ಅಪರಾಧಕ್ಕೆ ಧರ್ಮದ ಬಣ್ಣ ಲೇಪಿಸುವ ಪ್ರವೃತ್ತಿ ನಿಲ್ಲಲಿ: ಡಾ.ವಿವೇಕ್ ರೈ

Update: 2019-01-31 21:42 IST
ಅಪರಾಧಕ್ಕೆ ಧರ್ಮದ ಬಣ್ಣ ಲೇಪಿಸುವ ಪ್ರವೃತ್ತಿ ನಿಲ್ಲಲಿ: ಡಾ.ವಿವೇಕ್ ರೈ
  • whatsapp icon

ಮಂಗಳೂರು, ಜ.31: ಸಮಾಜದಲ್ಲಿ ಯಾವುದೇ ವ್ಯಕ್ತಿ ಎಸಗುವ ಅಪರಾಧವನ್ನು ಅಪರಾಧವಾಗಿಯೇ ಕಾಣಬೇಕು. ಅದನ್ನು ಜಾತಿಯ ದೃಷ್ಟಿಕೋನದಿಂದ ನೋಡಿದರೆ ಸಮಾಜದ ಸ್ವಾಸ್ಥ್ಯ ಹದಗೆಡುತ್ತದೆ. ದ.ಕ. ಜಿಲ್ಲೆಯಲ್ಲಿ ಅಪರಾಧವನ್ನು ಧರ್ಮದ ಬಣ್ಣ ಲೇಪಿಸುವುದರಿಂದ ಸಮಸ್ಯೆ ಉದ್ಭವಿಸುತ್ತಿದೆ. ಈ ಪ್ರವೃತ್ತಿ ನಿಲ್ಲಬೇಕು ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ್ ರೈ ಹೇಳಿದರು.

ದ.ಕ. ಜಿಲ್ಲಾ ಕಸಾಪದಿಂದ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಾಂಗಣದ ಬಿ.ಎಂ.ಇದಿನಬ್ಬ ವೇದಿಕೆಯಲ್ಲಿ ಗುರುವಾರ ನಡೆದ 23ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರಂಭದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು. ಕರಾವಳಿಯಲ್ಲಿ ಮಂಜೇಶ್ವರ ಗೋವಿಂದ ಪೈ ಅವರಂತಹ ಶ್ರೇಷ್ಠರು ತಾವು ಇದ್ದ ನೆಲದಲ್ಲಿ ನಿಂತೇ ಜಗತ್ತಿನತ್ತ ಮುಖ ಮಾಡಿ ತಾವೂ ಬೆಳೆಯುವ ಜತೆಗೆ ಸಾಹಿತ್ಯವನ್ನೂ ಬೆಳೆಸಿದರು. ಅಂತಹ ವಿಕಾಸಶೀಲ ಮನಸ್ಸು ಇದ್ದುದರಿಂದಲೇ ಅವರು ಯೇಸುವಿನ ಕುರಿತು ಗೋಲ್ಗೊಥಾ ಬರೆಯುವುದು ಸಾಧ್ಯವಾಯಿತು ಎಂದರು.

ಶಿವರಾಮ ಕಾರಂತರು ಕೋಟದವರಾದರೂ ಪುತ್ತೂರು, ಸುಳ್ಯ ಬಂಟ್ವಾಳ, ಬೆಳ್ತಂಗಡಿಯ ಎಲ್ಲ ದಲಿತರ, ಮಲೆಕುಡಿಯರ ಮನೆಗಳಿಗೆ ಭೇಟಿ ನೀಡಿ ಅವರ ಜೀವನ ಪದ್ಧತಿ ಅರಿತು ದಾಖಲಿಸಿದ್ದರು. ಮಲೆಕುಡಿಯರ ಮನೆಗಳಿಗೆ ಭೇಟಿ ನೀಡಿ ಅವರ ಬದುಕನ್ನೂ ಗಮನಿಸಿದ್ದರು. ಕುದ್ಮುಲ್ ರಂಗರಾವ್, ಮುಳಿಯ ತಿಮ್ಮಪ್ಪಯ್ಯ, ಸಾರಾ ಅಬೂಬಕರ್ ಮುಂತಾದವರು ತಾವು ಹುಟ್ಟಿಬೆಳೆದ ಪರಿಸರಕ್ಕಿಂತ ಹೊರಗಿನ ಲೋಕವನ್ನೂ ಅರಿಯುವ ನಿರಂತರ ಪ್ರಯತ್ನ ಮಾಡಿ ಬೆಳೆದರು. ಅಸ್ಪೃಶ್ಯರು ಎನಿಸಿಕೊಂಡವರನ್ನು ಗೌರವಿಸುವ ದೊಡ್ಡ ಪಂಡಿತ ಪರಂಪರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ ಎಂದು ತಿಳಿಸಿದರು.

