‘ಆಪರೇಷನ್ ಆತಂಕ’: ಬಿರುಸುಗೊಂಡ ರಾಜಕೀಯ ಚಟುವಟಿಕೆ

Update: 2019-01-14 13:37 GMT

ಬೆಂಗಳೂರು, ಜ. 14: ‘ಸಂಕ್ರಾಂತಿ ಬಳಿಕ ರಾಜ್ಯದಲ್ಲಿ ಕ್ರಾಂತಿ ಸಂಭವಿಸಲಿದೆ’ ಎಂಬ ಬಿಜೆಪಿ ಮುಖಂಡರ ಹೇಳಿಕೆಗೆ ಪುಷ್ಟಿ ನೀಡುವ ರೀತಿಯಲ್ಲಿ ‘ಆಪರೇಷನ್ ಆತಂಕ’ದ ಕಾರ್ಮೋಡ ಕೈ, ಕಮಲ ಮುಖಂಡರಲ್ಲಿ ಭೀತಿ ಸೃಷ್ಟಿಸಿದ್ದು, ತಮ್ಮ ಶಾಸಕರ ರಕ್ಷಣೆಗೆ ಉಭಯ ಪಕ್ಷಗಳ ಮುಖಂಡರು ಹರಸಾಹಸ ಪಡುತ್ತಿದ್ದಾರೆ.

ಬಜೆಟ್ ಪೂರ್ವಭಾವಿ ಸಭೆ ನೆಪದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಸಚಿವರು ನಗರದ ಖಾಸಗಿ ಹೊಟೇಲ್‌ನಲ್ಲಿ ಸುದೀರ್ಘ ಸಮಾಲೋಚನೆ ನಡೆಸಿದ್ದು, ‘ಆಪರೇಷನ್ ಕಮಲ’ಕ್ಕೆ ಪ್ರತಿತಂತ್ರ ಹೆಣೆಯುವ ಸಂಬಂಧ ಚರ್ಚಿಸಿದರು ಎಂದು ಹೇಳಲಾಗಿದೆ.

ಈ ಮಧ್ಯೆಯೇ ದಿಲ್ಲಿಯಲ್ಲಿ 2 ದಿನಗಳಿಂದ ಬೀಡುಬಿಟ್ಟಿರುವ ಬಿಜೆಪಿ ಶಾಸಕರು, ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸಮಾಲೋಚನೆ ನಡೆಸಿದ್ದಾರೆ. ‘ಸಂಕ್ರಾಂತಿಯ ನಂತರ ಮೈತ್ರಿ ಸರಕಾರ ಪತನಗೊಳ್ಳುತ್ತದೆ ಎಂಬುದನ್ನು ಮಾಧ್ಯಮಗಳಿಂದ ತಿಳಿದುಕೊಂಡಿದ್ದೇನೆ. ಬಿಜೆಪಿಯಂತೂ ಸರಕಾರ ಉರುಳಿಸುವ ಕೆಲಸಕ್ಕೆ ಯಾವುದೇ ಕಾರಣಕ್ಕೂ ಕೈ ಹಾಕುವುದಿಲ್ಲ. ಆದರೆ, ಮೈತ್ರಿ ಸರಕಾರ ತಾನಾಗೆ ಉರುಳಿದರೆ ನಾವು ಸರಕಾರ ರಚಿಸಲು ಸಿದ್ಧ’ ಎಂದು ಬಿಎಸ್‌ವೈ ಹೇಳಿದ್ದಾರೆ.

ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಮೈತ್ರಿ ಸರಕಾರ ಅಸ್ಥಿರಕ್ಕೆ ಬಿಜೆಪಿ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದು, ಬಿಜೆಪಿಗೆ ತಿರುಗೇಟು ನೀಡಲು ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ರಣತಂತ್ರದಲ್ಲಿ ತೊಡಗಿರುವುದು ಗುಟ್ಟಾಗಿ ಏನೂ ಉಳಿದಿಲ್ಲ.

‘ಬೀ ಅಲರ್ಟ್’: ಆಪರೇಷನ್ ಕಮಲದ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಯಾವುದೇ ಕಾರಣಕ್ಕೂ ಆಪರೇಷನ್‌ಗೆ ಅವಕಾಶ ನೀಡಬೇಡಿ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಕ್ಷಣೆಗೆ ಎಲ್ಲರೂ ಬದ್ಧರಾಗಿರಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಸಚಿವರಿಗೆ ನಿರ್ದೇಶನ ನೀಡಿದ್ದಾರೆಂದು ಗೊತ್ತಾಗಿದೆ.

