ಟುಕೊಂಡು, ರಾಜ್ಯದಲ್ಲಿ ಹೊಸ ಆಲೋಚನೆಗಳ ಮೂಲಕ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಇಳಿಯುತ್ತೇವೆ. ಜನರ ಮನೆ, ಮನಸ್ಸಿಗೆ ಮುಟ್ಟುವ ಪ್ರಯತ್ನವನ್ನು ನಾವು ಮಾಡಲಿದ್ದೇವೆ ಎಂದು ಎಚ್.ಕೆ.ಪಾಟೀಲ್ ಹೇಳಿದರು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿಚಾರಗಳೇ ಇರುತ್ತವೆ. ರಾಜ್ಯದಲ್ಲಿ ಸಮ್ಮಿಶ್ರ ಸರಕಾರದಲ್ಲಿ ನಾವು ಪಾಲುದಾರರು ಆಗಿದ್ದರೂ, ಕಾಂಗ್ರೆಸ್ ಪಕ್ಷ ತನ್ನದೇ ಆದ ಅಸ್ತಿತ್ವವನ್ನು ಹೊಂದಿದೆ. ಸಮ್ಮಿಶ್ರ ಸರಕಾರವು ಐದು ವರ್ಷ ಅವಧಿ ಪೂರ್ಣಗೊಳಿಸಲಿದೆ. ಈ ಬಗ್ಗೆ ಯಾರಿಗೂ ಅನುಮಾನ ಬೇಡ. ಸಣ್ಣ ಪುಟ್ಟ ಸಮಸ್ಯೆಗಳಿದ್ದರೆ, ಅದನ್ನು ರಾಹುಲ್‌ಗಾಂಧಿ ಹಾಗೂ ದೇವೇಗೌಡರು ಬಗೆಹರಿಸಿಕೊಳ್ಳುತ್ತಾರೆ ಎಂದು ಅವರು ತಿಳಿಸಿದರು.

ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ನನಗೆ ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿದ್ದಾರೆ. ಇದಕ್ಕಾಗಿ, ರಾಹುಲ್‌ಗಾಂಧಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಅವರು ಹೇಳಿದರು.

ಅಸಮಾಧಾನವಿಲ್ಲ: ಸಚಿವ ಸಂಪುಟದಲ್ಲಿ ಸ್ಥಾನ ಸಿಗಲಿಲ್ಲ ಎಂದು ನಾನು ಅಸಮಾಧಾನಗೊಂಡಿಲ್ಲ. ಸಚಿವ ಸ್ಥಾನಗಳು ಇರುವುದು 33. ಆದರೆ, ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ಇರುವುದು ಒಂದೇ ಒಂದು. ಆದುದರಿಂದ, ನನಗೆ ಯಾವುದೇ ಅಸಮಾಧಾನವಿಲ್ಲ ಎಂದು ಎಚ್.ಕೆ.ಪಾಟೀಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News