ಬಿಜೆಪಿಗೆ ನ್ಯಾಯಾಲಯದ ಮೇಲೆ ಕನಿಷ್ಠ ಗೌರವವೂ ಇಲ್ಲ: ಪ್ರೊ.ಕೆ.ಮರುಳಸಿದ್ದಪ್ಪ

Update: 2019-02-02 16:55 GMT

ಬೆಂಗಳೂರು, ಫೆ.2: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರಕ್ಕೆ ಹಾಗೂ ಅಲ್ಲಿನ ವ್ಯಕ್ತಿಗಳಿಗೆ ನ್ಯಾಯಾಲಯದ ಮೇಲೆ ಕನಿಷ್ಠ ಗೌರವವೂ ಇಲ್ಲ. ಸಂವಿಧಾನ ದಮನ ಮಾಡಲು ಮುಂದಾಗುತ್ತಿದ್ದಾರೆ ಎಂದು ವಿಚಾರವಾದಿ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಮರುಳಸಿದ್ದಪ್ಪ ಆರೋಪಿಸಿದ್ದಾರೆ. 

ಚಿಂತಕ, ವಿಚಾರವಾದಿ ಪ್ರೊ.ಆನಂದ ತೇಲ್ತುಂಬ್ಡೆ ಅವರನ್ನು ಮುಂಬಯಿ ವಿಮಾನ ನಿಲ್ದಾಣದಲ್ಲಿ ಬಂಧಿಸಿರುವ ಕೇಂದ್ರ ಸರಕಾರದ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ಸಮಾನ ಮನಸ್ಕ ಪ್ರಗತಿಪರ ಸಂಘಟನೆಗಳ ವತಿಯಿಂದ ನಗರದ ಪುರಭವನ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆ ಪಾಲ್ಗೊಂಡು ಅವರು ಮಾತನಾಡಿದರು.

ಕೇಂದ್ರ ಸರಕಾರವು ಆನಂದ ತೇಲ್ತುಂಬ್ಡೆರನ್ನು ಬಂಧಿಸಲು ಬಹಳ ದಿನಗಳ ಕಾಲ ತಾಲೀಮು ನಡೆಸಿದೆ. ಸುಪ್ರೀಂಕೋರ್ಟ್ ಫೆ.11 ರವರೆಗೂ ಬಂಧಿಸಬಾರದು ಎಂದು ಹೇಳಿದೆ. ಇದರ ನಡುವೆಯೂ ಬಂಧನ ಮಾಡಿರುವುದು ಸರಿಯಲ್ಲ. ನಾವಿಂದು ಯಾವ ವ್ಯವಸ್ಥೆಯಲ್ಲಿದೀವಿ, ಅವರಿಗೆ ನ್ಯಾಯಾಲಯದ ಮೇಲೆ ಕನಿಷ್ಠ ಗೌರವವೂ ಇಲ್ಲದಂತಾಗಿದೆ ಎಂದು ದೂರಿದರು.

ಪ್ರೊ.ಆನಂದ ತೇಲ್ತುಂಬ್ಡೆಯನ್ನು ನಾನು ಹಲವಾರು ವರ್ಷಗಳಿಂದಲೂ ನೋಡುತ್ತಿದ್ದೇನೆ. ಅವರು ಎಂದೂ ದ್ವೇಷವನ್ನು ಪ್ರಚೋದಿಸಿದವರಲ್ಲ. ಹಿಂಸೆ ಪರವಾಗಿ ಮಾತನಾಡಿದವರೂ ಅಲ್ಲ. ಅಂತಹ ವ್ಯಕ್ತಿಯ ಬಗ್ಗೆ ಹಿಂಸೆಗೆ ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿ ಕೇಸುಗಳನ್ನು ದಾಖಲಿಸಿ ಬಂಧನ ಮಾಡಿರುವುದು ಖಂಡನೀಯ.

