ಗೌರಿ ಲಂಕೇಶ್ ಹತ್ಯೆಗೂ ಇವಿಎಂ ತಿರುಚುವಿಕೆಗೂ ಸಂಬಂಧವಿಲ್ಲ: ಕವಿತಾ ಲಂಕೇಶ್

Update: 2019-01-24 16:07 GMT

ಬೆಂಗಳೂರು,ಜ.24: 2014ರ ಲೋಕಸಭೆ ಚುನಾವಣೆಗೂ ಮೊದಲು ಪತ್ರಕರ್ತೆ ಗೌರಿ ಲಂಕೇಶ್‌ಗೆ ಮತಯಂತ್ರ ತಿರುಚುವಿಕೆಯ ಬಗ್ಗೆ ತಿಳಿದಿತ್ತು ಮತ್ತು ಆ ಬಗ್ಗೆ ಆಕೆ ತನ್ನ ಪತ್ರಿಕೆಯಲ್ಲಿ ಬರೆಯಲು ಒಪ್ಪಿಕೊಂಡಿದ್ದರು. ಹಾಗಾಗಿ ಆಕೆಯನ್ನು ಹತ್ಯೆ ಮಾಡಲಾಯಿತು ಎಂಬ ಸ್ವಘೋಷಿತ ಸೈಬರ್ ಪರಿಣತನ ಹೇಳಿಕೆಯನ್ನು ಗೌರಿ ಲಂಕೇಶ್ ಸಹೋದರಿ ಕವಿತಾ ಲಂಕೇಶ್ ತಳ್ಳಿಹಾಕಿದ್ದಾರೆ.

“ನನಗೆ ಈ ಕುರಿತು ಮಾಹಿತಿಯಿದೆ ಮತ್ತು ಇದು ಸಂಪೂರ್ಣ ಸುಳ್ಳು. ಅವರು ಯಾಕಾಗಿ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ನನಗೆ ತಿಳಿದಿಲ್ಲ. ನನ್ನ ಸಹೋದರಿಯನ್ನು ಇವಿಎಂ ವಿಷಯದಲ್ಲಿ ಗುರಿ ಮಾಡಲಾಯಿತು ಎನ್ನುವುದನ್ನು ನಾನು ನಂಬುವುದಿಲ್ಲ” ಎಂದು ಕವಿತಾ ಲಂಕೇಶ್ ತಿಳಿಸಿದ್ದಾರೆ.  

ಪತ್ರಕರ್ತೆ ಗೌರಿ ಲಂಕೇಶ್‌ರನ್ನು 2017ರ ಸೆಪ್ಟಂಬರ್ 5ರಂದು ಸಂಜೆ ಬೆಂಗಳೂರಿನ ಮನೆಯ ಮುಂದೆ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಘಟನೆ ಸಂಬಂಧಿಸಿ ಈವರೆಗೆ ಹದಿನಾರು ಮಂದಿಯನ್ನು ಬಂಧಿಸಲಾಗಿದೆ ಮತ್ತು ವಿಶೇಷ ತನಿಖಾ ತಂಡ 18 ಮಂದಿಯ ವಿರುದ್ಧ 9,235 ಪುಟಗಳ ದೋಷಾರೋಪ ಸಲ್ಲಿಸಿದೆ. 2014ರ ಚುನಾವಣೆಯಲ್ಲಿ ಬಿಜೆಪಿ ಮತಯಂತ್ರಗಳನ್ನು ತಿರುಚಿತ್ತು ಎಂದು ಅಮೆರಿಕ ಮೂಲದ ಸೈಬರ್ ತಜ್ಞ ಸೈಯದ್ ಶುಜಾ ಆರೋಪಿಸಿದ್ದರು. “ಈ ಬಗ್ಗೆ ವರದಿ ಮಾಡುವಂತೆ ನಾನು ಪತ್ರಕರ್ತೆ ಗೌರಿ ಲಂಕೇಶ್ ಅವರಲ್ಲಿ ಮನವಿ ಮಾಡಿದ್ದೆ ಎಂದು ಅವರು ತಿಳಿಸಿದ್ದರು. ನನ್ನ ಸಹೋದರಿಯ ಹತ್ಯೆ ರಾಜಕೀಯ ಸಂಚಾಗಿತ್ತು. ಆದರೆ ಅದಕ್ಕೆ ಇಂಥ ತಿರುವುಗಳ ಮೇಲೆ ನನಗೆ ನಂಬಿಕೆಯಿಲ್ಲ. ಸದ್ಯ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ” ಎಂದು ಸಮಾಧಾನ ವ್ಯಕ್ತಪಡಿಸಿರುವ ಕವಿತಾ ಲಂಕೇಶ್, ಶುಜಾ ಹೇಳಿಕೆಯ ಹಿಂದೆ ರಾಜಕೀಯ ಉದ್ದೇಶವಿದೆ ಎಂದು ನನಗನಿಸುತ್ತದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News