ಇಂದು ಜನರು ತಮ್ಮದೇ ಜಾತಿ, ಧರ್ಮಗಳಿಗೆ ಸೀಮಿತವಾಗಿದ್ದುಕೊಂಡು ಕೇವಲ ಸ್ವಯಂ ಸಂಭ್ರಮದಲ್ಲಿ ಮುಳುಗುತ್ತಿದ್ದಾರೆ. ತಮ್ಮನ್ನೇ ವೈಭವೀಕರಿಸಿಕೊಳ್ಳುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಹಣದ ಹಿಂದೆಯೇ ಹೋಗುವ ವಾಂಛೆ, ಶ್ರೀಮಂತಿಕೆಯ ಅಸಹ್ಯ ಪ್ರದರ್ಶನ ಕಾಣುತ್ತಿದೆ. ಹಣ ಇದ್ದವ ಮಹನೀಯ, ಬಡವರು ಕನಿಷ್ಠ ಎಂಬ ವಾತಾವರಣ ಸೃಷ್ಟಿಸಲಾಗಿದೆ. ನಮ್ಮ ವ್ಯಕ್ತಿತ್ವಕ್ಕಿಂತ ದೊಡ್ಡ ವೇಷ ಧರಿಸುವ ಬದಲು ಮಾನವ ಸಹಜವಾಗಿ ಇದ್ದು, ಹೊರಜಗತ್ತನ್ನು ಕಾಣಬೇಕು ಎಂದರು.

ನಾನು ಶ್ರೇಷ್ಠ, ಉಳಿದವರು ಕನಿಷ್ಠ ಎಂಬ ಭಾವನೆಯಿಂದ ಸಮಸ್ಯೆ ಸೃಷ್ಟಿಯಾಗುತ್ತದೆ. ನಮ್ಮವ, ಹೊರಗಿನವ ಎಂಬ ಭಾವನೆ ಇಲ್ಲದೆ ಇದ್ದಾಗ, ಸ್ವಸ್ಥ ಮನಸಿನಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದರು. ಜಿಲ್ಲೆಯಲ್ಲಿ ಶ್ರೀಮಂತಿಕೆಯ ಹಿಂದೆ ಹೋಗುವ ಮನಸ್ಸುಗಳಿಂದ ದ್ವೇಷ ಹೆಚ್ಚಲು ಕಾರಣವಾಗುತ್ತಿದೆ. ಸರಳವಾಗಿ ಬದುಕದೆ ಸಾಹಿತ್ಯದಲ್ಲಿ ಏನು ಸಾಧನೆ ಮಾಡಿದರೂ ವ್ಯರ್ಥವಾಗುತ್ತದೆ. ಹಣ, ಜಾತಿ, ಧರ್ಮ, ಪಕ್ಷದ ಬೇಧವಿಲ್ಲದೆ ಬದುಕುವುದನ್ನು ಸಾಹಿತ್ಯ ಕಲಿಸಿಕೊಡುತ್ತದೆ. ಸಮಸ್ಯೆಗಳನ್ನು ನಿವಾರಣೆ ಮಾಡುವ ಕಲೆ ಸಾಹಿತ್ಯದಲ್ಲಿದೆ. ಸಾಹಿತ್ಯದ ಓದು ಸರಳ ಜೀವನ ಮತ್ತು ಪರಸ್ಪರ ಪ್ರೀತಿಸುವ ಗುಣವನ್ನು ಕಲಿಸುತ್ತದೆ ಎಂದರು.

ಸಮ್ಮೇಳನಾಧ್ಯಕ್ಷ ಡಾ. ಬಿಎಂ ಹೆಗ್ಡೆ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್‌ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್. ಮಹಾಬಲೇಶ್ವರ ರಾವ್, ತುಳು ಅಕಾಡಮಿ ಅಧ್ಯಕ್ಷ ಎ.ಸಿ. ಭಂಡಾರಿ, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಉದ್ಯಮಿ ಕುಡ್ಪಿ ಜಗದೀಶ್ ಶೆಣೈ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ ಇಂದಾಜೆ, ಅತಿಥಿಯಾಗಿದ್ದರು.

