ಸಮಾನತೆ, ಸಹೋದರತೆ, ಭ್ರಾತೃತ್ವದ ಸಂದೇಶ ಸಾರಿದ ಸಾಂಸ್ಕೃತಿಕ ಕಾರ್ಯಕ್ರಮಗಳು

Update: 2019-01-26 16:29 GMT

ಬೆಂಗಳೂರು, ಜ.26: ನಗರದ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ 70ನೆ ಗಣರಾಜ್ಯೋತ್ಸವದ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ನೃತ್ಯಗಳ ಮೂಲಕ ಸಮಾನತೆ, ಸಹೋದರತೆ, ಭ್ರಾತೃತ್ವದ ಸಂದೇಶ ಸಾರಿದರು.

ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಒಂದೊಂದು ನೃತ್ಯದ ಮೂಲಕ ಜಾತಿ, ಧರ್ಮ ಮೀರಿದ, ಬಹುತ್ವದ ದೇಶ ನಮ್ಮದು. ಇಲ್ಲಿ ಎಲ್ಲರೂ ಸಮಾನರು. ಯಾರು ಯಾರನ್ನೂ ಭಿನ್ನ-ಭೇದ ಮಾಡದಂತೆ ಬದುಕಬೇಕು ಎಂಬ ಸಂದೇಶ ಹಾಗೂ ಕಾರ್ಗಿಲ್‌ನ ಹೋರಾಟದ ಇತಿಹಾಸವನ್ನು ನೃತ್ಯ ರೂಪಕದ ಮೂಲಕ ಪ್ರದರ್ಶಿಸಿ ನೋಡುಗರನ್ನು ರೋಮಾಂಚನಗೊಳಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಮೊದಲ ನೃತ್ಯರೂಪಕ ಸ್ವಾತಂತ್ರಪೂರ್ವದಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ಕಾನೂನು ರೂಪಿಸಿಕೊಳ್ಳಲಾಗುತ್ತಿತ್ತು. ಸ್ವಾತಂತ್ರ ನಂತರ ವಿಶಾಲ ಮನೋಭಾವ ಹೊಂದಿರುವ ಭಾರತೀಯರಾದ ನಾವು ಅವರ ಎಲ್ಲ ಕಾನೂನುಗಳನ್ನು ಬದಿಗಿಟ್ಟು ಭಾರತದ ಕಾನೂನನ್ನು ರೂಪಿಸಿ ಎಲ್ಲ ಧರ್ಮ, ಜಾತಿಗಳು ಒಂದೇ ಎಂದು ಸರಿ ಸಮಾನವಾದ ಹಕ್ಕು ನೀಡಬೇಕು ಎಂದು ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚಿಸಿದ ಸಂದರ್ಭದವನ್ನು, ಕೆಲವು ತುಣುಕುಗಳನ್ನು ಕೋನಪ್ಪನ ಅಗ್ರಹಾರದ ಗೋವಿಂದ ಶೆಟ್ಟಿ ಪಾಳ್ಯದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಶಮ್ಸ್ ಪ್ರೌಢಶಾಲೆಯ 800ವಿದ್ಯಾರ್ಥಿಗಳು ನೃತ್ಯ ರೂಪಕದಲ್ಲಿ ಮನ ಮುಟ್ಟುವಂತೆ ಕಟ್ಟಿಕೊಟ್ಟರು. ದೇಶದ ಸೈನ ಹಾಗೂ ಭದ್ರತಾ ವ್ಯವಸ್ಥೆ ಎಷ್ಟೇ ಬಲಿಷ್ಠವಿದ್ದರೂ ಶತ್ರುರಾಷ್ಟ್ರಗಳು ದೇಶದ ಮೇಲೆ ನಿರಂತರವಾದ ದಾಳಿ ನಡೆಸುತ್ತಿವೆ. ಸೈನಿಕರ ಕಣ್ಣು ತಪ್ಪಿಸಿ ಕಾರ್ಗಿಲ್ ಅನ್ನು ಆಕ್ರಮಿಸಿದ ಶತ್ರುರಾಷ್ಟ್ರದ ಸೈನಿಕರನ್ನು ತಮ್ಮ ಪ್ರಾಣವನ್ನು ಪಣವಿಟ್ಟು ಹೋರಾಡಿದ ಯುದ್ಧ ಕಥಾನಕವನ್ನು ಮುಂದಿನ ಪೀಳಿಗೆಗೆ ತಿಳಿಸುವ ಹಾಗೂ ಸೈನಿಕರಿಗೆ ಸ್ಫೂರ್ತಿಯಾಗಲಿ, ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ದೇಶದ ರಕ್ಷಣೆಗೆ ಧಾವಿಸಬೇಕು ಎಂಬ ಉದ್ದೇಶದೊಂದಿಗೆ ಹೊಂಗಸಂದ್ರದ ಅನಿಕೇತನ ಪಬ್ಲಿಕ್ ಶಾಲೆ ಅಂಜನಾಪುರದ ಹಿರಿಯ ಪ್ರಾಥಮಿಕ ಶಾಲೆ, ಬನ್ನೇರುಘಟ್ಟ ರಸ್ತೆಯ ನೇಕಾರ ನಗರದ ಎನ್‌ಬಿಎನ್ ವಿದ್ಯಾಮಂದಿರದ 700 ಮಕ್ಕಳು ಸೈನಿಕರಂತ ವೇಷಧರಿಸಿ ಕಾರ್ಗಿಲ್ ಯುದ್ಧ ಕಥಾನಕವನ್ನು ನೃತ್ಯ ರೂಪಕದಲ್ಲಿ ತಂದು ಪ್ರದರ್ಶಿಸಿದರು. ಇದಕ್ಕೆ ವೀಕ್ಷಕರು ಹಾಗೂ ಸೇನಾ ಸಿಬ್ಬಂದಿಗಳು ಭಾರಿ ಕರತಾಡನ ಮಾಡಿದರು.