ಜ.31 ರಂದು ಗಾಂಧೀಜಿ ಹತ್ಯೆಯಾದ ದಿನದಂದು ಎಲ್ಲರೂ ಶಾಂತಿಗಾಗಿ ಎಲ್ಲ ಕಡೆ ಪ್ರಾರ್ಥಿಸುತ್ತಿದ್ದರೆ, ಉತ್ತರ ಪ್ರದೇಶದಲ್ಲಿ ಗಾಂಧೀಜಿ ಪ್ರತಿಕೃತಿಗೆ ಗುಂಡು ಹಾರಿಸಿ, ರಕ್ತ ಸುರಿಸಿದ್ದಾರೆ. ಮತ್ತೊಂದು ಕಡೆ ಹಿಂದೂ ಹೆಣ್ಣುಮ್ಕಕಳನ್ನು ಮುಟ್ಟಿದರೆ ಕೈ ಕಡಿಯಿರಿ ಎಂದು ಸಚಿವರೊಬ್ವರು ಹೇಳಿಕೆ ನೀಡುವ ಮೂಲಕ ಹಿಂಸೆಗೆ ಪ್ರೋತ್ಸಾಹಿಸುವ ಕೆಲಸ ಮಾಡಿದ್ದಾರೆ. ಅವರ ಬಗ್ಗೆ ಎಲ್ಲಿಯೂ ಚಕಾರ ಎತ್ತಲಿಲ್ಲ. ಆದರೆ, ಸಮಾಜದ ಪರವಾಗಿ, ರೈತ, ಕೂಲಿ-ಕಾರ್ಮಿಕರ, ರೈತರ, ಆದಿವಾದಿ, ದಲಿತ ಪರವಾಗಿ ಹೋರಾಡುವವರಿಗೆ ಅರ್ಬನ್ ನಕ್ಸಲ್, ನಕ್ಸಲ್ ಎಂಬಂತಹ ಹೆಸರುಗಳ ಮೂಲಕ ವಿಚಾರವಾದಿಗಳನ್ನು ಬಂಧಿಸಿ ಜೈಲಿಗೆ ಕಳಿಸಲಾಗುತ್ತಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ದೇಶದಲ್ಲಿ ಚುನಾವಣೆ ಬರಲಿದ್ದು, ಪ್ರಜಾತಂತ್ರ ವ್ಯವಸ್ಥೆ ರಕ್ಷಣೆಗಾಗಿ, ವಾಕ್ ಸ್ವಾತಂತ್ರದ ರಕ್ಷಣೆಗಾಗಿ ಬಿಜೆಪಿಯನ್ನು ಸೋಲಿಸಬೇಕಿದೆ ಎಂದು ಅವರು ಕರೆ ನೀಡಿದರು.

ಮಹಿಳಾ ಒಕ್ಕೂಟದ ಮುಖಂಡರು ಜ್ಯೋತಿ ಅನಂತಸುಬ್ಬರಾವ್ ಮಾತನಾಡಿ, ಕಾರ್ಮಿಕರ ಪರವಾಗಿ, ದಲಿತ, ದಮಜಿತರ ಪರವಾಗಿ ಕೆಲಸ ಮಾಡುವ ಜನರನ್ನು ದೇಶದ್ರೋಹಿಗಳು ಎನ್ನುತ್ತಿದ್ದಾರೆ. ಪ್ರಜಾಪ್ರಭುತ್ವದ ಪರವಾಗಿ ಮಾತನಾಡುವವರನ್ನು ಜೈಲಿಗೆ ಹಾಕಲಾಗುತ್ತಿದೆ. ಆದರೆ, ಕೈ ಕತ್ತರಿಸಿ, ಸಂವಿಧಾನ ಬದಲಾವಣೆ ಮಾಡಲಿದ್ದೇವೆ ಎಂದು ಹೇಳುವವರನ್ನು ರಕ್ಷಣೆ ಮಾಡಲಾಗುತ್ತಿದೆ ಎಂದು ದೂರಿದರು.

