ಸಮನ್ವಯ ಸಮಿತಿ ಸಭೆ: ಬರ ಪರಿಸ್ಥಿತಿಯ ನಿರ್ವಹಣೆ ಕುರಿತು ಚರ್ಚೆ

Update: 2019-01-24 17:04 GMT

ಬೆಂಗಳೂರು, ಜ. 24: ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಬಜೆಟ್ ಅಧಿವೇಶನಕ್ಕೆ ಮೊದಲೇ ಎಲ್ಲ ಕ್ಷೇತ್ರಗಳಿಗೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳುವ ಸಂಬಂಧ ಸಮನ್ವಯ ಸಮಿತಿ ಸಭೆಯಲ್ಲಿ ಸಮಾಲೋಚನೆ ನಡೆಸಲಾಗಿದೆ.

ಗುರುವಾರ ಇಲ್ಲಿನ ಕುಮಾರಕೃಪಾ ಅತಿಥಿ ಗೃಹದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದಾನಿಶ್ ಆಲಿ ಪಾಲ್ಗೊಂಡಿದ್ದರು.

ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ಸಂಬಂಧ ಚರ್ಚಿಸಿದ್ದು, ಈಗಾಗಲೇ ಸಚಿವರ ಅಧ್ಯಕ್ಷತೆಯಲ್ಲಿ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿದೆ. ಈ ತಂಡಗಳು ಈಗಾಗಲೇ ಅನೇಕ ಜಿಲ್ಲೆಗಳಿಗೆ ಭೇಟಿ ನೀಡಿ ಅಧಿಕಾರಿಗಳ ಜತೆ ಸಭೆ ನಡೆಸಿದೆ.

ಕುಡಿಯುವ ನೀರು ಪೂರೈಕೆ, ಜಾನುವಾರುಗಳಿಗೆ ಮೇವು ಹಾಗೂ ಜನ ಗುಳೆ ಹೋಗುವುದನ್ನು ತಪ್ಪಿಸಲು ಉದ್ಯೋಗ ಕಲ್ಪಿಸಲು ಕ್ರಮ ವಹಿಸಲಾಗಿದೆ ಎಂದ ಅವರು, ಕುಡಿಯುವ ನೀರಿನ ಲಭ್ಯತೆ ಇಲ್ಲದ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಸರಕಾರ ಕ್ರಮಕೈಗೊಂಡಿದೆ ಎಂದರು.

ಪರಿಶೀಲಿಸಿ ಕ್ರಮ: ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ಚರ್ಚಿಸಿದ್ದು, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾಗಿದ್ದ ರಮೇಶ್ ಜಾರಕಿಹೊಳಿ, ನಾಗೇಂದ್ರ, ಮಹೇಶ್ ಕುಮಟಳ್ಳಿ ಹಾಗೂ ಉಮೇಶ್ ಜಾಧವ್‌ಗೆ ನೋಟಿಸ್ ನೀಡಿದ್ದು, ಆಪೈಕಿ ಮೂರು ಮಂದಿ ಉತ್ತರ ನೀಡಿದ್ದಾರೆ.

‘ನಾವು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ, ಪಕ್ಷಕ್ಕೆ ನಿಷ್ಟರಾಗಿದ್ದೇವೆ. ನಾವು ಯಾವುದೇ ಪಕ್ಷ ವಿರೋಧಿ ಚಟುವಟಿಕೆಯನ್ನು ನಡೆಸಿಲ್ಲ. ಅಲ್ಲದೆ, ಬಿಜೆಪಿಯ ಯಾವುದೇ ನಾಯಕರನ್ನೂ ನಾವು ಭೇಟಿ ಮಾಡಿಲ್ಲ’ ಎಂದು ವಿವರಣೆ ನೀಡಿದ್ದಾರೆ. ಉಮೇಶ್ ಜಾಧವ್ ಇನ್ನೂ ಉತ್ತರ ನೀಡಿಲ್ಲ, ಅವರ ಉತ್ತರ ಬಂದ ಬಳಿಕ ಮುಂದಿನ ಕ್ರಮದ ಬಗ್ಗೆ ಆಲೋಚಿಸಲಾಗುವುದು ಎಂದರು.

