ಬೆಂಗಳೂರು: ನ್ಯಾಯ ಕೇಳಿ ಬಂದ ಮಹಿಳೆಯ ಕುತ್ತಿಗೆ ಹಿಡಿದು ಹೊರದಬ್ಬಿದ ಎಎಸ್ಐ

Update: 2019-01-29 16:17 GMT

ಬೆಂಗಳೂರು, ಜ.29: ಕೌಟಂಬಿಕ ಕಲಹ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದ ಮಹಿಳೆಯರ ಮೇಲೆ ದರ್ಪ ತೋರಿರುವ ಪೊಲೀಸರು, ಆಕೆಯ ಮೇಲೆ ಹಲ್ಲೆ ನಡೆಸಿ, ಕತ್ತು ಹಿಡಿದು ಹೊರದಬ್ಬಿದ ಅಮಾನವೀಯವಾಗಿ ಘಟನೆ ಇಲ್ಲಿನ ಕುಮಾರಸ್ವಾಮಿ ಲೇಔಟ್‌ನಲ್ಲಿ ನಡೆದಿದೆ.

ಠಾಣೆಯ ಸಹಾಯಕ ಪೊಲೀಸ್ ಇನ್‌ಸ್ಪೆಕ್ಟರ್(ಎಎಸ್ಸೈ) ರೇಣುಕಯ್ಯ ಎಂಬಾತ ಹಾಗೂ ಕೆಲ ಸಿಬ್ಬಂದಿ ದೂರು ನೀಡಲು ಬಂದಿದ್ದ ಮಹಿಳೆಯ ಮೇಲೆಯೇ ಹಲ್ಲೆ ನಡೆಸಿ ದರ್ಪ ತೋರಿಸಿದ್ದಾನೆ ಎಂದು ತಿಳಿದುಬಂದಿದೆ.

ಏನಿದು ಪ್ರಕರಣ: ಜ.19 ರಂದು ಯುವತಿಯೊಬ್ಬಾಕೆ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ, ಕೆ.ಎಸ್.ಲೇಔಟ್ ಹೊಟೇಲ್ ಒಂದರಲ್ಲಿ ಗಲಾಟೆ ನಡೆಯುತ್ತಿದ್ದು, ಸಹಾಯಕ್ಕೆ ಬರುವಂತೆ ಕೋರಿದ್ದಾರೆ. ಈ ಸಂಬಂಧ ಪೊಲೀಸರು ಹೋದಾಗ ಹೊಟೇಲ್ ಬಳಿ ಯುವತಿಯ ಸಂಬಂಧಿಕರು ಗಲಾಟೆ ಮಾಡುತ್ತಿದ್ದರು ಎನ್ನಲಾಗಿದೆ.

ತಾಯಿ ಜೊತೆ ಕಳಿಸಬೇಡಿ ಎಂದು ಯುವತಿ ಪೊಲೀಸರ ಬಳಿ ಆಳಲು ತೋಡಿಕೊಂಡಿದ್ದು, ಈ ವೇಳೆ ಆಕೆಯ ಸಂಬಂಧಿಕರು ಬಲವಂತವಾಗಿ ಎತ್ತಿಕೊಂಡು ಹೋಗಲು ಯತ್ನಿಸುತ್ತಿದ್ದರು. ಆದರೆ, ಪೊಲೀಸರು ಆಕೆಯನ್ನು ರಕ್ಷಿಸಿ ಠಾಣೆಗೆ ಕರೆದೊಯ್ದಿದ್ದರು. ನಂತರ ಯುವತಿಯ ತಾಯಿ ಮತ್ತು ಕೆಲ ಸಂಬಂಧಿಕರು ಠಾಣೆಯಲ್ಲಿ ಗಲಾಟೆ ಮಾಡಲು ಯತ್ನಿಸಿದ್ದರು ಎಂದು ತಿಳಿದುಬಂದಿದೆ.

ಪೊಲೀಸರು ಯುವತಿಗೆ ರಕ್ಷಣೆ ನೀಡುವ ಸಲುವಾಗಿ ಪೋಷಕರನ್ನು ಠಾಣೆಯಿಂದ ಹೊರಗಡೆ ಕಳುಹಿಸುವ ಸಮಯದಲ್ಲಿ ಪೊಲೀಸರು ಮತ್ತು ಸಂಬಂಧಿಕರ ನಡುವೆ ಘರ್ಷಣೆಯಾಗಿದೆ. ಯುವತಿಯನ್ನು ನಮ್ಮೊಂದಿಗೆ ಕಳಿಸದಿದ್ದರೆ ನಾವು ಇಲ್ಲೇ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಿದ್ದಾರಂತೆ. ಈ ವೇಳೆ ಎಎಸ್ಸೈ ರೇಣುಕಯ್ಯ ಮಹಿಳೆ ಮತ್ತು ಸಂಬಂಧಿಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿರುವ ವಿಡಿಯೋ ವೈರಲ್ ಆಗಿದೆ.

ಎಎಸ್ಸೈ ಅಮಾನತು

ಮಹಿಳೆ ಮೇಲೆ ದರ್ಪ ತೋರಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಲೇಔಟ್ ಠಾಣಾ ಎಎಸ್ಸೈ ರೇಣುಕಯ್ಯ ಅವರನ್ನು ಅಮಾನತು ಮಾಡಿ ಎಸಿಪಿ ನೇತೃತ್ವದಲ್ಲಿ ತನಿಖೆಗೆ ಡಿಸಿಪಿ ಅಣ್ಣಾಮಲೈ ಅದೇಶ ಹೊರಡಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತಾನಾಡಿದ ಅಣ್ಣಾಮಲೈ, ಇತ್ತೀಚಿಗೆ ಈ ಘಟನೆ ನಡೆದಿದೆ. ಇಂದು ವಿಡಿಯೋ ವೈರಲ್ ಆಗಿ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯಿಂದಾಗಿ ಎಎಸ್ಸೈ ರೇಣುಕಯ್ಯರನ್ನ ಅಮಾನತು ಮಾಡಲಾಗಿದೆ. ಪೊಲೀಸರು ಈ ರೀತಿಯ ಕೆಲಸ ಮಾಡಬಾರದಿತ್ತು. ಅಲ್ಲದೆ, ಇಲಾಖಾ ತನಿಖೆಗೂ ಕೂಡ ಆದೇಶ ನೀಡಲಾಗಿದೆ. ಪೊಲೀಸರು ತಾಳ್ಮೆ ಕಳೆದುಕೊಳ್ಳಬಾರದು ಎಂದರು.

ಮಹಿಳೆ ಮೇಲೆ ಎಎಸ್ಸೈ ದೌರ್ಜನ್ಯ ಪ್ರಕರಣದ ಕುರಿತು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಭಾಯಿ ನಗರದ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಗೆ ಭೇಟಿ ನೀಡಿ, ಮಾಹಿತಿ ಪಡೆದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News