‘ಪ್ರಜಾ ಪ್ರಣಾಳಿಕೆ ಚರ್ಚೆ’ ಆರಂಭಿಸಿದ ಪ್ರಕಾಶ್ ರೈ

Update: 2019-01-20 14:39 GMT

ಬೆಂಗಳೂರು, ಜ.20: ನಗರದ ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ ಮುಂಬರುವ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿರುವ ನಟ, ಚಿಂತಕ ಪ್ರಕಾಶ್ ರೈ ಅವರು, ಮತದಾರರೊಂದಿಗೆ ‘ಪ್ರಜಾ ಪ್ರಣಾಳಿಕೆ ಚರ್ಚೆ’ ಅಭಿಯಾನ ಆರಂಭಿಸಿದ್ದಾರೆ.

ರವಿವಾರ ನಗರದ ಎಂಜಿ ರಸ್ತೆಯ ಗಾಂಧಿಪಾರ್ಕ್‌ನಲ್ಲಿ ತಮ್ಮ ಅಭಿಮಾನಿ ಬಳಗ ಹಾಗೂ ಸೆಂಟ್ರಲ್ ಲೋಕಸಭಾ ಕ್ಷೇತ್ರದ ನಾಗರಿಕರೊಂದಿಗೆ ಜೊತಗೂಡಿ, 8 ಆಟೊಗಳ ಮೂಲಕ ನಡೆಸುವ ‘ಪ್ರಜಾ ಪ್ರಣಾಳಿಕೆ ಚರ್ಚೆ’ ಅಭಿಯಾನ ಮೆರವಣಿಗೆಗೆ ಅವರು ಚಾಲನೆ ನೀಡಿದರು.

ಬಳಿಕ ಈ ಬಗ್ಗೆ ಮಾತನಾಡಿದ ಪ್ರಕಾಶ್ ರೈ, ಇಂದಿನಿಂದ ಸತತ ಹತ್ತು ದಿನಗಳ ಕಾಲ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಉದ್ದಕ್ಕೂ ಪ್ರಣಾಳಿಕೆ ಚರ್ಚೆ ಮಾಡಲಿದ್ದು, ಈ ವ್ಯಾಪ್ತಿಗೆ ಬರುವ 8 ವಿಧಾನಸಭೆ ಕ್ಷೇತ್ರಗಳಿಗೆ ಒಂದೊಂದು ಆಟೊದಂತೆ ಸಂಚಾರ ಮಾಡಲಾಗುವುದು ಎಂದು ತಿಳಿಸಿದರು.

ಕ್ಷೇತ್ರದ ಎಲ್ಲ ಭಾಗಗಳಲ್ಲಿಯೂ ಸಹ ತಮ್ಮ ತಂಡದ ಸದಸ್ಯರು ಸಂಚರಿಸಿ ಅಲ್ಲಿನ ನಾಗರಿಕರ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಪ್ರಜಾ ಪ್ರಣಾಳಿಕೆಯ ತಯಾರಿ ನಡೆಸಲಿದ್ದೇವೆ. ಇದರ ಜೊತೆಗೆ, ರವಿವಾರ ಸಿ.ವಿ ರಾಮನ್ ನಗರದಲ್ಲಿ ಸಾರ್ವ ಜನಿಕರಿಂದ ಪ್ರಣಾಳಿಕೆ ಕುರಿತು ಅಭಿಪ್ರಾಯ ಸಂಗ್ರಹಣೆ ಮಾಡಲಿದ್ದೇವೆ ಎಂದರು.

  ಪ್ರಣಾಳಿಕೆ ಸಿದ್ಧ ಮಾಡಲು ತಜ್ಞರು ಮುಖ್ಯ. ಜತೆಗೆ, ಈ ಕ್ಷೇತ್ರದ ಓರ್ವ ಮತದಾರನೊ ಸೇರಿದಂತೆ ಎಲ್ಲರ ನಾಡಿ ಮಿಡಿತ ಅರಿಯಬೇಕು. ಅದೇ ರೀತಿ, ದಿನ ನಿತ್ಯದ ಸಮಸ್ಯೆಗಳಿಗೆ ನಾವು ಪರಿಹಾರ ಒದಗಿಸಬೇಕು. ಈ ನಿಟ್ಟಿನಿಂದಲೇ ನೇರವಾಗಿ ಮತದಾರರೊಂದಿಗೆ ಮಾತನಾಡಲು ಮುಂದಾಗಿದ್ದೇನೆ ಎಂದು ಪ್ರಕಾಶ್ ರೈ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News