ಶಾಸಕ ಗಣೇಶ್ ರನ್ನು ‘ರೌಡಿ ಪಟ್ಟಿ’ಗೆ ಸೇರಿಸಲು ಕ್ರಮ: ಗೃಹ ಸಚಿವ ಎಂ.ಬಿ.ಪಾಟೀಲ್

Update: 2019-01-23 12:49 GMT

ಬೆಂಗಳೂರು, ಜ. 23: ಶಾಸಕ ಆನಂದ್‌ಸಿಂಗ್ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಕಂಪ್ಲಿ ಕ್ಷೇತ್ರದ ಶಾಸಕ ಗಣೇಶ್ ಅವರನ್ನು ಶೀಘ್ರದಲ್ಲೆ ಬಂಧಿಸಲಾಗುವುದು. ಅಲ್ಲದೆ, ಅವರ ವಿರುದ್ಧ ಕಾನೂನು ರೀತಿ ‘ರೌಡಿ ಪಟ್ಟಿ’ಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದ ಮೂರನೆ ಮಹಡಿಯಲ್ಲಿನ ತನ್ನ ಕೊಠಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಶಾಸಕ ಗಣೇಶ್ ಮೇಲೆ ಈಗಾಗಲೇ ಎಫ್‌ಐಆರ್ ದಾಖಲಾಗಿದೆ. ಪೊಲೀಸರು ಕೈಕಟ್ಟಿ ಕೂತಿಲ್ಲ ಎಂದು ಹೇಳಿದರು.

ಪೊಲೀಸರು ಶಾಸಕ ಗಣೇಶ್ ಅವರ ಬಂಧನಕ್ಕೆ ಶೋಧ ಕಾರ್ಯ ಕೈಗೊಂಡಿದ್ದು, ಶೀಘ್ರವೇ ಅವರನ್ನು ಬಂಧಿಸಲಿದ್ದಾರೆ. ಈ ಪ್ರಕರಣದಲ್ಲಿ ರಾಜ್ಯ ಸರಕಾರವಾಗಲಿ, ನಾನಾಗಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ಅತ್ಯಂತ ಗಂಭೀರ ಪ್ರಕರಣ ಎಂದು ಅವರು ಹೇಳಿದರು.

ಆರಂಭದಲ್ಲಿ ಗಲಾಟೆ ಪ್ರಕರಣದ ಬಗ್ಗೆ ಸರಿಯಾಗಿ ಮಾಹಿತಿ ಇರಲಿಲ್ಲ. ಹೀಗಾಗಿ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವರು ಭಿನ್ನ ಹೇಳಿಕೆಗಳನ್ನು ನೀಡಿದ್ದಾರೆ. ಆದರೆ, ಡಿಸಿಎಂ ಡಾ.ಜಿ.ಪರಮೇಶ್ವರ್, ಉಸ್ತುವಾರಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ನಾನು ಆಸ್ಪತ್ರೆಗೆ ಭೇಟಿ ನೀಡಿ, ಆನಂದ್ ಸಿಂಗ್ ಅವರನ್ನು ನೋಡಿದ ಬಳಿಕ ಪೈಶಾಚಿಕ ಕೃತ್ಯದ ಅರಿವಾಯಿತು. ಕುಟುಂಬದ ಸದಸ್ಯರು ಆತಂಕ ಮತ್ತು ಗೊಂದಲದಲ್ಲಿದ್ದರು. ದೂರು ದಾಖಲಿಸಲು ನಾವುಗಳೇ ಸಲಹೆ ನೀಡಿದ್ದೆವು. ಅದರಂತೆ ದೂರು ದಾಖಲಾಗಿದೆ. ಅಲ್ಲದೆ, ಪಕ್ಷ ಗಣೇಶ್ ಅವರನ್ನು ಅಮಾನತುಗೊಳಿಸಿದೆ. ತನಿಖೆ ನಡೆಸುತ್ತಿದ್ದು, ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಸ್ಪಷ್ಟನೆ ನೀಡಿದರು.

ಶಾಸಕ ಆನಂದ್ ಸಿಂಗ್ ಮೇಲಿನ ಹಲ್ಲೆ ವೇಳೆ ಸ್ಥಳದಲ್ಲೆ ಇದ್ದ ಸಚಿವ ಇ.ತುಕರಾಂ ಮತ್ತು ಶಾಸಕ ತನ್ವಿರ್ ಸೇಠ್ ಅವರು ಸಾಕ್ಷಿದಾರರಾಗಿದ್ದಾರೆ. ಶೀಘ್ರವೇ ಗಣೇಶ್ ಅವರನ್ನು ಬಂಧಿಸಿ, ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಯಾರೊಬ್ಬರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News