ಸಮಾಜದ ದಿಕ್ಕು ಬದಲಿಸುವ ಶಕ್ತಿ ಸಾಹಿತ್ಯಕ್ಕಿದೆ: ಇತಿಹಾಸ ತಜ್ಞ ಸದ್ಯೋಜಾತ ಭಟ್

Update: 2019-02-03 16:42 GMT

ಬೆಂಗಳೂರು, ಫೆ.3: ಸಮಾಜದ ದಿಕ್ಕನ್ನು ಬದಲಿಸುವ ಶಕ್ತಿ ಸಾಹಿತ್ಯಕ್ಕಿದೆ. ‘ಬೆಂಗಾಲಿಬೆಡಗಿ’ ಪುಸ್ತಕದಲ್ಲಿ ಗಾಂಧರದ ಉಲ್ಲೇಖವಿದ್ದು, ಅರ್ಥಗರ್ಭಿತ ವಾಗಿ ವರ್ಣಿಸಲಾಗಿದೆ ಎಂದು ಇತಿಹಾಸ ತಜ್ಞ ಸದ್ಯೋಜಾತ ಭಟ್ ಹೇಳಿದರು.

ರವಿವಾರ ನಗರದ ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ದೇವಾಲದಕೆರೆ ಪ್ರಕಾಶನ ಆಯೋಜಿಸಿದ್ದ ವಿನಯ್ ದಂತಕಲ್ ಅವರ ‘ಬೆಂಗಾಲಿಬೆಡಗಿ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮಾಜದಲ್ಲಿನ ತಪ್ಪುಗಳನ್ನು ತಿದ್ದುವ ಕೆಲಸ ಸಾಹಿತ್ಯ ಮಾಡುತ್ತದೆ. ಹೀಗಾಗಿ, ಅದಕ್ಕೆ ಹೆಚ್ಚಿನ ಮಹತ್ವವಿದೆ ಎಂದು ತಿಳಿಸಿದರು.

ಹವ್ಯಕ ಸಮುದಾಯದ ಕಬಡ್ಡಿ ಆಟಗಾರನೊಬ್ಬ ಬೆಂಗಾಲಿಗೆ ಹೋದಾಗ ಅಲ್ಲಿ ಆತನಿಗಾದ ಪ್ರೇಮಾಂಕುರ, ಅದರಿಂದಾಗಿ ಆತ ಮತಾಂತರಗೊಂಡ ಪರಿಯನ್ನು ಕೃತಿಯಲ್ಲಿ ಲೇಖಕ ವಿನಯ್ ಸೊಗಸಾಗಿ ವಿವರಿಸಿದ್ದಾರೆ. ಲೇಖಕಿನಿಗೆ ಒಂದು ವಿಷಯ, ಘಟನೆಯನ್ನು ಹೇಳಬೇಕಾದರೆ ಅದರ ಚರಿತ್ರ ಬಗ್ಗೆ ಸಂಪೂರ್ಣ ಜ್ಞಾನ ಇರಬೇಕು. ಕೃತಿಯಲ್ಲಿ ಅದು ಸಾಬೀತಾಗಿ ಓದುಗರ ಮನಮುಟ್ಟುವಂತಿದೆ ಎಂದರು.

ಪತ್ರಕರ್ತ ರೋಹಿತ್ ಚಕ್ರತೀರ್ಥ ಮಾತನಾಡಿ, ಹವ್ಯಕ ಹುಡುಗರಿಗೆ ಹುಡುಗಿಯರ ಕೊರತೆ ಇದೆ. ಆ ಸಮುದಾಯದ ಹುಡುಗನೊಬ್ಬ ಬೆಂಗಾಲಗೆ ತೆರಳಿದ್ದರ ಜಾಡು ಹಿಡಿದ ಲೇಖಕರು ಕಬಡ್ಡಿ ಬಗ್ಗೆ ಆಳ ಅಧ್ಯಯನ ಮಾಡಿದ್ದಾರೆ. ಅನೇಕ ದೇಶಗಳ ಬಗ್ಗೆ ತಿಳಿದುಕೊಂಡ ನಾವು ನೆರೆಯ ದೇಶಗಳ ಬಗ್ಗೆ ತಿಳಿದುಕೊಂಡಿಲ್ಲ, ಇತಿಹಾಸದಲ್ಲೂ ಉಲ್ಲೇಖವಾಗಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News