‘ಭಾರತೀಯ ಪರಂಪರೆ ಕುರಿತು ತಿಳುವಳಿಕೆ ನೀಡಿದವರು ದೇವಿಪ್ರಸಾದ್'

Update: 2019-02-03 16:24 GMT

ಉಡುಪಿ, ಫೆ.3: ಭಾರತೀಯ ಪರಂಪರೆಯಲ್ಲಿ, ಪ್ರಾಚೀನ ಭಾರತದ ಜ್ಞಾನಶಾಖೆಯಲ್ಲಿ ಯಾವ ವಿಷಯಗಳ ಬಗ್ಗೆ ಹೆಮ್ಮೆ ಪಡಬೇಕು ಹಾಗೂ ಯಾವ ವಿಷಯಗಳ ಕುರಿತಂತೆ ನಾಚಿಕೆಯಿಂದ ತಲೆತಗ್ಗಿಸಬೇಕೆಂದು ತಮ್ಮ ಆಳವಾದ ಅಧ್ಯಯನ ಹಾಗೂ ಸಂಶೋಧನೆಯ ಮೂಲಕ ತಿಳಿಸಿಕೊಟ್ಟ ಹಿರಿಮೆ ದೇಶದ ಖ್ಯಾತ ತತ್ವಶಾಸ್ತ್ರಜ್ಞ ದೇವಿಪ್ರಸಾದ ಚಟ್ಟೋಪಾಧ್ಯಾಯ ಅವರದು ಎಂದು ಬೆಂಗಳೂರಿನ ಚಿಂತಕಿ ಡಾ.ಎನ್.ಗಾಯತ್ರಿ ಹೇಳಿದ್ದಾರೆ.

ಕುಂದಾಪುರದ ಸಮುದಾಯ, ಹಿರಿಯಡಕದ ಸಂಸ್ಕೃತಿ ಸಿರಿ ಟ್ರಸ್ಟ್, ಉಡುಪಿ ಕೋಮು ಸೌಹಾರ್ದ ವೇದಿಕೆಗಳ ಸಂಯುಕ್ತ ಆಶ್ರಯದಲ್ಲಿ ರವಿವಾರ ನಗರದ ಕ್ರಿಶ್ಚಿಯನ್ ಹೈಸ್ಕೂಲ್‌ನ ಮುದ್ದಣ ಮಂದಿರದಲ್ಲಿ ನಡೆದ ತತ್ತ್ವಜ್ಞಾನಿ, ಇತಿಹಾಸಕಾರ ಹಾಗೂ ವಿಜ್ಞಾನಿ ದೇವಿಪ್ರಸಾದ ಚಟ್ಟೋಪಾಧ್ಯಾಯರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ‘ದೇವಿಪ್ರಸಾದ ಚಟ್ಟೋಪಾಧ್ಯಾಯರ ವೈಚಾರಿಕ ನಿಲುವುಗಳು’ ಕುರಿತು ಅವರು ಮಾತನಾಡಿದರು.
 

ಉಪನಿಷದ್‌ಗಳಂಥ ಪ್ರಾಚೀನ ಗ್ರಂಥಗಳಲ್ಲಿ ಹಿಂದು ಮತಾಂಧತೆಯ ಚರಿತ್ರೆ ಇದ್ದರೂ, ಅವುಗಳು ವಿಜ್ಞಾನದ ಹಿರಿಮೆಯನ್ನೂ ಎತ್ತಿ ಹಿಡಿದಿವೆ ಎಂಬುದನ್ನು ದೇವಿಪ್ರಸಾದರು ಮೊದಲ ಬಾರಿಗೆ ತೋರಿಸಿಕೊಟ್ಟರು ಎಂದವರು ನುಡಿದರು.

ರಾಷ್ಟ್ರೀಯ ವಿಜ್ಞಾನ ಸಮ್ಮ್ಞೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗಣಪತಿಯನ್ನು ಹೆಸರಿಸಿ ಪ್ಲಾಸ್ಟಿಕ್ ಸರ್ಜರಿ, ಪುಷ್ಪಕ ವಿಮಾನವನ್ನು ಹೆಸರಿಸಿ ನಮ್ಮಲ್ಲಿ ವಿಮಾನವಿತ್ತೆಂದು ಹೇಳುವ ಹುಚ್ಚಾಟದ, ಬದಲು ಭಾರತದ ಶ್ರೇಷ್ಠ ವೈಜ್ಞಾನಿಕ, ವೈಚಾರಿಕ ಚಿಂತನೆ ಉಳ್ಳ ಆಯುರ್ವೇದವನ್ನು ಉಲ್ಲೇಖಿಸಿದರೆ ಸಾಕು ಎಂದು ಎನ್.ಗಾಯತ್ರಿ ತಿಳಿಸಿದರು.

