ಫರಂಗಿಪೇಟೆ ಮೀನು ಮಾರುಕಟ್ಟೆ ತೆರವಿಗೆ ವಿಧಿಸಿದ್ದ ಗಡುವು ಇಂದು ಅಂತ್ಯ
► ಸ್ಥಳ ಗುರುತಿಸಿ ಶಾಶ್ವತ ಮಾರುಕಟ್ಟೆ ನಿರ್ಮಿಸುವಂತೆ ವ್ಯಾಪಾರಸ್ಥರ ಒತ್ತಾಯ
ಬಂಟ್ವಾಳ, ಜ.15: ಪುದು ಗ್ರಾಪಂ ವ್ಯಾಪ್ತಿಯ ಫರಂಗಿಪೆಟೆಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ರೈಲ್ವೆ ಇಲಾಖೆಗೊಳಪಟ್ಟ ಜಾಗದಲ್ಲಿ ಕಾರ್ಯಾಚರಿಸುತ್ತಿರುವ ಮೀನು ಮಾರುಕಟ್ಟೆಯನ್ನು ತೆರವುಗೊಳಿಸಲು ರೈಲ್ವೆ ಇಲಾಖೆ ವಿಧಿಸಿದ್ದ ಅಂತಿಮ ಜ.15ಕ್ಕೆ ಕೊನೆಗೊಳ್ಳಲಿದೆ.
ಕೆಲವು ವರ್ಷಗಳಿಂದ ಫರಂಗಿಪೇಟೆ ಹಳೆ ರಸ್ತೆಯಯಲ್ಲಿರುವ ಪುದು ಗ್ರಾಪಂನ ಜಾಗದಲ್ಲೇ ಮೀನು ಮಾರುಕಟ್ಟೆ ಕಾರ್ಯಾಚರಿಸುತ್ತಿತ್ತು. ಆದರೆ, ಪಂಚಾಯತ್‌ಗೆ ನೂತನ ಕಟ್ಟಡ ನಿರ್ಮಿಸುವ ನೆಪದಲ್ಲಿ ಮೀನು ಮಾರುಕಟ್ಟೆಯನ್ನು ಹೆದ್ದಾರಿ ಬದಿಯಲ್ಲಿರುವ ಬಸ್ ನಿಲ್ದಾಣದ ಪಕ್ಕದ ಸ್ಥಳಕ್ಕೆ ಪಂಚಾಯತ್ ಸ್ಥಳಾಂತರಿಸಿತು. ನಂತರ ಜಿಲ್ಲಾಧಿಕಾರಿಯ ಆದೇಶದಂತೆ ಹೆದ್ದಾರಿ ಬದಿಯ ಅಂಗಡಿಗಳನ್ನು ತೆರವುಗೊಳಿಸುವಾಗ ಈ ಮಾರುಕಟ್ಟೆಯನ್ನು ರಸ್ತೆಯ ಇನ್ನೊಂದು ಬದಿಯಲ್ಲಿ ರೈಲ್ವೆ ಇಲಾಖೆಗೆ ಸಂಬಂಧಿಸಿದ ಖಾಲಿ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಇದೀಗ ರೈಲ್ವೇ ಇಲಾಖೆ ತನ್ನ ಜಮೀನಿ ನಿಂದ ಮಾರುಕಟ್ಟೆಯನ್ನು ತೆರವುಗೊಳಿಸಲು ಗಡುವು ವಿಧಿಸಿರುವುದರಿಂದ ಮೀನು ವ್ಯಾಪಾರಸ್ಥರ ಬದುಕು ಅತಂತ್ರವಾಗಿದೆ.
