ಇಂಗು ತಿಂದ ಮಂಗನಂತೆ ವರ್ತಿಸುತ್ತಿರುವ ಬಿಜೆಪಿ: ಸಿದ್ದರಾಮಯ್ಯ

Update: 2019-02-07 13:41 GMT

ಬೆಂಗಳೂರು, ಫೆ.7: ಬಿಜೆಪಿಯವರು ಇಂಗು ತಿಂದ ಮಂಗನಂತೆ ವರ್ತಿಸುತ್ತಿದ್ದಾರೆ. ವಿಧಾನಸಭೆ ಕಲಾಪ ನಡೆಯುವುದು ಅವರಿಗೆ ಇಷ್ಟವಿಲ್ಲ. ರಾಜ್ಯ ಸರಕಾರ ಬೀಳಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ. ಬಿಜೆಪಿ ನಡೆಯನ್ನು ನಾನು ಖಂಡಿಸುತ್ತೇನೆ. ವಾರ್ಷಿಕ ಬಜೆಟ್ ಮಂಡನೆಗೂ ಅಡ್ಡಿಪಡಿಸುತ್ತಿದ್ದಾರೆ ಎಂದರು.

ನಾಳೆ ಬಜೆಟ್ ಮಂಡನೆ ಆರಂಭಕ್ಕೂ ಮುನ್ನ ಶಾಸಕಾಂಗ ಪಕ್ಷದ ಸಭೆಯನ್ನು ಕರೆದಿದ್ದೇನೆ. ಎಲ್ಲ ಶಾಸಕರು ಭಾಗವಹಿಸುತ್ತಾರೆ ಎಂಬ ಆತ್ಮವಿಶ್ವಾಸವಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಸದನಕ್ಕೆ ಬಾರದ ಶಾಸಕರು: ಬಜೆಟ್ ಅಧಿವೇಶನದ ಎರಡೇ ದಿನವಾದ ಇಂದು ಸಹ ಕಾಂಗ್ರೆಸ್ ಪಕ್ಷದ ಶಾಸಕರಾದ ರಮೇಶ್ ಜಾರಕಿಹೊಳಿ, ಡಾ.ಉಮೇಶ್ ಜಾಧವ್, ಮಹೇಶ್ ಕುಮಟಳ್ಳಿ, ಬಿ.ನಾಗೇಂದ್ರ ಗೈರು ಹಾಜರಾಗಿದ್ದರು.

ಇವರ ಜೊತೆಗೆ, ಹಿರೇಕೆರೂರು ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ್, ಚಳ್ಳಕೆರೆ ಕಾಂಗ್ರೆಸ್ ಶಾಸಕ ಟಿ.ರಘುಮೂರ್ತಿ, ಕಂಪ್ಲಿ ಶಾಸಕ ಜೆ.ಎನ್.ಗಣೇಶ್, ಜೆಡಿಎಸ್ ಪಕ್ಷದ ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ ಸಹ ಸದನಕ್ಕೆ ಆಗಮಿಸಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News