ದೇವಿಪ್ರಸಾದ್ ಚಟ್ಟೋಪಾಧ್ಯಾಯರು ಭಾರತದ ತತ್ತ್ವಶಾಸ್ತ್ರ ಮತ್ತು ಎಡಪಂಥೀಯ ಮಾರ್ಕ್ಸ್‌ವಾದವನ್ನು ಸಮನಾಗಿ ಕಂಡು ಸಂಶೋಧನೆ, ಚಿಂತನೆ ನಡೆಸಿದರು. ಸಮಾಜದಲ್ಲಿರುವ ಮೇಲರಿಮೆ, ಕೀಳರಿಮೆಯನ್ನು ಎತ್ತಿ ತೋರಿಸಿ ದರು ಎಂದು ಡಾ.ಗಾಯತ್ರಿ ಹೇಳಿದರು.

ಉಡುಪಿ ಶ್ರೀಕೃಷ್ಣ ಮಠದಲ್ಲಿ ವಿದ್ಯಾವಂತ ಮಹಿಳೆಯರೇ ಹೆಚ್ಚಾಗಿ ಬರಿ ನೆಲದಲ್ಲಿ ಊಟ ಮಾಡುತ್ತಾರೆ ಎಂಬುದನ್ನು ಅರಿತಾಗ, ದೇವಿಪ್ರಸಾದರ ಚಿಂತನೆಯ ಬೆಳಕು ಹಿಂದೆಂದಿಗಿಂತ ಇಂದು ಹೆಚ್ಚು ಅಗತ್ಯವಿದೆ ಎಂದೆನಿಸುತ್ತದೆ. ದೇಶದಲ್ಲಿ ದುಡಿಯುವ ವರ್ಗವೊಂದು ಇರುವವರೆಗೆ ಬಹುಮುಖ ವ್ಯಕ್ತಿತ್ವದ ಅವರ ಚಿಂತನೆಗಳು ಚಿರನೂತನವಾಗಿರುತ್ತದೆ ಎಂದೂ ಗಾಯತ್ರಿ ನುಡಿದರು.

ತತ್ವಶಾಸ್ತ್ರಕ್ಕೆ ದೇವಿಪ್ರಸಾದ ಚಟ್ಟೋಪಾಧ್ಯಾಯರ ಕೊಡುಗೆ ಎಂಬ ವಿಷಯದ ಕುರಿತು ಮಾತನಾಡಿದ ಚಿಂತಕ ಹಾಗೂ ನಿವೃತ್ತ ಪ್ರಾಧ್ಯಾಪಕ ಡಾ.ಗುಂಡ್ಮಿ ಭಾಸ್ಕರ ಮಯ್ಯ, ಭಾರತದ ಷಡ್ದರ್ಶನಗಳಲ್ಲಿ ಉತ್ತರ ಮೀಮಾಂಸಕರನ್ನು ಹೊರತು ಪಡಿಸಿದರೆ ಉಳಿದವರೆಲ್ಲರೂ ದೇವರನ್ನು ನಿರಾಕರಿಸುವವರೇ. ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಲ್ಲಿ ಆರ್ಥಿಕ ಸ್ಥಗಿತತೆಯಿಂದ ವೈಚಾರಿಕ ಸ್ಥಗಿತತೆ ಉಂಟಾಯಿತು ಎಂದು ಚಟ್ಟೋಪಾಧ್ಯಾಯರು ಹೇಳುತ್ತಾರೆ ಎಂದರು.

ಭಾರತದಲ್ಲಿ ಮಾತ್ರ ಧಾರ್ಮಿಕರು ವೈದ್ಯರು, ವಿಜ್ಞಾನಿಗಳ ವಿರುದ್ಧ ಇರಲಿಲ್ಲ. ಯುರೋಪಿನಲ್ಲೂ ಸಾಕ್ರೆಟೆಸ್, ಪ್ಲೇಟೋ, ಅರಿಸ್ಟಾಟಲ್‌ರಂಥ ದಾರ್ಶನಿಕರಿಗೆ ಚರ್ಚ್ ವಿರೋಧವಿತ್ತು. 16-17ನೆಯ ಶತಮಾನದವರೆಗೆ ಚರ್ಚುಗಳ ಪ್ರಭುತ್ವ ವೈದ್ಯಕೀಯ ವಿಜ್ಞಾನವನ್ನು ವಿರೋಧಿಸಿದ್ದವು. ಕೈಗಾರಿಕಾ ಕ್ರಾಂತಿ ಬಳಿಕ ಈ ‘ಪಾಳೆಗಾರಿಕೆ’ ಕಡಿಮೆಯಾಯಿತು. ಅಲ್ಲಿಯವರೆಗೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಕತ್ತಲೆ ಯುಗ ಆವರಿಸಿತ್ತು. ಭಾರತದಲ್ಲಿ ತತ್ವಶಾಸ್ತ್ರವನ್ನು ಧರ್ಮದಿಂದ ಬಿಡುಗಡೆ ಗೊಳಿಸಲಾಗಲಿಲ್ಲ. ಆದರೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಇದು ಸಾಧ್ಯವಾಯಿತು ಎಂದು ಭಾಸ್ಕರ ಮಯ್ಯ ವಿವರಿಸಿದರು.