ಹತ್ತನೇ ಮೈಲುಕಲ್ಲಿನಲ್ಲಿ ಸ್ಥಳ ಪರಿಶೀಲನೆ: ಮೀನು ಮಾರುಕಟ್ಟೆಗೆ ಸ್ಥಳ ಗುರುತಿಸುವ ನಿಟ್ಟಿನಲ್ಲಿ ಫರಂಗಿಪೇಟೆಗೆ ಇತ್ತೀಚೆಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್, ಇಲ್ಲಿನ ಹತ್ತನೇ ಮೈಲುಕಲ್ಲು ಬಳಿ ಸ್ಥಳ ಪರಿಶೀಲನೆ ನಡೆಸಿದ್ದರು. ಆದರೆ, ಮೀನು ಮಾರುಕಟ್ಟೆಗೆ ಶಾಶ್ವತ ಜಮೀನು ಲಭಿಸದ ಕಾರಣ ಈಗಿರುವ ಮೀನು ಮಾರುಕಟ್ಟೆಯನ್ನು ಅದರ ಪಕ್ಕದ ಜಮೀನಿಗೆ ತಾತ್ಕಾಲಿಕವಾಗಿ ವರ್ಗಾಯಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದರು. ಅದರೆ, ಅದು ಮೀನು ಮಾರಾಟಗಾರರಿಗೆ ಸೂಕ್ತವಾಗಿಲ್ಲ. ಅಲ್ಲದೆ ಅದು ಹೆದ್ದಾರಿಗೆ ಸೇರಿದ ಸ್ಥಳವಾಗಿದೆ. ಇದೀಗ ಹೆದ್ದಾರಿಯ ಸಮೀಪ ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣಗೊಳ್ಳುತ್ತಿದೆ ಎಂದು ಹೇಳುತ್ತಾರೆ ಗ್ರಾಪಂ ಅಧ್ಯಕ್ಷ ರಮ್ಲಾನ್.
ಮತ್ತೆ ತಾತ್ಕಾಲಿಕ ಮಾರುಕಟ್ಟೆಯೇ ನಿರ್ಮಾಣವಾಗುತ್ತಿದ್ದು, ಶಾಶ್ವತ ವ್ಯವಸ್ಥೆಯ ನಿರೀಕ್ಷೆಯಲ್ಲಿದ್ದ ಮೀನುಗಾರರು ಮತ್ತೆ ನಿರಾಶರಾಗಿದ್ದಾರೆ.
ಫರಂಗಿಪೇಟೆಯ ರಾಷ್ಟ್ರೀಯ ಹೆದ್ದಾರಿಯ ಸಮೀಪವೇ ಸದ್ಯ ಮೀನು ಮಾರುಕಟ್ಟೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇಲ್ಲಿ ಮೀನು ಮಾರುಕಟ್ಟೆ ಕಾರ್ಯಾರಂಭಿಸಿದರೆ ಅದರ ಮುಂಭಾಗದಲ್ಲಿರುವ ಆಸ್ಪತ್ರೆ, ಶಾಲೆ ಹಾಗೂ ಸಭಾಂಗಣಕ್ಕೆ ತೊಂದರೆಯಾಗಬಹುದು ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯು ಗ್ರಾಪಂ ಜೊತೆಗೆ ಸ್ಥಳೀಯರ ಅಭಿಪ್ರಾಯಕ್ಕೂ ಮನ್ನಣೆ ನೀಡಿ ಮೀನು ಮಾರುಕಟ್ಟೆಗೆ ಪ್ರತ್ಯೇ ಜಮೀನು ಗುರುತಿಸಬೇಕು ಎಂದು ಸ್ಥಳೀಯರ ಒತ್ತಾಯ.
► ಇಂದು ಗಡುವು ಅಂತ್ಯ
ಫರಂಗಿಪೇಟೆ ಮೀನು ಮಾರುಕಟ್ಟೆಯು ರೈಲ್ವೆ ಇಲಾಖೆಯ ವ್ಯಾಪ್ತಿಗೆ ಒಳಪಟ್ಟ ಸ್ಥಳದಲ್ಲಿ ಕಾರ್ಯಾಚರಿಸುತ್ತಿದ್ದ ಕಾರಣ ಅದನ್ನು ತೆರವುಗೊಳಿಸಲು ರೈಲ್ವೆ ಇಲಾಖೆ ಪುದು ಗ್ರಾಪಂಗೆ ಎರಡು ವರ್ಷಗಳ ಹಿಂದೆಯೇ ಸೂಚನೆ ನೀಡಿತ್ತು. ಆದರೆ ತೆರವುಗೊಳ್ಳದ ಕಾರಣ ಇತ್ತೀಚೆಗೆ ರೈಲ್ವೆ ಇಲಾಖೆಯೇ ಇದನ್ನು ತೆರವುಗೊಳಿಸಲು ಮುಂದಾಗಿತ್ತು. ಈ ಸಂದರ್ಭ ಪುದು ಗ್ರಾಪಂ ಮೀನುಗಾರರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಒಂದೂವರೆ ತಿಂಗಳ ಕಾಲಾವಕಾಶ ಕೋರಿತ್ತು. ಈ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ಕೈಬಿಟ್ಟ ರೈಲ್ವೆ ಇಲಾಖೆ ಅಧಿಕಾರಿಗಳು ಜ.15ರವರೆಗೆ ತೆರವಿಗೆ ಕಾಲಾವಕಾಶ ನೀಡಿದ್ದರು. ಮಂಗಳವಾರಕ್ಕೆ ಈ ಗಡುವು ಮುಕ್ತಾಯಗೊಳ್ಳಲಿದೆ.
