ಕಗ್ಗದಾಸನಪುರ ಕೆರೆಯಲ್ಲಿ ನೊರೆ ಸಮಸ್ಯೆ: ನಿವಾಸಿಗಳ ಆಕ್ರೋಶ

Update: 2019-01-10 15:31 GMT

ಬೆಂಗಳೂರು, ಜ.10: ಬೆಳ್ಳಂದೂರು, ವರ್ತೂರು ಮತ್ತು ಕಲ್ಕೆರೆ ಕೆರೆಗಳ ಬಳಿಕ ಕಗ್ಗದಾಸನಪುರ ಕೆರೆಯಲ್ಲಿಯೂ ನೊರೆ ಸಮಸ್ಯೆ ಕಾಣಿಸಿಕೊಂಡಿದ್ದು, ಕೆರೆಯಲ್ಲಿ ನೊರೆ ಗಾಳಿಯಲ್ಲಿ ಹಾರಾಡುತ್ತ ಸುತ್ತಮುತ್ತಲಿನ ನಿವಾಸಿಗಳ ಮನೆಗೆ ಸೇರುತ್ತಿದೆ.

ಬೆಳ್ಳಂದೂರು ವರ್ತೂರು ಕೆರೆಯಲ್ಲಿ ಕಂಡು ಬಂದ ನೊರೆ ಬಗ್ಗೆ ಹೇಳಿದ್ದ ಕಗ್ಗದಾಸನಪುರ ಕೆರೆ ಸಮೀಪದ ನಿವಾಸಿಗಳು ಇದೀಗ ತಾವು ನೊರೆಗೆ ತುತ್ತಾಗಿ ಅವಕ್ಕಾಗಿದ್ದಾರೆ. ಕೆರೆಯಿಂದ ಹಾರಿ ಬರುತ್ತಿದ್ದ ನೊರೆಯ ಹಿಂಡನ್ನು ತಪ್ಪಿಸಿಕೊಳ್ಳಲು ನಿವಾಸಿಗಳು ಹರಸಾಹಸ ಮಾಡುವಂತಾಗಿದೆ.

ಕೆಲ ಮನೆಗಳ ಗೋಡೆ, ಕಾಂಪೌಂಡ್ ಮೇಲೆ ನೊರೆ ಕುಳಿತು ಬಣ್ಣವೇ ಮಾಸಿದಂತಾಗಿದೆ. ಕೆಟ್ಟ ಪರಿಸರದಿಂದ ಗಬ್ಬು ವಾಸನೆ ಹರಡಿ ಮೂಗು ಮುಚ್ಚಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಇಲ್ಲಿನ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ಹೆಚ್ಚಿನ ಪ್ರಮಾಣದಲ್ಲಿ ಕೊಳಚೆ ನೀರು ಕಗ್ಗದಾಸನಪುರ ಕೆರೆಗೆ ಹರಿದು ಬಂದಿದೆ. ಹಾಗಾಗಿ ಈ ಭಾಗದಲ್ಲಿ ದುರ್ವಾಸನೆ ಜತೆಗೆ ನೊರೆ ಕೂಡ ಕಾಣಿಸಿಕೊಂಡಿದೆ ಎಂದು ಕಗ್ಗದಾಸನಪುರ ನಿವಾಸಿಯೊಬ್ಬರು ಹೇಳಿದ್ದಾರೆ. ಪೈ ಲೇ ಔಟ್ ಮತ್ತು ವರ್ಸೋವಾ ಲೇ ಔಟ್‌ಗಳಲ್ಲಿ ಹೆಚ್ಚು ಕಾರ್ಖಾನೆಗಳ ಸ್ಥಾಪನೆಗೆ ಅವಕಾಶ ನೀಡಿರುವುದೇ ಇಂತಹ ದುಷ್ಪರಿಣಾಮಗಳಿಗೆ ಎಂದು ಮತ್ತೊಬ್ಬರು ಆರೋಪಿಸಿದ್ದು, ಕೆ.ಆರ್.ಪುರಂ ಮತ್ತು ಪೈ ಲೇ ಔಟ್‌ನಿಂದ ಕಗ್ಗದಾಸನಪುರ ಕೆರೆಗೆ ಕೊಳಚೆ ನೀರು ಹರಿದು ಬರುತ್ತಿದೆ ಎನ್ನಲಾಗಿದೆ.

ಈ ಸಂಬಂಧ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸ್ಥಳೀಯರು ದೂರು ನೀಡಲಾಗಿದೆ. ದೂರಿನ ಅನ್ವಯ ಮಂಡಳಿಯ ತಂಡ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ದೊಡ್ಡ ಮೋರಿಗಳಿಂದ ಕೊಳಚೆ ನೀರು ಹರಿದು ಬರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿದೆ. ಈ ಕುರಿತು ಜಲಮಂಡಳಿ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಇದೇ ವೇಳೆ ಪರಿಸರ ಮಾಲಿನ್ಯ ಮಂಡಳಿಯು ಮಾಲಿನ್ಯವನ್ನು ಉಂಟು ಮಾಡುವ ಮೂರು ದೊಡ್ಡ ಮಟ್ಟದ ಕಾರ್ಖಾನೆಗಳನ್ನು ಗುರುತಿಸಿ ಕ್ರಮಕ್ಕೆ ಮುಂದಾಗಿದೆ.

ಕೋಳಿವಾಡ ನೇತೃತ್ವದ ಸಮಿತಿಯು ಕೆರೆ ಪ್ರದೇಶಕ್ಕೆ ಭೇಟಿ ನೀಡಿ 3 ಎಕರೆ 24 ಗುಂಟೆ ಒತ್ತುವರಿಯಾಗಿರುವುದನ್ನು ಪತ್ತೆ ಹೆಚ್ಚಿದೆ. ಒತ್ತುವರಿ ಮಾತ್ರವಲ್ಲದೆ, ಕಟ್ಟಡದ ಅವಶೇಷಗಳು, ಕಸ ಕಡ್ಡಿಗಳನ್ನು ಕೆರೆ ದಂಡೆ ಮೇಲೆ ಸುರಿಯಲಾಗಿದೆ ಎಂದು ಕಗ್ಗದಾಸನಪುರ ಕೆರೆ ಪ್ರದೇಶದ ನಿವಾಸಿಗಳು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News