ನೂತನ ಕಸ ವಿಲೇವಾರಿ ಟೆಂಡರ್ ಪ್ರಕ್ರಿಯೆ ಅವೈಜ್ಞಾನಿಕ: ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ

Update: 2019-01-29 17:29 GMT

ಬೆಂಗಳೂರು, ಜ.29: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ನೂತನವಾಗಿ ಕರೆದಿರುವ ಟೆಂಡರ್ ಪ್ರಕ್ರಿಯೆ ಅವೈಜ್ಞಾನಿಕವಾಗಿದೆ. ಟೆಂಡರ್ ಪ್ರಕ್ರಿಯೆಗೆ ವಿಧಿಸಿರುವ ನಿಯಮಾವಳಿಗಳೆಲ್ಲವೂ ಖಂಡನಾರ್ಹ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಆರೋಪಿಸಿದ್ದಾರೆ. 

ನಗರದ ಬಿಬಿಎಂಪಿಯಲ್ಲಿ ನಡೆದ ಮಾಸಿಕ ಕೌನ್ಸಿಲ್ ಸಭೆಯಲ್ಲಿ ಮಾತನಾಡಿದ ಅವರು, ಕಸ ವಿಲೇವಾರಿಗೆ ಸಂಬಂಧಿಸಿದ ಪ್ರಕ್ರಿಯೆಯಲ್ಲಿ ಗುತ್ತಿಗೆದಾರರು ಪಾಲ್ಗೊಳ್ಳಬಾರದು ಎಂಬ ಉದ್ದೇಶದಿಂದ ಹಲವು ಅವೈಜ್ಞಾನಿಕವಾದ ಟೆಂಡರ್ ನಿಯಮಾವಳಿಗಳನ್ನು ರೂಪಿಸಿದ್ದಾರೆ ಎಂದು ದೂರಿದರು.

ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಒಂದು ವರ್ಷಕ್ಕೆ ಟೆಂಡರ್ ಅವದಿ ಸೀಮಿತಗೊಳಿಸಿದ್ದು, ಮುಂದುವರಿಯಬೇಕಾದರೆ ಅದು ಪಾಲಿಕೆ ನಿರ್ಧರಿಸುತ್ತದೆ ಎಂದು ಹೇಳಲಾಗಿದೆ. ಒಂದು ಬಾರಿ ಟೆಂಡರ್‌ನಲ್ಲಿ ಹೊಸದಾಗಿ ಪಾಲ್ಗೊಳ್ಳುವವರಿಗೆ ಇದು ಅನಾನುಕೂಲವಾಗುತ್ತದೆ. ಟೆಂಡರ್‌ನಲ್ಲಿ ಪಾಲ್ಗೊಂಡ ಮೇಲೆ ಕೋಟ್ಯಂತರ ರೂ. ಖರ್ಚು ಮಾಡಿ ಮಾಡಬೇಕಾಗುತ್ತದೆ. ಆದರೆ, ಒಂದು ವರ್ಷದಲ್ಲಿ ಅವರು ಅದನ್ನು ಹಿಂಪಡೆಯಲು ಸಾಧ್ಯವಾಗುತ್ತದೆಯಾ ಎಂದು ಪ್ರಶ್ನಿಸಿದರು.