ಮುಂಬರುವ ಲೋಕಸಭೆ ಚುನಾವಣೆ ನಮಗೆ ಬಹಳ ಪ್ರಮುಖ. ಅಲ್ಲಿಯವರೆಗೂ ನಾವು ಅತ್ಯಂತ ಎಚ್ಚರಿಕೆಯಿಂದ ಇರಬೇಕು. ನಿಮ್ಮ ನಿಮ್ಮ ಜಿಲ್ಲೆಯ ಶಾಸಕರ ರಕ್ಷಣೆಯ ಜವಾಬ್ದಾರಿ ನಿಮ್ಮದೇ. ಸಚಿವರ ಮೇಲೆ ಹೆಚ್ಚಿನ ಹೊಣೆಗಾರಿಕೆ ಇದೆ ಎಂದು ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆಂದು ಹೇಳಲಾಗಿದೆ.

ಆಪರೇಷನ್ ಕಮಲದ ಬಗ್ಗೆ ಯಾವುದೇ ಕಾರಣಕ್ಕೂ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಬೇಡಿ. ಆಪರೇಷನ್ ಕಮಲ ಈ ಬಾರಿಯೂ ಯಶಸ್ವಿಯಾಗಲು ಸಾಧ್ಯವಿಲ್ಲ. ಏನೇ ಆದರೂ ಯಾವೊಬ್ಬ ಸಚಿವರೂ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಬಾರದು ಎಂದು ಸಿದ್ದರಾಮಯ್ಯ ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.

ಇನ್ನೂ ಎರಡು ದಿನ ದಿಲ್ಲಿಯಲ್ಲೆ: ಲೋಕಸಭೆ ಚುನಾವಣೆ ಸಿದ್ದತೆ ಹಿನ್ನೆಲೆಯಲ್ಲಿ ದಿಲ್ಲಿಯಲ್ಲೆ ಇದ್ದ ಬಿಜೆಪಿ ಶಾಸಕರು, ಸಂಸದರು ಇನ್ನೂ ಎರಡು ದಿನ ದಿಲ್ಲಿಯಲ್ಲೆ ಉಳಿದುಕೊಳ್ಳಲಿದ್ದು, ಕೆಲ ಶಾಸಕರು ಗುರುಗ್ರಾಮಕ್ಕೆ ಹೋಗಿ ಬರಲಿದ್ದಾರೆ ಎಂದು ಬಿಎಸ್‌ವೈ ಹೇಳಿದ್ದಾರೆ.

ನಾನು ಹಾಗೂ ಕೆಲ ಹಿರಿಯ ನಾಯಕರು ಬೆಂಗಳೂರಿಗೆ ತೆರಳುತ್ತಿದ್ದೇವೆ. ಸರಕಾರ ಉರುಳಿಸುವುದು ನಮ್ಮ ಮುಖ್ಯ ಗುರಿಯಲ್ಲ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ಗೆಲ್ಲಿಸುವುದೇ ನಮ್ಮ ಮುಖ್ಯ ಉದ್ದೇಶ. ಈ ವಿಷಯದ ಕುರಿತು ಹೊಸದಿಲ್ಲಿಯಲ್ಲಿ ನಡೆದ ಸಭೆಯಲ್ಲಿ ಚರ್ಚೆ ಮಾಡಲಾಗಿದೆ ಎಂದು ಯಡಿಯೂರಪ್ಪ ಸ್ಪಷ್ಟಣೆ ನೀಡಿದ್ದಾರೆ.

‘ಸಂಕ್ರಾತಿ ನಂತರ ಕ್ರಾಂತಿಯಾಗುತ್ತದೆಂಬ ಬಿಜೆಪಿ ನಾಯಕರ ಹೇಳಿಕೆ ಹಾಸ್ಯಾಸ್ಪದ. ಮೈತ್ರಿ ಸರಕಾರ ದೀಪಾವಳಿಗೆ ಬೀಳುತ್ತೆ, ಕ್ರಿಸ್‌ಮಸ್‌ಗೆ ಬೀಳುತ್ತೆ, ಸಂಕ್ರಾಂತಿಗೆ ಬೀಳುತ್ತೆ ಎಂದು ಬಿಜೆಪಿ ಮುಖಂಡರು ಹೇಳುತ್ತಲೇ ಇದ್ದಾರೆ. ಬಜೆಟ್ ಮತ್ತು ಲೋಕಸಭೆ ಚುನಾವಣೆ ಸಂಬಂಧ ಚರ್ಚಿಸಿದ್ದೇವೆ. ಬಿಜೆಪಿಯವರು ಅಪಪ್ರಚಾರ ನಡೆಸುತ್ತಿದ್ದಾರೆ. ಆದರೆ, ಮೈತ್ರಿ ಸರಕಾರ ಸುಭದ್ರವಾಗಿದೆ’

-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News