ವಿ.ಎಂ.ಇನಾಂದಾರ್ ಪ್ರಶಸ್ತಿಗೆ ಜನಾರ್ದನ ಭಟ್ ಕೃತಿ ಆಯ್ಕೆ

Update: 2019-02-02 14:04 GMT

ಉಡುಪಿ, ಫೆ.2: ಖ್ಯಾತ ವಿಮರ್ಶಕ ಪ್ರೊ.ವಿ.ಎಂ ಇನಾಂದಾರ್ ಇವರ ನೆನಪಿನಲ್ಲಿ ನೀಡುವ ‘ಇನಾಂದಾರ್ ಪ್ರಶಸ್ತಿ’ಗೆ ಈ ಬಾರಿ ನಾಡಿನ ಹಿರಿಯ ಲೇಖಕ, ವಿಮರ್ಶಕ ಡಾ.ಬಿ.ಜನಾರ್ದನ ಭಟ್ಟರ ‘ನಾಲ್ಕು ಪ್ರಸ್ತಾವನೆಗಳು- ಕರಾವಳಿ ಸಾಹಿತ್ಯ ಕಥನ ಪುಸ್ತಕ’ ಆಯ್ಕೆಯಾಗಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಪ್ರಕಟಣೆ ತಿಳಿಸಿದೆ.

ಫೆ.23ರ ಶನಿವಾರ ನಡೆಯುವ ಎಂ.ಜಿ.ಎಂ ಕಾಲೇಜಿನ ವಾರ್ಷಿಕ ಸಾಹಿತ್ಯೋತ್ಸವದ ಸಂದರ್ಭದಲ್ಲಿ ಡಾ. ಬಿ. ಜನಾರ್ದನ ಭಟ್ ಇವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಪ್ರಸ್ತುತ ಕೃತಿಯು ಡಾ. ಭಟ್ ಇವರು ತಮ್ಮ ಮಹತ್ವದ ಕೃತಿಗಳಿಗೆ ಆಳವಾದ ಅಧ್ಯಯನ ಮತ್ತು ವಿಶಿಷ್ಟ ದೃಷ್ಟಿಕೋನದಿಂದ ಬರೆದ ದೀರ್ಘಪ್ರಸ್ತಾವನೆಗಳ ಸಂಗ್ರಹವಾಗಿದೆ. ಈ ಎಲ್ಲ ಬರಹಗಳಲ್ಲಿ ಕರಾವಳಿಯ ಶತಮಾನದ ಸಾಹಿತ್ಯ ಕೇಂದ್ರದಲ್ಲಿರುವುದು ಮಹತ್ವದ ವಿಷಯವಾಗಿದೆ.

ಜನಾರ್ದನ ಭಟ್ ಕಾದಂಬರಿಕಾರ, ವಿಮರ್ಶಕರು, ಗ್ರಂಥಸಂಪಾದಕರು ಮತ್ತು ಅನುವಾದಕರೂ ಆಗಿದ್ದಾರೆ. ಇವರ ಗ್ರಂಥಗಳಲ್ಲಿ ‘ದಕ್ಷಿಣ ಕನ್ನಡದ ಶತಮಾನದ ಕಾವ್ಯ’, ‘ದಕ್ಷಿಣ ಕನ್ನಡದ ಶತಮಾನದ ಕತೆಗಳು’, ‘ಉಡುಪಿ ಜಿಲ್ಲೆಯ ಶತಮಾನದ ಕತೆಗಳು’ ಮುಖ್ಯವಾದವು. ಅಲ್ಲದೆ ಅವರು ‘ಉತ್ತರಾಧಿಕಾರ’, ‘ಹಸ್ತಾಂತರ’, ‘ಮೂರು ಹೆಜ್ಜೆ ಭೂಮಿ’, ‘ಕಲ್ಲುಕಂಬವೇರಿದ ಹುಂಬ’, ‘ಅನಿಕೇತನ’ ಮುಂತಾದ ಕಾದಂಬರಿಗಳನ್ನು ಬರೆದು ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರು ಸಂಪಾದಿಸಿದ ‘ಬದುಕು ಭಾವದ ಕತೆಗಳು’ ಮಂಗಳೂರು ವಿಶ್ವವಿದ್ಯಾಲಯದ ದ್ವಿತೀಯ ಪದವಿ ತರಗತಿಗೆ ಪಠ್ಯಪುಸ್ತಕವಾಗಿತ್ತು.

ವಿದ್ವತ್ತು ಮತ್ತು ಸೃಜನಶೀಲತೆ ಎರಡನ್ನೂ ಮೈಗೂಡಿಸಿಕೊಂಡಿರುವ ಬೆಳ್ಮಣ್ಣಿನ ಡಾ.ಬಿ.ಜನಾರ್ದನ ಭಟ್, ನಮ್ಮ ನಡುವಿನ ಒಬ್ಬ ಬಹುಮುಖ್ಯ ಲೇಖಕರು ಮತ್ತು ಅಧ್ಯಯನ ಶೀಲ ವಿದ್ವಾಂಸರು. ಕನ್ನಡ ಮತ್ತು ಇಂಗ್ಲೀಷಿನಲ್ಲಿ ಸ್ನಾತಕೋತ್ತರ ಪದವಿಯೊಂದಿಗೆ ಡಾಕ್ಟರೇಟ್ ಪದವಿಯನ್ನೂ ಪಡೆದಿರುವ ಇವರು ಪ್ರಕೃತ ಬೆಳ್ಮಣ್ಣಿನ ಸ.ಪ.ಪೂ ಕಾಲೇಜಿನಲ್ಲಿ ಪ್ರಾಚಾರ್ಯರಾಗಿದ್ದಾರೆ.

ಇವರು 5 ಕಾದಂಬರಿಗಳು, 4 ಕಥಾಸಂಕಲನಗಳು, 3 ವೈಚಾರಿಕ ಕೃತಿಗಳನ್ನು 25 ವಿಮರ್ಶೆಯ ಕೃತಿಗಳು, 8 ಅನುವಾದ ಕೃತಿಗಳು, 7 ಕೃತಿಗಳನ್ನು ಸಂಪಾದಿಸಿದ್ದು ಸೇರಿ, ಒಟ್ಟು 70 ಕೃತಿಗಳನ್ನು ಪ್ರಕಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News