ಮುಂದಿನ ದಿನಗಳಲ್ಲಿ ದೇಶದಲ್ಲಿ ಚುನಾವಣೆ ಬರಲಿದ್ದು, ಪ್ರಜಾತಂತ್ರ ವ್ಯವಸ್ಥೆ ರಕ್ಷಣೆಗಾಗಿ, ವಾಕ್ ಸ್ವಾತಂತ್ರದ ರಕ್ಷಣೆಗಾಗಿ ಬಿಜೆಪಿಯನ್ನು ಸೋಲಿಸಬೇಕಿದೆ ಎಂದು ಅವರು ಕರೆ ನೀಡಿದರು.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೋದಿ ಸರಕಾರವು ದೇಶದಲ್ಲಿರುವ ವಿಚಾರವಾದಿಗಳು, ಪ್ರಗತಿಪರ ಚಿಂತಕರು, ಸಾಹಿತಿಗಳನ್ನು ಅನಾವಶ್ಯಕವಾಗಿ ಬಂಧನದ ಮೂಲಕ ಅಭಿವ್ಯಕ್ತಿ ಸ್ವಾತಂತ್ರವನ್ನು ದಮನ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ದೇಶದಲ್ಲಿ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಹತ್ತಿಕ್ಕುವ ಪಿತೂರಿ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಾಶ ಮಾಡಲು ವ್ಯವಸ್ಥಿತ ಯತ್ನ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಮಾವಳ್ಳಿ ಶಂಕರ್, ಗೋಪಾಲಕೃಷ್ಣ ಅರಳಹಳ್ಳಿ, ಜೆಎಂಎಸ್‌ನ ಕೆ.ಎಸ್.ಲಕ್ಷ್ಮಿ, ಗೌರಮ್ಮ, ಪತ್ರಕರ್ತ ಪಾರ್ವತೀಶ ಬಿಳಿದಾಳೆ, ಪ್ರಾಧ್ಯಾಪಕ ಕಿರಣ್ ಗಾಜನೂರು, ಸಿಐಟಿಯು ಮುಖಂಡರಾದ ಕೆ.ಮಹಾಂತೇಶ್, ಆದಿವಾಸಿ ಸಂಘಟನೆ ಮುಖಂಡ ಎಸ್.ವೈ.ಗುರುಶಾಂತ್, ಎಸ್‌ಡಿಪಿಐನ ದಾದಾ ಕಲಂದರ್, ಡಿವೈಎಫ್‌ಐನ ಬಸವರಾಜಪೂಜಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ದೇಶದಲ್ಲಿ ಜನಪರವಾಗಿ ಮಾತನಾಡುವವರು ಬಾಯಿ ಮುಚ್ಚಿಸುವ ಪ್ರಯತ್ನ ಮಾಡಲಾಗುತ್ತಿದೆ. ಬಿಜೆಪಿ ಹಾಗೂ ಸಂಘಪರಿವಾರ ಎಲ್ಲರ ಬಾಯಿ ಮುಚ್ಚಿಸುವ ಮೂಲಕ ದೇಶವನ್ನು ನಾಶದ ಅಂಚಿಗೆ ಕೊಂಡೊಯ್ಯುತ್ತಿದೆ. ಇನ್ನೊಂದು ಕಡೆ ಜಾತ್ಯತೀತ ಪಕ್ಷಗಳು ಎನಿಸಿಕೊಂಡಿರುವ ಕಾಂಗ್ರೆಸ್ ಸೇರಿದಂತೆ ಮತ್ತಿತರೆ ಪಕ್ಷಗಳು ವಾಕ್ ಸ್ವಾತಂತ್ರ, ಪ್ರಜಾತಂತ್ರದ ಮೇಲಿನ ದಾಳಿಯನ್ನು ಪ್ರಶ್ನಿಸದೇ ಮೌನವಾಗಿರುವ ಮೂಲಕ ದೇಶವನ್ನು ನಾಶದ ಕಡೆಗೆ ತಳ್ಳುತ್ತಿವೆ.

-ಪ್ರಕಾಶ್ ರೈ, ಬಹುಭಾಷಾ ನಟ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News