ಹಲವು ವರ್ಷಗಳಿಂದ ಮೀನಿನ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದೇವೆ. ಇದೀಗ ಪಂಚಾಯತ್ ಸೂಚಿಸಿದ ರಾಷ್ಟ್ರೀಯ ಹೆದ್ದಾರಿ ಸಮೀಪ ಮಾರುಕಟ್ಟೆಯನ್ನು ಸ್ಥಳಾಂತರಿಸಲಿದ್ದು, ಇದರ ಕೆಲಸ ನಡೆಯುತ್ತಿದೆ. ಮೂಲ ಕಸುಬಾಗಿರುವ ಮೀನಿನ ವ್ಯಾಪಾರಸ್ಥರಿಗೆ ಶಾಶ್ವತ ಮಾರುಕಟ್ಟೆ ನಿರ್ಮಾಣ ಮಾಡಬೇಕೆಂಬುದು ನಮ್ಮ ಒತ್ತಾಯ.
ರಿಯಾಝ್ ಫರಂಗಿಪೇಟೆ, ವ್ಯಾಪಾರಸ್ಥ
ರಾಷ್ಟ್ರೀಯ ಹೆದ್ದಾರಿಗೆ ಸೇರಿದ ಜಾಗದಲ್ಲಿ ಇದೀಗ ನಿರ್ಮಾಣವಾಗುತ್ತಿರುವ ತಾತ್ಕಾಲಿಕ ಮೀನು ಮಾರುಕಟ್ಟೆಯನ್ನು ಹೆದ್ದಾರಿಯಿಂದ 10 ಫೀಟ್‌ನಷ್ಟು ವಾಹನಗಳಿಗೆ ಪಾರ್ಕಿಂಗ್‌ಗೆ ಬಿಟ್ಟು, 140 ಫೀಟ್ ಉದ್ದದ ಮಾರ್ಕೆಟ್ ನಿರ್ಮಿಸುವಂತೆ ಸೂಚಿಸಲಾಗಿದೆ. ಮೀನಿನ ತ್ಯಾಜ್ಯಗಳು ತೆರೆದ ಚರಂಡಿಯಲ್ಲಿ ಹೋಗದಂತೆ ಪಿವಿಸಿ ಪೈಪ್ ಮುಖಾಂತರ ಡ್ರೈನೇಜ್‌ಗೆ ಸಂಪರ್ಕ ಕಲ್ಪಿಸಲಾಗುವುದು. ಗ್ರಾಪಂ ವ್ಯಾಪ್ತಿಯಲ್ಲಿ ಸೂಕ್ತ ಸರಕಾರಿ ಜಾಗವನ್ನು ಗುರುತಿಸಿ ಮುಂದಿನ ದಿನಗಳಲ್ಲಿ ಪಂಚಾಯತ್ ವತಿಯಿಂದಲೇ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಿಸಲಾಗುವುದು.
ರಮ್ಲಾನ್ ಮಾರಿಪಳ್ಳ, ಪುದು ಗ್ರಾಪಂ ಅಧ್ಯಕ್ಷ
ಪೇಟೆ ಹಾಗೂ ಜನ ಸೇರುವ ಜಾಗದಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಬೇಕೆ ಹೊರತು ಒಳಪ್ರದೇಶಗಳಲ್ಲ. ಹಲವು ವರ್ಷಗಳಿಂದ ವ್ಯಾಪಾರ ಮಾಡುತ್ತಾ ಬಂದವರಿಗೆ ಹೆದ್ದಾರಿಯ ಸಮೀಪದಲ್ಲಿಯೇ ಸರಕಾರಿ ಜಾಗ ಗುರುತು ಮಾಡಿ, ಸಮಸ್ಯೆ ಪರಿಹಾರ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಯಲ್ಲಿ ಒತ್ತಾಯಿಸಿದ್ದೆವು. ಇದೀಗ ಜಿಲ್ಲಾಧಿಕಾರಿಯ ಸೂಚನೆಯ ಮೇರೆಗೆ ಹೆದ್ದಾರಿಯಲ್ಲಿಸಾರ್ವಜನಿಕರಿಗೆ ತೊಂದರೆಯಾಗದಂತೆ ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣ ಮಾಡಲಾಗಿದೆ.
ಉಮರ್ ಫಾರೂಕ್, ಮಾಜಿ ಜಿಪಂ ಸದಸ್ಯ