ಸಂಸದೀಯ ಕಾರ್ಯದರ್ಶಿಗಳು ಮತ್ತು ಕೆಲ ನಿಗಮ ಮಂಡಳಿ ನೇಮಕ ಸಂಬಂಧವೂ ಚರ್ಚಿಸಿದ್ದು, ಶೀಘ್ರದಲ್ಲೆ ಬಾಕಿ ಉಳಿದಿರುವ ನಿಗಮ ಮಂಡಳಿಗೆ ನೇಮಕಾತಿ ಆದೇಶ ಹೊರಡಿಸಲು ಸೂಚನೆ ನೀಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಆಪರೇಷನ್ ಮುಕ್ತಾಯ: ಆಪರೇಷನ್ ಕಮಲ ಮುಕ್ತಾಯವಾಗಿದೆ. ಅವರ ಆಮಿಷಗಳಿಗೆ ಯಾರೂ ಬಲಿಯಾಗುವುದಿಲ್ಲ. ಆದರೆ, ಗೊಂದಲ ಸೃಷ್ಟಿಸಲು ಬಿಜೆಪಿ ನಾಯಕರು ಇದೆಲ್ಲವನ್ನು ಸೃಷ್ಟಿ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಇದೇ ವೇಳೆ ವಾಗ್ದಾಳಿ ನಡೆಸಿದರು.

ಲೋಕಸಭೆ ಚುನಾವಣೆ ಸೀಟು ಹಂಚಿಕೆ ಸಂಬಂಧ ಇಂದು ಯಾವುದೇ ಚರ್ಚೆ ಮಾಡಿಲ್ಲ. ಇನ್ನೂ ಮೂರು ನಾಲ್ಕು ದಿನಗಳ ಒಳಗಾಗಿ ಮತ್ತೊಮ್ಮೆ ಸಭೆ ಸೇರಿ ಸೀಟು ಹಂಚಿಕೆ ಸಂಬಂಧ ಚರ್ಚಿಸಲಾಗುವುದು. ಆ ಸಭೆಗೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಬರಬೇಕಾಗುತ್ತದೆ ಎಂದು ಸಿದ್ದರಾಮಯ್ಯ ನುಡಿದರು.

ಆನಂದ್ ಸಿಂಗ್ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಶಾಸಕ ಗಣೇಶ್ ವಿರುದ್ಧ ಈಗಾಗಲೇ ಪಕ್ಷ ಕ್ರಮ ಕೈಗೊಂಡಿದೆ. ಅಲ್ಲದೆ, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದು, ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಶಾಸಕರ ಗಲಾಟೆ ಸಮರ್ಥನೆ ಮಾಡುವ ಪ್ರಶ್ನೆಯೇ ಇಲ್ಲ ಎಂದರು.

ಸಾಮಾನ್ಯ ಕನಿಷ್ಟ ಕಾರ್ಯಕ್ರಮವನ್ನು ಆಧರಿಸಿ ಬಜೆಟ್ ಮಂಡನೆಗೆ ಮೈತ್ರಿ ಸರಕಾರ ಸಿದ್ದತೆ ನಡೆಸಿದ್ದು ಈ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಅಲ್ಲದೆ, ಪರಿಶಿಷ್ಟ ನೌಕರರ ಭಡ್ತಿ ಮೀಸಲಾತಿ ಕಾಯ್ದೆ ಅನುಷ್ಟಾನ ಸಂಬಂಧ ಚರ್ಚಿಸಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಭಡ್ತಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರವು ದಲಿತ ವಿರೋಧಿ ನಿಲುವು ಅನುಸರಿಸುತ್ತಿದೆ ಎಂದು ಆರೋಪಿಸಿ, ಕುಮಾರಕೃಪಾ ಅತಿಥಿ ಗೃಹದ ಬಳಿ ದಲಿತ ಪರ ಸಂಘಟನೆಗಳ ಮುಖಂಡರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೂಡಲೇ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ತೆಗೆದುಕೊಂಡು, ತಮ್ಮ ವಾಹನದಲ್ಲಿ ಕರೆದುಕೊಂಡು ಹೋದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News