ಪ್ರಸ್ತುತವಿರುವ ಟೆಂಡರ್‌ದಾರರೊಂದಿಗೆ ಶಾಮೀಲಾಗಿ ಪಾಲಿಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅವೈಜ್ಞಾನಿಕವಾದ ನಿಯಮಾವಳಿಗಳನ್ನು ರೂಪಿಸಲಾಗಿದೆ. ಹೊಸಬರಿಗೆ ಪ್ರವೇಶ ನೀಡದಂತೆ ಈ ಕೆಲಸ ಮಾಡಲಾಗಿದೆ ಎಂದ ಅವರು, ಹೊಸ ಟೆಂಡರ್ ನಿಯಮಾವಳಿಗಳನ್ನು ಹಿಂದಿನ ಕೌನ್ಸಿಲ್ ಸಭೆಯಲ್ಲಿ ಯಾಕೆ ಚರ್ಚೆ ನಡೆಸಲಿಲ್ಲ ಎಂದರು. ಈ ಸಂಬಂಧ ಉತ್ತರ ನೀಡಿದ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್, ಪಾಲಿಕೆ ವ್ಯಾಪ್ತಿಯಲ್ಲಿ ಸಾವಿರಾರು ಟನ್ ಕಸ ಉತ್ಪತ್ತಿಯಾಗುತ್ತಿದೆ. ಈ ನಿಟ್ಟಿನಲ್ಲಿ ವಿಲೇವಾರಿಗೆ ಒತ್ತು ನೀಡುವ ಉದ್ದೇಶದಿಂದ ಪ್ರತ್ಯೇಕ ಟೆಂಡರ್ ಕರೆಯಲಾಗಿದೆ. ಒಣಕಸ ಮ್ಯಾನೇಜ್‌ಮೆಂಟ್‌ಗೆ ಸರಕಾರ ಒತ್ತು ನೀಡಿದ್ದರಿಂದ ಅದನ್ನು ಪ್ರತ್ಯೇಕವಾಗಿ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಒಣ ಕಸ ಹಾಗೂ ಹಸಿ ಕಸವನ್ನು ಪ್ರತ್ಯೇಕವಾಗಿ ವಿಂಗಡಣೆ ಮಾಡಲಾಗುತ್ತಿದೆ. ಎರಡನ್ನೂ ಪ್ರತ್ಯೇಕ ಮಾಡಲಿಲ್ಲ ಎಂದರೆ ಕಸ ಪಡೆಯುವುದಿಲ್ಲ ಎಂದು ಹೇಳಲಾಗಿದೆ. ಆದರೆ, ಪಾಲಿಕೆಯ ಪೌರ ಕಾರ್ಮಿಕರು ಎರಡನ್ನೂ ಒಟ್ಟಿಗೆ ತುಂಬಿಸಿಕೊಂಡು ಹೋಗುತ್ತಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರತ್ಯೇಕ ಟೆಂಡರ್ ಕರೆಯಲಾಗಿದೆ ಎಂದರು.

ಈಗಾಗಲೇ ಹಲವು ಸಂಘ-ಸಂಸ್ಥೆಗಳು, ಎನ್‌ಜಿಒಗಳು ಒಣ ಕಸ ನಿರ್ವಹಣೆಗೆ ಮುಂದಾಗಿವೆ. ಇನ್ನು ಪಾಲಿಕೆಯಿಂದ ಚಿಂದಿ ಆಯುವವರಿಗೆ ಗುರುತಿನ ಚೀಟಿ ನೀಡಿ, ಅವರ ಮೂಲಕ ಕಸ ವಿಲೇವಾರಿಗೆ ಕ್ರಮ ವಹಿಸಲಾಗಿದೆ. ಆದರೆ, ಹಸಿ ಕಸ ತ್ಯಾಜ್ಯ ವಿಲೇವಾರಿಗೆ ಹೊಸ ಟೆಂಡರ್ ಮೂಲಕ ಅವಕಾಶ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಆಯುಕ್ತರ ಉತ್ತರದಿಂದ ಸಮಾಧಾನಗೊಳ್ಳದ ಪದ್ಮನಾಭರೆಡ್ಡಿ, ಮತ್ತೊಮ್ಮೆ ಸಮಸ್ಯೆಯನ್ನು ಆಯುಕ್ತರಿಗೆ ವಿವರಿಸಲು ಪ್ರಯತ್ನಿಸಿದರು. ಆದರೆ, ಸಮಯದ ಅಭಾವದಿಂದ ಆತುರದಲ್ಲಿ ಚರ್ಚೆಯನ್ನು ಮುಗಿಸುವಂತಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News