ಬಿಎಂಟಿಸಿ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಲಾಭದತ್ತ ಕೊಂಡೊಯ್ಯಲು ಶ್ರಮ ವಹಿಸುವೆ: ಎನ್.ಎ.ಹಾರೀಸ್

Update: 2019-01-11 15:34 GMT

ಬೆಂಗಳೂರು, ಜ.11: ನಷ್ಟದಲ್ಲಿರುವ ಬಿಎಂಟಿಸಿಯನ್ನು ಲಾಭದತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುವುದು. ನನಗೆ ಲಾಭ-ನಷ್ಟ ಮುಖ್ಯವಲ್ಲ. ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸಂಪರ್ಕ ಕಲ್ಪಿಸುವುದು ನಮ್ಮ ಮೊದಲ ಆಧ್ಯತೆಯಾಗಿದೆ ಎಂದು ಶಾಸಕ ಹಾಗೂ ಬಿಎಂಟಿಸಿ ಅಧ್ಯಕ್ಷ ಎನ್.ಎ.ಹಾರೀಸ್ ಹೇಳಿದ್ದಾರೆ.

ಶುಕ್ರವಾರ ಶಾಂತಿನಗರದ ಬಿಎಂಟಿಸಿ ಪ್ರಧಾನ ಕಚೇರಿಯಲ್ಲಿ ಆಯೋಜಿಸಿದ್ದ ಬಿಎಂಟಿಸಿ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದುವರೆಗೂ ನಿಗಮದಲ್ಲಿ ಏನಾಗಿದೆ, ಏನಾಗಿಲ್ಲ ಎಂಬ ಬಗ್ಗೆ ಮಾಹಿತಿ ಇಲ್ಲ. ಮುಂದಿನ ದಿನಗಳಲ್ಲಿ ಈ ಕುರಿತು ತಿಳಿದುಕೊಂಡು ಒಂದೊಂದಾಗಿ ಕ್ರಮಕೈಗೊಳ್ಳುವೆ ಎಂದು ತಿಳಿಸಿದರು.

ಬಿಎಂಟಿಸಿ ನಿಗಮದಲ್ಲಿ ತಂತ್ರಜ್ಞಾನ ಹೇಗೆ ಬಳಕೆ ಮಾಡಿಕೊಳ್ಳಬೇಕು ಹಾಗೂ ಮೆಟ್ರೋಗೆ ಬಿಎಂಟಿಸಿ ಹೇಗೆ ಸಂಪರ್ಕ ಮಾಡಬೇಕೆಂಬ ನಿಟ್ಟಿನಲ್ಲಿ ಕೆಲವು ಬದಲಾವಣೆ ಮಾಡಲಾಗುವುದು. ನಾವಿಂದು ಡಿಜಿಟಲ್ ಯುಗದಲ್ಲಿದ್ದೇವೆ. ನಿಗಮವನ್ನು ಇನ್ನೂ ಯಾವ ರೀತಿ ಇನ್ನಷ್ಟು ಡಿಜಿಟಲ್ ಮಾಡಿ ಜನರಿಗೆ ಹತ್ತಿರ ಕೊಂಡೊಯ್ಯಬೇಕೆಂಬ ಗುರಿ ಇದೆ ಎಂದು ಅವರು ನುಡಿದರು.

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ನನಗೆ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ. ಅದನ್ನು ಸಮರ್ಥವಾಗಿ ನಿಬಾಯಿಸುತ್ತೇನೆ. ಈಗಾಗಲೇ 40 ಲಕ್ಷದಷ್ಟು ಪ್ರಯಾಣಿಕರು ಬಸ್‌ನಲ್ಲಿ ಸಂಚರಿಸುತ್ತಿದ್ದಾರೆ. ಎಲ್ಲ ದಿಕ್ಕೂಗಳಲ್ಲಿ ಬಸ್ ಸಂಪರ್ಕ ಮಾಡಲು ಏನೇನು ಸಾಧ್ಯತೆಗಳಿವೆ ಅವನ್ನು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ನಗರದಲ್ಲಿರುವ ಪ್ರತಿಯೊಬ್ಬರಿಗೂ ಬಿಎಂಟಿಸಿ ಜನಸ್ನೇಹಿಯಾಗಿ ಕೊಂಡೊಯ್ಯಲು ಪ್ರಯತ್ನ ಮಾಡುತ್ತೇನೆ ಎಂದರು.

ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ: ಈಗ ನಗರದಲ್ಲಿ ನಲವತ್ತೈದು ಲಕ್ಷ ಜನ ಸಂಚಾರ ಮಾಡುತ್ತಾರೆ. ಅವರಿಗೆ ಉತ್ತಮ ಸಾರಿಗೆ ನೀಡುವುದು ನಮ್ಮ ಉದ್ದೇಶ. ಹಾಗೇ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುವುದು ನಮ್ಮೆಲ್ಲರ ಗುರಿಯೂ ಒಂದೇ ಆಗಿದೆ. ಇದರಲ್ಲಿ ಯಾವುದೇ ಸ್ವಾರ್ಥವಿಲ್ಲ. ಇಂದು ನಮ್ಮ ಸ್ನೇಹಿತರು ಅಧಿಕಾರ ಸ್ವೀಕರಿಸುತ್ತಿದ್ದಾರೆ. ನಿಗಮದ ಏಳಿಗೆಗಾಗಿ ಒಟ್ಟಾಗಿ ಶ್ರಮಿಸುತ್ತೇವೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರಸಾದ್, ಸೇರಿದಂತೆ ನಿಗಮದ ಸಿಬ್ಬಂದಿ ಶುಭಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News