ಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯ ಸ್ಥಾಪನೆಯಾಗಲಿ: ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್

Update: 2019-02-01 17:53 GMT

ಬೆಂಗಳೂರು, ಫೆ.1: ಗ್ರಾಮೀಣ ಪ್ರದೇಶದ ಶೇ.59ರಷ್ಟು ಮಾಧ್ಯಮಿಕ ಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯಗಳಿಲ್ಲ. ಹೀಗಾಗಿ ರಾಜ್ಯದ ಎಲ್ಲ ಶಾಲೆಗಳಲ್ಲಿ ಸುಸಜ್ಜಿತವಾದ ಪ್ರಯೋಗಾಲಯ ಸ್ಥಾಪಿಸಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ವಿಜ್ಞಾನ ಕ್ಷೇತ್ರದತ್ತ ಆಸಕ್ತಿ ಬೆಳೆಸುವ ಕಾರ್ಯವಾಗಬೇಕೆಂದು ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ತಿಳಿಸಿದರು.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಎನ್‌ಎಂಕೆಆರ್‌ವಿ ಮಹಿಳಾ ಕಾಲೇಜು ಸಹಯೋಗದಲ್ಲಿ ನಡೆದ 11ನೇ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿಜ್ಞಾನ ವಿಷಯಗಳಲ್ಲಿ ಪ್ರಯೋಗಾಲಯಗಳಿಲ್ಲದಿದ್ದರೆ ಅಧ್ಯಯನ ಮಾಡಲು ಕಷ್ಟಸಾಧ್ಯ. ವಿಜ್ಞಾನ ವಿಷಯಗಳನ್ನು ಪ್ರಾಯೋಗಿಕವಾಗಿ ಕಲಿಯಬೇಕಾಗುತ್ತದೆ. ಶೇ.32ರಷ್ಟು ಪದವಿಪೂರ್ವ ಕಾಲೇಜುಗಳಲ್ಲಿ ಪ್ರತ್ಯೇಕ ಪ್ರಯೋಗಾಲಯ ಕೇಂದ್ರಗಳಿಲ್ಲ. ಈ ಬಗ್ಗೆ ಸಂಬಂಧಿಸಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಗಮನ ವಹಿಸಬೇಕೆಂದು ಅವರು ಹೇಳಿದರು.

ನಮ್ಮಲ್ಲಿ ಕೃಷಿ ಮತ್ತು ತಂತ್ರಜ್ಞಾನ ಬೇರೆ ಬೇರೆ ಎಂಬ ಮನೋಭಾವವಿದೆ. ಆದರೆ, ಈ ಹಿಂದೆ ಕೃಷಿಯಲ್ಲಿ ವೈಜ್ಞಾನಿಕ ಸಂಶೋಧನೆಗಳನ್ನು ಅಳವಡಿಸಿಕೊಂಡಿದ್ದರಿಂದ ಆಹಾರ ಉತ್ಪಾದನೆ ಸಾಧ್ಯವಾಯಿತು. ಹಾಗಾಗಿ ಎಲ್ಲ ಕ್ಷೇತ್ರದಲ್ಲಿ ವೈಜ್ಞಾನಿಕ ಸಂಶೋಧನೆಗಳು ಆಗಬೇಕೆಂದು ಅವರು ಆಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News