ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಲು ಸರಕಾರ ಬದ್ಧ: ರಾಜ್ಯಪಾಲ ವಜುಭಾಯಿ ವಾಲಾ

Update: 2019-02-06 14:03 GMT

ಬೆಂಗಳೂರು, ಫೆ.6: ಸಮಾಜದ ಬಡ ವರ್ಗದ ಬುದ್ಧಿವಂತ ಮಕ್ಕಳು ಇಂಗ್ಲಿಷ್ ಜ್ಞಾನದ ಕೊರತೆಯಿಂದಾಗಿ ಹಿಂದುಳಿಯಬಾರದು ಎಂಬ ಉದ್ದೇಶದಿಂದ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ಆರಂಭಿಸುವುದಕ್ಕೆ ಸರಕಾರ ಬದ್ಧವಾಗಿದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದ್ದಾರೆ.

ಬುಧವಾರ ವಿಧಾನಸೌಧದಲ್ಲಿನ ವಿಧಾನಸಭೆ ಸಭಾಂಗಣದಲ್ಲಿ ಉಭಯ ಸದನಗಳ ಸದಸ್ಯರ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು, ಜೊತೆಗೆ ಕನ್ನಡಕ್ಕೆ ಪ್ರಾಮುಖ್ಯತೆ ನೀಡುವ ವಿಷಯದಲ್ಲಿ ಯಾವುದೇ ರಾಜಿಯಾಗುವುದಿಲ್ಲ ಎಂದರು.

ಸರಕಾರಿ ಶಾಲೆಗಳಲ್ಲಿ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು 450 ಕೋಟಿ ರೂ.ಗಳ ಯೋಜನೆಯನ್ನು ಮಂಜೂರು ಮಾಡಿ, ಅನುದಾನ ಬಿಡುಗಡೆ ಮಾಡಲಾಗಿದೆ. ಪದವಿ ಪೂರ್ವ, ಪದವಿ ಮತ್ತು ಸ್ನಾತಕೋತ್ತರ ವ್ಯಾಸಂಗದಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು 3 ಲಕ್ಷ ವಿದ್ಯಾರ್ಥಿನಿಯರನ್ನು ಪ್ರೋತ್ಸಾಹಿಸಲು ಶುಲ್ಕ ವಿನಾಯಿತಿ ನೀಡಲು 95 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ಅವರು ಹೇಳಿದರು.

ಉನ್ನತ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ದೃಷ್ಟಿಯಿಂದ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಮೂಲ ಸೌಕರ್ಯಗಳನ್ನು ಸೃಜಿಸುವುದಕ್ಕಾಗಿ ಅಂದಾಜು 750 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 290 ಕೋಟಿ ರೂ.: ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ‘ಅರಿವು’ ಯೋಜನೆಯಡಿಯಲ್ಲಿ ವೃತ್ತಿಪರ ಕೋರ್ಸುಗಳನ್ನು ವ್ಯಾಸಂಗ ಮಾಡಲು ಇಚ್ಛಿಸುವ 21,731 ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಕಳೆದ ಸಾಲಿನ ಡಿಸೆಂಬರ್ ಅಂತ್ಯಕ್ಕೆ 70 ಕೋಟಿ ರೂ.ಗಳ ಶೈಕ್ಷಣಿಕ ಸಾಲ ಮಂಜೂರು ಮಾಡಿದೆ. ಅಲ್ಲದೆ, 14.55 ಲಕ್ಷ ವಿದ್ಯಾರ್ಥಿಗಳಿಗಾಗಿ ವಿವಿಧ ವಿದ್ಯಾರ್ಥಿ ವೇತನ ಯೋಜನೆಗಳ ಅಡಿಯಲ್ಲಿ 290 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದು ಅವರು ಹೇಳಿದರು.

ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 4 ಸಾವಿರ ಕೋಟಿ ರೂ.ಗಳ ಯೋಜನಾ ವೆಚ್ಚದಲ್ಲಿ 152 ವಸತಿ ಶಾಲೆಗಳು ಹಾಗೂ 427 ವಸತಿ ನಿಲಯಗಳ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ರಾಜ್ಯಪಾಲ ತಿಳಿಸಿದರು.

ಎಸ್ಸಿ-ಎಸ್ಟಿಗಳಲ್ಲಿ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವುದಕ್ಕಾಗಿ ಸಮೃದ್ಧಿ, ಉನ್ನತಿ ಮತ್ತು ಐರಾವತದಂತಹ ನೂತನ ಕಾರ್ಯಕ್ರಮಗಳ ಅಡಿಯಲ್ಲಿ 15,650 ಫಲಾನುಭವಿಗಳು 650 ಕೋಟಿ ರೂ.ಗಳಷ್ಟು ನೆರವನ್ನು ಪಡೆದಿದ್ದಾರೆ. ಎಸ್ಸಿ-ಎಸ್ಟಿಗಳ ಕಲ್ಯಾಣಕ್ಕಾಗಿ ಬೇರೆ ಬೇರೆ ಇಲಾಖೆಗಳಲ್ಲಿನ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ 29,208 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಅವರು ಹೇಳಿದರು.

ನವೋದ್ಯಮಗಳಿಗೆ ಉತ್ತೇಜನ: 2025ರ ವೇಳೆಗೆ ರಾಜ್ಯದಲ್ಲಿನ ನವೋದ್ಯಮ (Start-up )ಗಳ ಸಂಖ್ಯೆಯು 20 ಸಾವಿರಕ್ಕೆ ತಲುಪುವ ಸಂಭವವಿದೆ. ಕರ್ನಾಟಕವು ಯುಎಸ್‌ಎ, ಯುಕೆ, ಇಸ್ರೇಲ್, ಫ್ರಾನ್ಸ್ ಮತ್ತು ಜಪಾನ್‌ನಂತಹ ವಿಶ್ವದ ಅನೇಕ ಮುಂಚೂಣಿ ನವೋದ್ಯಮ ಪರಿಸರ ವ್ಯವಸ್ಥೆಗಳೊಂದಿಗೆ ಸಹಭಾಗಿತ್ವ ವನ್ನು ಸಾಧಿಸುತ್ತಿದ್ದು, ನವೋದ್ಯಮಗಳಿಗೆ ಉತ್ತೇಜನ ನೀಡಲು 58 ಕರ್ನಾಟಕ-ತಂತ್ರಜ್ಞಾನ(K-tech) ಇನ್ನೋವೇಷನ್ ಕೇಂದ್ರಗಳು ಟೈರ್-2 ನಗರಗಳಲ್ಲಿವೆ ಎಂದು ಅವರು ತಿಳಿಸಿದರು.

ರಾಜ್ಯದ ಒಂಭತ್ತು ಜಿಲ್ಲೆಗಳಲ್ಲಿ ಕೈಗಾರಿಕಾ ಕ್ಲಸ್ಟರುಗಳನ್ನು ಅಭಿವೃದ್ಧಿಪಡಿಸುವುದಕ್ಕೆ ‘ಕಾಂಪೀಟ್ ವಿತ್ ಚೈನಾ’ ಎಂಬ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು, ಪ್ರತಿಯೊಂದು ಕ್ಲಸ್ಟರ್ ತನ್ನ ನಿರ್ದಿಷ್ಟ ಸಾಮರ್ಥ್ಯದ ಮೇಲೆ ಕೇಂದ್ರೀಕೃತವಾಗಿರಲಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News