ಶಾಸಕಾಂಗ ಸಭೆಗೆ ಗೈರು ಹಾಜರಾದರೆ ಅನರ್ಹತೆಗೆ ಶಿಫಾರಸ್ಸು: ಸಿದ್ದರಾಮಯ್ಯ

Update: 2019-02-06 14:59 GMT

ಬೆಂಗಳೂರು, ಫೆ.6: ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾಗುವ ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಸ್ಪೀಕರ್‌ಗೆ ಶಿಫಾರಸ್ಸು ಮಾಡಲಾಗುವುದು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ಬುಧವಾರ ನಗರದ ಅರಮನೆ ಮೈದಾನದಲ್ಲಿ ನಡೆದ ಕೆಪಿಸಿಸಿ ಸರ್ವ ಸದಸ್ಯರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಫೆ.8ರಂದು ಕರೆಯಲಾಗಿರುವ ಶಾಸಕಾಂಗ ಪಕ್ಷದ ಸಭೆಗೆ ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರೆಲ್ಲರೂ ಕಡ್ಡಾಯವಾಗಿ ಹಾಜರಾಗಲೇಬೇಕು ಎಂದು ಸೂಚಿಸಿದರು.

ಯಾರೂ ಕೂಡ ಶಾಸಕಾಂಗ ಸಭೆಗೆ ಗೈರು ಹಾಜರಾಗಬಾರದು. ಈಗಾಗಲೇ ಒಂದಿಬ್ಬರು ಶಾಸಕರು ಬಿಜೆಪಿಯ ಆಮಿಷಕ್ಕೆ ಬಲಿಯಾಗಿದ್ದಾರೆ. ತಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳಲಿ ಎಂದು ಅವರಿಗೆ ಈಗಲೂ ಹೇಳುತ್ತಿದ್ದೇನೆ. ಎರಡು ಬಾರಿ ನೋಟಿಸ್ ಕೊಟ್ಟರೂ ಖುದ್ದು ಭೇಟಿಯಾಗಲಿಲ್ಲ. ಈಗ ಮತ್ತೆ ವಿಪ್ ಜಾರಿ ಮಾಡಿದ್ದೇನೆ ಎಂದು ಅವರು ಹೇಳಿದರು.

ಅತೃಪ್ತ ಶಾಸಕರಿಗೆ ಕೊನೆಯ ಅವಕಾಶ ನೀಡುತ್ತಿದ್ದು, ಪಕ್ಷ ಮತ್ತು ಮುಖಂಡರು ಸಾಕಷ್ಟು ತಾಳ್ಮೆಯಿಂದ ಕಾದಿದ್ದೇವೆ. ಇನ್ನೂ ಮುಂದೆ ಕಾಯಲು ಸಾಧ್ಯವಿಲ್ಲ. ಯಾವ ಶಾಸಕರು ಫೆ.8ರಂದು ನಡೆಯುವ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗುವುದಿಲ್ಲವೋ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಸ್ಪೀಕರ್‌ಗೆ ನಾವೇ ಮನವಿ ಮಾಡುತ್ತೇವೆ. ಜೊತೆಗೆ ಅವರ ವಿರುದ್ಧ ಕಾನೂನು ಹೋರಾಟ ನಡೆಸುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಬಿಜೆಪಿ ನಾಯಕರು ನಮ್ಮ 25-30 ಶಾಸಕರಿಗೆ ಆಮಿಷವೊಡ್ಡಿದ್ದಾರೆ. ನಿನ್ನೆ ಕೂಡ ಜೆಡಿಎಸ್ ಶಾಸಕರೊಬ್ಬರ ಮನೆಗೆ 30 ಕೋಟಿ ರೂ.ಹಣ ತೆಗೆದುಕೊಂಡು ಹೋಗಿದ್ದಾರೆ. ಆದರೆ, ಆ ಶಾಸಕರು ಕೈ ಮುಗಿದು ವಾಪಸ್ ತೆಗೆದುಕೊಂಡು ಹೋಗಿ ಎಂದು ಹೇಳಿದ್ದಾರೆ ಎಂದು ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು.

ಮತ್ತೊಬ್ಬ ಶಾಸಕರ ಮನೆಯಲ್ಲಿ 5 ಕೋಟಿ ರೂ.ಹಣ ಇಟ್ಟು ಆಮೇಲೆ ಮಾತನಾಡೋಣ ಎಂದಷ್ಟೇ ಹೇಳಿ ಹೋಗಿದ್ದಾರೆ. ಶಾಸಕರಿಗೆ ಆಮಿಷವೊಡ್ಡಲು ಇಷ್ಟೊಂದು ಹಣ ಇವರಿಗೆ ಎಲ್ಲಿಂದ ಬಂತು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಕಾಂಗ್ರೆಸ್ ಶಾಸಕರಿಗೆ ಸಚೇತನಾ ಪತ್ರ: ಬೆಂಗಳೂರಿನ ವಿಧಾನಸೌಧದಲ್ಲಿ ಫೆ.6ರಿಂದ 15ರವರೆಗೆ ನಡೆಯಲಿರುವ ಅಧಿವೇಶನದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಶಾಸಕರು ಕಡ್ಡಾಯವಾಗಿ ಹಾಜರಿರಬೇಕೆಂದು ಈ ಮೂಲಕ ತಮಗೆ ‘ವಿಪ್’ ಜಾರಿಗೊಳಿಸಲಾಗಿದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಬುಧವಾರ ಎಲ್ಲ ಶಾಸಕರಿಗೆ ಸಚೇತನಾ ಪತ್ರ ರವಾನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News