ಉಡುಪಿ: ಮಹಾಭಾರತ ಗ್ರಂಥ ಬಿಡುಗಡೆ
Update: 2019-01-14 17:03 GMT
ಉಡುಪಿ, ಜ. 14: ರಥಬೀದಿಯಲ್ಲಿ ಬ್ರಹ್ಮರಥೋತ್ಸವ ಮೆರವಣಿಗೆ ಸಂದರ್ಭದಲ್ಲಿ ಪರ್ಯಾಯ ಪಲಿಮಾರು ಮಠದ ತತ್ವಸಂಶೋಧನಾ ಸಂಸತ್‌ನಿಂದ ಪ್ರಕಾಶಿತವಾದ ಮಹಾಭಾರತ ಕನ್ನಡ ಸಂಪುಟ ಮತ್ತು ಸಂಸ್ಕೃತ ಸಂಪುಟಗಳಲ್ಲದೇ ಇ-ಬುಕ್ ಅನ್ನು ಪೇಜಾವರ ಮಠದ ಶ್ರೀ ವಿಶ್ವೇಶತೀರ್ತ ಸ್ವಾಮೀಜಿ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ಆಚಾರ್ಯ ಮಧ್ವರು ಸ್ವತಃ ವಿದ್ವಾಂಸರಾಗಿದ್ದರೂ, ದೇಶಾದ್ಯಂತ ಹಸ್ತಪ್ರತಿಗಳನ್ನು ಪರಿಷ್ಕರಿಸಿ ಶುದ್ಧಪಾಠವನ್ನು ತೋರಿಸಿ ಕೊಟ್ಟಿದ್ದಾರೆ. ನೈಜಾರ್ಥವನ್ನು ತಿಳಿಸಲು ಮಹಾಭಾರತ ತಾತ್ಪರ್ಯ ನಿರ್ಣಯ ಗ್ರಂಥವನ್ನು ರಚಿಸಿದ್ದರು. ವಾದಿರಾಜ ಶ್ರೀಗಳು ಲಕ್ಷಾಲಂಕಾರ ಗ್ರಂಥವನ್ನು ಬರೆದಿದ್ದು, ಈ ಹಿನ್ನೆಲೆಯಲ್ಲಿ ಪಲಿಮಾರು ಶ್ರೀಗಳ ಹೊಸ ಪುಸ್ತಕ ಪ್ರಕಾಶನ ಕಾರ್ಯ ಶ್ಲಾಘನೀಯ. ನಿತ್ಯ ಪಾರಾಯಣಕ್ಕೆ ಈ ಪುಸ್ತಕಗನ್ನೇ ಉಪಯೋಗಿಸುತ್ತೇನೆ ಎಂದರು.
ವಿಜಯೀಂದ್ರ ಆಚಾರ್ಯ ಪ್ರಸ್ತಾವಿಕವಾಗಿ ಮಾತನಾಡಿದರು. ತತ್ವ ಸಂಶೋಧನಾ ಸಂಸತ್ ನಿರ್ದೇಶಕ ಡಾ. ವಂಶೀಕೃಷ್ಣ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.