ಆಂತರಿಕ ಕಚ್ಚಾಟದಿಂದಲೇ ಮೈತ್ರಿ ಸರಕಾರ ಪತನ: ಕೇಂದ್ರ ಸಚಿವ ರಾಮ್‌ ವಿಲಾಸ್ ಪಾಸ್ವಾನ್

Update: 2019-01-28 16:20 GMT

ಬೆಂಗಳೂರು, ಜ.28: ದೇಶದ ಜನತೆಯು ಈಗಿರು ಸನ್ನಿವೇಶದಲ್ಲಿ ಸದೃಢ ನಾಯಕತ್ವ ಹಾಗೂ ಸಮರ್ಥ ಸರಕಾರವನ್ನು ಬಯಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲೂ ಎನ್‌ಡಿಎ ಸರಕಾರ ಮತ್ತೆ ಅಧಿಕಾರಕ್ಕೆ ಬಂದು, ನರೇಂದ್ರಮೋದಿ ಪ್ರಧಾನಿಯಾಗಿ ಮುಂದುವರೆಯಲಿದ್ದಾರೆ ಎಂದು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದರು.

ಸೋಮವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ದೇಶದ ಸುತ್ತಲೂ ವಿರೋಧಿಗಳಿದ್ದಾರೆ. ಅವರನ್ನು ಎದುರಿಸಲು ಸಮರ್ಥವಾದ ನಾಯಕ ಹಾಗೂ ಸ್ಥಿರ, ಸದೃಢ ಸರಕಾರ ಬೇಕು ಎಂಬುದು ಜನತೆಯ ಬಯಕೆಯಾಗಿದೆ ಎಂದರು.

ಇತ್ತೀಚೆಗೆ ಬಂದ ಸಮೀಕ್ಷೆಯು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ಹೆಚ್ಚಿನ ಸ್ಥಾನಗಳು ಸಿಗಲಿವೆ, ಕಾಂಗ್ರೆಸ್ ಪಕ್ಷಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಇತರರು ಪಡೆಯಲಿದ್ದಾರೆ ಎಂದು ತಿಳಿಸಿದೆ. 28 ಪಕ್ಷಗಳು ಸೇರಿ ಮಾಡಿಕೊಂಡಿರುವ ಮಹಾಘಟಬಂಧನ್‌ನಿಂದ ಯಾವುದೇ ಪರಿಣಾಮ ಆಗುವುದಿಲ್ಲ ಎಂದು ಅವರು ಹೇಳಿದರು.

ಮಹಾಘಟಬಂಧನ್‌ನಲ್ಲಿ ಯಾರು ಪ್ರಧಾನಿ ಅಭ್ಯರ್ಥಿಯಾಗಬೇಕು ಎಂದು ಚಿಂತಿಸುವ ಮೊದಲು, ವಿರೋಧ ಪಕ್ಷದ ನಾಯಕ ಯಾರಾಗಬೇಕು ಎಂಬುದರ ಬಗ್ಗೆ ಆಲೋಚನೆ ಮಾಡಲಿ. ನಮ್ಮ ದೇಶದಲ್ಲಿ ಅಧಿಕೃತವಾದ ವಿರೋಧ ಪಕ್ಷವೇ ಇಲ್ಲದಂತಾಗಿದೆ ಎಂದು ರಾಮ್‌ವಿಲಾಸ್ ಪಾಸ್ವಾನ್ ಹೇಳಿದರು.

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಧಾನಿಯಾಗುವುದನ್ನು ಎಷ್ಟು ಜನ ಒಪ್ಪುತ್ತಾರೆ? 2019-2024ರವರೆಗೂ ಪ್ರಧಾನಿ ಹುದ್ದೆ ಖಾಲಿಯಿಲ್ಲ. ಮಹಾ ಘಟಬಂಧನ್ ನಲ್ಲಿರುವ ಪಕ್ಷಗಳು ಈ ಬಾರಿಯ ಚುನಾವಣೆಯನ್ನು ಬಿಟ್ಟು, 2024ರ ಚುನಾವಣೆ ಬಗ್ಗೆ ಗಮನ ಹರಿಸಲಿ ಎಂದು ಅವರು ಹೇಳಿದರು.

ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶ: ಪ್ರತಿಯೊಂದು ರಾಜಕೀಯ ಪಕ್ಷದ ನಾಯಕರು, ತಮ್ಮ ಪಕ್ಷಗಳನ್ನು ಪ್ರಬಲಗೊಳಿಸಲು ಅಗತ್ಯವಿರುವ ಎಲ್ಲ ರೀತಿಯ ಅಸ್ತ್ರಗಳನ್ನು ಪ್ರಯೋಗಿಸುತ್ತಾರೆ. ಅದೇ ರೀತಿ, ರಾಹುಲ್‌ ಗಾಂಧಿ, ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡುವ ಮೂಲಕ ತಮ್ಮ ಪಕ್ಷವನ್ನು ಬಲಗೊಳಿಸಲು ಪ್ರಯತ್ನಿಸಿದ್ದಾರೆ. ಇದರಿಂದ, ನಮಗೇನು ತೊಂದರೆ ಇಲ್ಲ ಎಂದು ರಾಮ್‌ವಿಲಾಸ್ ಪಾಸ್ವಾನ್ ತಿಳಿಸಿದರು.

ಆರೆಸೆಸ್ಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದರಿಂದ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯನ್ನು ಭಾರತ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಣವ್ ಮುಖರ್ಜಿ ಒಬ್ಬ ರಾಜಕೀಯ ಮುತ್ಸದ್ದಿ, ವಿಚಾರವಾದಿ, ಕೇಂದ್ರ ಹಣಕಾಸು, ರಕ್ಷಣಾ ಸಚಿವ, ರಾಷ್ಟ್ರಪತಿಯಾಗಿ ದೇಶಕ್ಕೆ ಉತ್ತಮ ಸೇವೆ ಸಲ್ಲಿಸಿದ್ದಾರೆ. ಆದುದರಿಂದ, ಅವರಿಗೆ ಭಾರತ ರತ್ನ ನೀಡಲಾಗಿದೆ ಎಂದರು.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಯಾವುದೇ ಸುಗ್ರೀವಾಜ್ಞೆ ಹೊರಡಿಸುವುದಿಲ್ಲ. ಸುಪ್ರೀಂಕೋರ್ಟ್ ನೀಡುವ ಆದೇಶದಂತೆ ಸರಕಾರ ನಡೆಯಲಿದೆ ಎಂದು ಈಗಾಗಲೇ ಪ್ರಧಾನಿ ನರೇಂದ್ರಮೋದಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಈ ವಿಚಾರ ಇಲ್ಲಿಗೆ ಮುಗಿದ ಅಧ್ಯಾಯ ಎಂದು ರಾಮ್ ವಿಲಾಸ್ ಪಾಸ್ವಾನ್ ಹೇಳಿದರು.

ಆದಷ್ಟು ಬೇಗ ಸರಕಾರ ಪತನ

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ನೀಡಿರುವ ಹೇಳಿಕೆಯು ರಾಜ್ಯದಲ್ಲಿ ಮೈತ್ರಿ ಸರಕಾರ ಯಾವ ರೀತಿ ನಡೆಯುತ್ತಿದೆ ಎನ್ನುವುದಕ್ಕೆ ನಿದರ್ಶನ. ಕಾಂಗ್ರೆಸ್ ಹಾಗು ಜೆಡಿಎಸ್ ಎಂದಿಗೂ ಒಂದಾಗಲು ಸಾಧ್ಯವಿಲ್ಲ. ಮೈತ್ರಿ ಸರಕಾರದಲ್ಲಿ ಸಾಕಷ್ಟು ಗೊಂದಲಗಳಿದ್ದು, ಆಂತರಿಕ ಕಚ್ಚಾಟದಿಂದಲೇ ಆದಷ್ಟು ಬೇಗ ಸರಕಾರ ಪತನಗೊಳ್ಳಲಿದೆ.

-ರಾಮ್‌ವಿಲಾಸ್ ಪಾಸ್ವಾನ್ ಕೇಂದ್ರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News