ಇನ್ನು ಬಹುತ್ವ ಭಾರತ ಪರಿಕಲ್ಪನೆಯ ಮೂಲಕ ನಮ್ಮ ದೇಶದಲ್ಲಿ ಹಿಂದೂ, ಮುಸ್ಲಿಮ್, ಕ್ರೈಸ್ತ, ಬೌದ್ಧ, ಸಿಖ್ ಸೇರಿದಂತೆ ಎಲ್ಲರೂ ಒಟ್ಟಾಗಿದ್ದಾರೆ. ಎಲ್ಲ ಧರ್ಮಗಳ ಸಾರವೂ ಒಂದೇ ಆಗಿದ್ದು, ಅದಕ್ಕಿಂತ ಭಾರತೀಯತೆ ಮಿಗಿಲಾದುದು. ಎಲ್ಲ ಧರ್ಮದವರು ಅಣ್ಣ-ತಮ್ಮಂದಿರಂತೆ ಬಾಳುತ್ತಿದ್ದಾರೆ. ಭಾವೈಕ್ಯತೆ ಹಾಗೂ ಸಾಮರಸ್ಯ ಜೀವನವು ಭಾರತ ದೇಶದ ಮುನ್ನಡೆಗೆ ಬೆನ್ನೆಲುಬಾಗಿದೆ ಎಂಬ ಸಂದೇಶವನ್ನು ದೊಡ್ಡಬಿದರಕಲ್ಲಿನ ಗುರುಶ್ರೀ ವಿದ್ಯಾಕೇಂದ್ರ, ನಾಗಸಂದ್ರದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 600 ಮಕ್ಕಳು ಪೈಪೋಟಿಗಿಳಿದಂತೆ ನೃತ್ಯಕ್ಕೆ ಹೆಜ್ಜೆ ಹಾಕಿ ನೋಡುಗರನ್ನು ಬೆರಗುಗೊಳಿಸಿದರು.

ನಂತರ ಮೈದಾನದಕ್ಕಿಳಿದ ಎಎಸ್‌ಸಿ ಕೇಂದ್ರ ಮತ್ತು ಕಾಲೇಜು ತಂಡದ ಮಕ್ಕಳು ‘ಟೆಂಟ್ ಪೆಗ್ಗಿಂಗ್’ ಮತ್ತು ಮ್ಯೂಲ್ ಟ್ರಿಕ್ ರೈಡಿಂಗ್ ಟೀಮ್‌ನ ಸಾಹಸವನ್ನು ಪ್ರದರ್ಶಿಸಿದರು. 2 ಪ್ಯಾರಾ (ಎಸ್‌ಎಫ್) ತಂಡ ರೂಂ ಇಂಟರ್ ವೆನ್ಷನ್ ಸಾಹಸವನ್ನು ಪ್ರದರ್ಶಿಸುವುದನ್ನು ನೋಡಿ ವೀಕ್ಷಕರು, ಆಹ್ವಾನಿತರು ಎಲ್ಲರಿಗೂ ಧನ್ಯವಾದವಾದ ಸಲ್ಲಿಸಿದರು.

ಹೊಂಗಸಂದ್ರದ ಅನಿಕೇತನ ಪಬ್ಲಿಕ್ ಶಾಲೆ ಅಂಜನಾಪುರದ ಹಿರಿಯ ಪ್ರಾಥಮಿಕ ಶಾಲೆ, ಬನ್ನೇರುಘಟ್ಟ ರಸ್ತೆಯ ನೇಕಾರ ನಗರದ ಎನ್‌ಬಿಎನ್ ವಿದ್ಯಾಮಂದಿರ ವಿದ್ಯಾರ್ಥಿಗಳು ಪ್ರದರ್ಶಿಸಿದ ‘ಕಾರ್ಗಿಲ್ ಕಥನ’ ನೃತ್ಯಕ್ಕೆ ಪ್ರಥಮ, ದೊಡ್ಡಬಿದರಕಲ್ಲಿನ ಗುರುಶ್ರೀ ವಿದ್ಯಾಕೇಂದ್ರ, ನಾಗಸಂದ್ರದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಪ್ರದರ್ಶಿಸಿದ ‘ರಾಷ್ಟ್ರೀಯ ಭಾವೈಕ್ಯತೆ’ ನೃತ್ಯಕ್ಕೆ ದ್ವಿತೀಯ ಹಾಗೂ ಕೋನಪ್ಪನ ಅಗ್ರಹಾರದ ಗೋವಿಂದ ಶೆಟ್ಟಿ ಪಾಳ್ಯದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಶಮ್ಸ್ ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರದರ್ಶಿಸಿದ ‘ನಮ್ಮ ಭಾರತ ಭವ್ಯ ಭಾರತ’ ನೃತ್ಯಕ್ಕೆ ತೃತೀಯ ಬಹುಮಾನ ಪಡೆದುಕೊಂಡವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News