ಭಾರತೀಯತೆ ಎಂಬುದು ಬಹುತ್ವದಿಂದ ರೂಪಗೊಂಡಿದೆ: ಡಾ.ಬಂಜಗೆರೆ ಜಯಪ್ರಕಾಶ್

Update: 2019-01-26 15:58 GMT

ಬೆಂಗಳೂರು, ಜ.26: ಕರ್ನಾಟಕತ್ವ, ಕನ್ನಡತ್ವ, ಭಾರತೀಯತೆ ಎನ್ನುವುದು ಏಕಕಾರಿಯಲ್ಲ. ಅದು ಬಹುತ್ವದ ನೆಲೆಯಿಂದ ರೂಪಗೊಂಡಿರುವುದು. ಇದರಲ್ಲಿ ಹಲವು ಧರ್ಮ, ಭಾಷೆಗಳಿವೆ. ಹಲವು ಸಮುದಾಯಗಳಿವೆ ಎಂದು ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ಹೇಳಿದ್ದಾರೆ.

ಶನಿವಾರ ನಗರದ ಕಸಾಪದಲ್ಲಿ ನಾವೇ ಕರ್ನಾಟಕ ಸಂಘಟನೆ ಆಯೋಜಿಸಿದ್ದ ‘ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕದ ಸ್ಥಾನಮಾನ’ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕದ ಶಕ್ತಿಯಿರುವುದು ಬಹುತ್ವದಲ್ಲೇ ಹೊರತು, ಏಕತೆಯಲ್ಲಿ ಅಲ್ಲ ಎಂದು ನುಡಿದರು.

ಒಂದು ದೇಶವು ಭಾಷೆ ಅಥವಾ ಜನಾಂಗದಿಂದ ನಿರ್ಮಾಣವಾಗುತ್ತದೆಯೇ ಹೊರತು ಒಂದು ಸೀಮಿತ ಧರ್ಮದಿಂದ ಅಲ್ಲ ಎಂಬುದನ್ನು ಎಲ್ಲರೂ ಅರಿಯಬೇಕಿದೆ. ಇನ್ನು ಕರ್ನಾಟಕ ವಿಚಾರದಲ್ಲೂ ಕೊಂಕಣಿ, ಕೊಡವ, ತುಳು, ಮರಾಠಿ, ಉರ್ದು ಭಾಷಿಕರು, ಜೈನ, ಮುಸ್ಲಿಂ, ಬೌದ್ಧ ಧರ್ಮೀಯರು ನಮ್ಮ ಜತೆಯಲ್ಲಿದ್ದಾರೆ. ಅವುಗಳನ್ನು ಹೊರುತು ಪಡಿಸಿ ಕರ್ನಾಟಕತ್ವವನ್ನು ಕಾಣಲು ಸಾಧ್ಯವಿಲ್ಲ. ಹೀಗಾಗಿ, ಎಲ್ಲಾ ಜಾತಿ ಧರ್ಮ, ಭಾಷೆಗಳಿಂದ ಒಂದಾದ ರಾಜ್ಯ, ರಾಷ್ಟ್ರವನ್ನು ಬೇರ್ಪಡಿಸುವ ಬದಲು ಪ್ರಾದೇಶಿಕ ಸಂಸ್ಕೃತಿ, ಬೇಡಿಕೆಗಳಿಗೆ ಆದ್ಯತೆ ನೀಡಬೇಕು ಎಂದು ತಿಳಿದರು.

