21 ಮಾರ್ಷಲ್‌ಗಳ ನೇಮಕಕ್ಕೆ ಬಿಬಿಎಂಪಿ ಚಿಂತನೆ

Update: 2019-01-25 17:34 GMT

ಬೆಂಗಳೂರು, ಜ.25: ವರ್ತೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೆರೆಗೆ ಸೂಕ್ತ ಭದ್ರತೆ ಒದಗಿಸಲು ಮುಂದಾಗಿರುವ ಬಿಬಿಎಂಪಿ 21 ಮಾರ್ಷಲ್‌ಗಳನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಕೆರೆಯ ಸುತ್ತಮುತ್ತ ಹಗಲು-ರಾತ್ರಿ ತೀವ್ರ ನಿಗಾ ವಹಿಸಲು 21 ಮಾರ್ಷಲ್‌ಗಳನ್ನು ನೇಮಕ ಮಾಡುವ ಪ್ರಸ್ತಾವನೆಯನ್ನು ಬಿಬಿಎಂಪಿ ಸರಕಾರಕ್ಕೆ ಸಲ್ಲಿಸಿದ್ದು, ಸರಕಾರ ಅನುಮತಿ ನೀಡಿದ ಕೂಡಲೇ ಮಾರ್ಷಲ್‌ಗಳು ನೇಮಕಗೊಂಡು ಕೆಲಸ ನಿರ್ವಹಿಸಲಿದ್ದಾರೆ ಎಂದು ಪಾಲಿಕೆ ಆಯುಕ್ತ ಮಂಜುನಾಥ್‌ ಪ್ರಸಾದ್ ಹೇಳಿದ್ದಾರೆ.

ಬೆಂಗಳೂರು ನಗರದಲ್ಲಿ ಎಲ್ಲೆಂದರಲ್ಲಿ ಕಸ ಹಾಕುವುದನ್ನು ನಿಯಂತ್ರಿಸಲು ಮಾರ್ಷಲ್‌ಗಳನ್ನು ನೇಮಕ ಮಾಡಿಕೊಂಡಿದ್ದರಿಂದ ಕಸದ ಸಮಸ್ಯೆ ಹಲವು ಸ್ಥಳಗಳಲ್ಲಿ ನಿಯಂತ್ರಣವಾಗಿದೆ. ಅದೇ ರೀತಿ ವರ್ತೂರು ಕೆರೆಯ ಸುತ್ತಲೂ ಮಾರ್ಷಲ್‌ಗಳ ನೇಮಕದಿಂದ ಬೆಂಕಿ ಕಾಣಿಸಿಕೊಳ್ಳುವಂತಹ ಸಮಸ್ಯೆ ದೂರವಾಗಬಹುದು ಎಂದು ಅಂದಾಜಿಸಲಾಗಿದೆ.

ಕೆರೆಯ ನೀರಿಗೆ ರಾಸಾಯನಿಕ ಮಿಶ್ರಣ ಬರುತ್ತಿರುವುದರಿಂದ ಬೆಂಕಿ ಕಾಣಿಸಿಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ಇತ್ತೀಚಿನ ಬೆಳವಣಿಗೆಯಲ್ಲಿ ಕೆಲವು ಕಿಡಿಗೇಡಿಗಳು ಬಿಬಿಎಂಪಿಗೆ ಕೆಟ್ಟ ಹೆಸರು ತರಲು ಇಂತಹ ಕೃತ್ಯಗಳನ್ನು ನಡೆಸುತ್ತಿದ್ದಾರೆ ಎಂಬ ವಿಷಯ ಮಾಧ್ಯಮಗಳಲ್ಲಿ ಬಹಿರಂಗವಾಗಿತ್ತು. ಕೆರೆಯ ರಕ್ಷಣೆ ಹಿನ್ನೆಲೆಯಲ್ಲಿ ಮಾರ್ಷಲ್‌ಗಳನ್ನು ನೇಮಕ ಮಾಡಿಕೊಳ್ಳುವುದು ಸೂಕ್ತ ಎಂದು ಪಾಲಿಕೆ ಭಾವಿಸಿದ್ದು, ಮಾರ್ಷಲ್‌ಗಳ ನೇಮಕ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News