ಹಿರಿಯಡಕ ಸಂಸ್ಕೃತಿ ಸಿರಿ ಟ್ರಸ್ಟ್ ಅಧ್ಯಕ್ಷ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡಕ, ಕೋಮು ಸೌಹಾರ್ದ ವೇದಿಕೆ ಜಿಲ್ಲಾಧ್ಯಕ್ಷ ಜಿ.ರಾಜಶೇಖರ್ ಉಪಸ್ಥಿತರಿದ್ದರು. ಸಮುದಾಯ ಕುಂದಾಪುರದ ಅಧ್ಯಕ್ಷ ಉದಯ ಗಾಂವ್ಕರ್ ಸ್ವಾಗತಿಸಿ ಚಂದ್ರಿಕಾ ನಾಗರಾಜ್ ಕಾರ್ಯಕ್ರಮ ನಿರ್ವಹಿಸಿದರು.

ಅಂದು ವೈದ್ಯರು ಶ್ರಮಿಕರು, ಈಗ ?

ಚಟ್ಟೋಪಾಧ್ಯಾಯರು ಶ್ರಮಿಕರಲ್ಲದವರನ್ನು ಭಾವನವಾದಿಗಳೆಂದೂ, ಶ್ರಮಿಕರನ್ನು ಭೌತವಾದಿಗಳೆಂದೂ ವರ್ಗೀಕರಿಸುತ್ತಾರೆ. ಇವೆರಡೂ ವೇದ, ಉಪನಿಷತ್ತುಗಳಲ್ಲಿವೆ ಎನ್ನುವುದನ್ನು ತೋರಿಸಿದ್ದಾರೆ. ಚರಕ ಸಂಹಿತೆ ಪ್ರಕಾರ ವೈದ್ಯರು ಜಾತಿಭೇದವಿಲ್ಲದೆ ಸೇವೆ ಸಲ್ಲಿಸಬೇಕೆಂದರೆ ವರ್ಣ ಸಂಕರ ಭಯದಿಂದ ಧರ್ಮಶಾಸ್ತ್ರಕಾರರು (ಭಾವನವಾದಿಗಳು) ಇದನ್ನು ವಿರೋಧಿಸುತ್ತಾರೆ. ಅಶ್ವಿನಿ ದೇವತೆಗಳಿಗೆ ಹವಿಸ್ಸು ನಿರಾಕರಿಸುತ್ತಾರೆ.

ಆದರೆ ವೈದ್ಯರು ಇದರಿಂದ ಹಿಂದೆ ಬೀಳಲಿಲ್ಲ. ಅದ್ಭುತವಾದ ವೈಚಾರಿಕ, ವೈಜ್ಞಾನಿಕ ಕೊಡುಗೆಗಳನ್ನು ಕೊಟ್ಟರು. ಆಗ ವೈದ್ಯರು ಈಗಿನಂತೆ ಔಷಧದ ಚೀಟಿ (ಪ್ರಿಸ್ಕ್ರಿಪ್ಶನ್) ಬರೆದು ಕೊಟ್ಟವರಲ್ಲ. ಅವರು ಕಾಡಿಗೆ ಹೋಗಿ ನಾರುಬೇರು ಗಳನ್ನು ಸ್ವತಹ ಕಿತ್ತು ತರಬೇಕಿತ್ತು. ಹೀಗಾಗಿ ಅಂದು ವೈದ್ಯರು ಶ್ರಮಿಕರಾಗಿ ದ್ದರು. ಆದರೆ ಇಂದು ಅದು ಸಂಪೂರ್ಣ ತಿರುವು ಮರುವಾಗಿದೆ ಎಂದು ಡಾ. ಗಾಯತ್ರಿ ವಿಶ್ಲೇಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News