ಸಂಸ್ಕೃತ ವಿದ್ವಾಂಸ ಗಿರಿಧರ ಭಟ್, ನಟಿ ಸರೋಜಿನಿ ಶೆಟ್ಟಿ, ದಾಮೋದರ ನಿಸರ್ಗ, ಯೋಧ ಕೆ.ಕೆ. ಲಕ್ಷ್ಮಣ ಕಟ್ಟೆಮನೆ, ಕೇಳು ಮಾಸ್ತರ್ ಅಗಲ್ಪಾಡಿ, ರತ್ನಕುಮಾರ್, ಚಂದ್ರಶೇಖರ ಪೇರಾಲು ಸಹಿತ ವಿವಿಧ ಕ್ಷೇತ್ರದ ಸಾಧಕರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಕದ್ರಿ ನವನೀತ ಶೆಟ್ಟಿ, ಸುಧಾಕರ ರಾವ್ ಪೇಜಾವರ ಅಭಿನಂದನಾ ಭಾಷಣ ಮಾಡಿದರು.

ಪ್ರೊ.ರಾಜಶೇಖರ ಹೆಬ್ಬಾರ್ ಸ್ವಾಗತಿಸಿದರು. ಬಿ.ತಮ್ಮಯ್ಯ ಬಂಟ್ವಾಳ ವಂದಿಸಿದರು. ಮಾಧುರಿ ಶ್ರೀರಾಮ್, ರವೀಂದ್ರನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಸಿಬಿಎಸ್‌ಇ, ಐಸಿಎಸ್‌ಇ ಮಾದರಿ ಶಾಲೆ ಕಟ್ಟಿ: ಡಾ.ಎಂ.ಮೋಹನ ಆಳ್ವ
‘ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿದ 5.5 ಲಕ್ಷ ವಿದ್ಯಾರ್ಥಿಗಳು ಕಳೆದ ಬಾರಿ ಎಸೆಸೆಲ್ಸಿ ಪರೀಕ್ಷೆ ಬರೆದಿದ್ದಾರೆ. ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ 3 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕನ್ನಡ ಶಾಲೆಗಳು ಮುಚ್ಚುತ್ತಿವೆ ಎಂದುಕೊಂಡರೂ ಪರೀಕ್ಷೆ ಬರೆದ ಕನ್ನಡ ವಿದ್ಯಾರ್ಥಿಗಳ ಸಂಖ್ಯೆ ದೊಡ್ಡದು. ಆದರೆ ಅಂತಹ ಶಾಲೆಗಳ ಸ್ಥಿತಿಗತಿ ಚೆನ್ನಾಗಿಲ್ಲ. ಒಂದೊಂದೇ ಶಾಲೆಗಳನ್ನು ನಾವು ಸಿಬಿಎಸ್‌ಇ ಮತ್ತು ಐಸಿಎಸ್‌ಇ ಮಾದರಿಯಲ್ಲಿ ಕಟ್ಟುತ್ತಾ ಹೋದರೆ ಕನ್ನಡ ಶಾಲೆಗಳಿಗೆ ವಿದ್ಯಾರ್ಥಿಗಳು ಬಂದೇ ಬರುತ್ತಾರೆ. ಈಗಲೂ ಮೂಡುಬಿದಿರೆಯಲ್ಲಿ ಕನ್ನಡ ಮಾಧ್ಯಮ ಶಾಲೆಗೆ ಪ್ರವೇಶ ಕೋರಿ ದಿನಕ್ಕೆ 200 ಅರ್ಜಿಗಳು ಬರುತ್ತಿವೆ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.

ಸಮಾಜದಲ್ಲಿ ಒಂದೆಡೆ ಮೃಷ್ಠಾನ ಭೋಜನ ನಡೆದರೆ, ಇನ್ನೊಂದೆಡೆ ಹಸಿವಿನಿಂದ ಒದ್ದಾಡುತ್ತಿದೆ. ನಾವು ಬೇರೆ ಸಂಸ್ಕೃತಿಯ ಹುಳುಕು ಹುಡುಕುವ ಮೊದಲು ನಮ್ಮ ಸಂಸ್ಕೃತಿಯ ವಿಮರ್ಶೆ ಮಾಡುವ ಅಗತ್ಯವಿದೆ.
- ಡಾ.ಬಿ.ಎ.ವಿವೇಕ್ ರೈ, ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News