ಒಂದು ಭಾಷೆಯ ನೆಲೆಗಟ್ಟಿನಲ್ಲಿ ರಾಜ್ಯಗಳು ರೂಪತಾಳಿವೆ. ಅವುಗಳು ಪುರಾತನ ಕಾಲದಿಂದ ತನ್ನದೇ ಆದ ಧರ್ಮ, ಸಂಸ್ಕೃತಿ ಮೈಗೂಡಿಸಿಕೊಂಡು ಬಂದಿವೆ. ಅಂತೆಯೇ ಕರ್ನಾಟಕವು ಸೇರಿದಂತೆ ದಕ್ಷಿಣ ಭಾರತ ದ್ರಾವಿಡ ರಾಜ್ಯಗಳು ಅವೈದಿಕ ಧರ್ಮವನ್ನು ರೂಢಿಸಿಕೊಂಡು ಬಂದಿವೆ. ಆದರೆ, ಇಂದು ಅಖಿಲ ಭಾರತ ಹೆಸರಿನಲ್ಲಿ ಒಂದೇ ಧರ್ಮ, ಒಂದೇ ಭಾಷೆಯೆಂದು ಹೇಳಿಕೊಳ್ಳುತ್ತಾ, ಹಿಂದೂ ಧರ್ಮ ಹಾಗೂ ಹಿಂದಿ ಭಾಷೆಯನ್ನು ಎರವಲು ತಂದು ಹೇರುವ ಮೂಲಕ ಆ ರಾಜ್ಯಗಳ ಸಂಸ್ಕೃತಿ ಅಸ್ಮಿತೆಗೆ ಧಕ್ಕೆ ತರಲಾಗುತ್ತಿದೆ ಎಂದರು. ಪತ್ರಕರ್ತ ಅಗ್ನಿ ಶ್ರೀಧರ್ ಮಾತನಾಡಿ, ಕುಟುಂಬ ರಾಜಕಾರಣದಿಂದ ಇಂದು ದೇಶ-ರಾಜ್ಯಗಳು ನಲುಗಿ ಹೋಗಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಅರ್ಥವನ್ನೇ ಹಾಳು ಮಾಡುತ್ತಿವೆ. ಬಸವಣ್ಣನವರು ಕನ್ನಡವನ್ನು ಬರೆದರು. ಆದರೆ ಅವರು ಬರಿ ಕನ್ನಡಿಗರಿಗಾಗಿ ಬರೆದಿದ್ದಲ್ಲ, ಎಲ್ಲರಿಗಾಗಿ ಬರೆದದ್ದು. ಅದೇ ರೀತಿ, ರನ್ನ, ಪಂಪ ಮತ್ತಿತರರು ಬರೆದದ್ದು ಕೇವಲ ಕನ್ನಡಿಗರಿಗಾಗಿ ಅಲ್ಲ, ಎಲ್ಲರಿಗಾಗಿ. ಹಾಗೆಯೇ ರಾಜಕೀಯ ಕೂಡ ಎಲ್ಲರ ಸ್ವತ್ತು. ಇದನ್ನು ಪ್ರಜೆಗಳು ಪ್ರಶ್ನಿಸುವಂತಾಗಬೇಕು ಎಂದರು. ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರದ ನೀತಿಗಳು ರೈತ ಸ್ನೇಹಿಯಾಗಿಲ್ಲ. ಈ ನಾಡಿನಲ್ಲಿ ಸಾಲಬಾಧೆಯಿಂದ ಅಥವಾ ಬೆಳೆ ವಿಲದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಯಾವುದಾದರೂ ರಾಜಕಾರಣಿ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆ ಇದೆಯೇ ಎಂದು ಪ್ರಶ್ನಿಸಿದರು.

ದೇಶಕ್ಕೆ, ವಿಶ್ವಕ್ಕೆ ಅನ್ನ ಕೊಡುವ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಎಂದರೆ ನಮ್ಮ ವ್ಯವಸ್ಥೆಗಳು ಯಾವ ಮಟ್ಟಕ್ಕೆ ತಲುಪಿವೆ ಎಂಬುದನ್ನು ಅರಿಯಬಹುದು ಎಂದ ಕೋಡಿಹಳ್ಳಿ ಚಂದ್ರಶೇಖರ್, ಮಾರುವವರು ತಮಗೆ ಬೇಕಾದ ಬೆಲೆಯನ್ನು ನಿಗದಿಪಡಿಸಿಕೊಳ್ಳುವ ಅಧಿಕಾರ ಹೊಂದಿದ್ದಾರೆ. ಅದೇ ಅದನ್ನು ಬೆಳೆಯುವ ರೈತನಿಗೆ ಯಾಕೆ ಆ ಅಧಿಕಾರವಿಲ್ಲ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಘಟನೆ ಅಧ್ಯಕ್ಷ ಹಾಗೂ ಲೇಖಕ ಪಾರ್ವತೀಶ್ ಬಿಳಿದಾಳೆ, ಸದಸ್ಯ ಡಾ. ರವಿಕುಮಾರ್ ಬಾಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News