ವೇತನ ಹೆಚ್ಚಳಕ್ಕೆ ಆಗ್ರಹಿಸಿ ಬಿಸಿಯೂಟ ನೌಕರರಿಂದ ಧರಣಿ

Update: 2019-02-07 14:40 GMT

ಬೆಂಗಳೂರು, ಫೆ.7: ರಾಜ್ಯ ಸರಕಾರದ ಬಜೆಟ್‌ನಲ್ಲಿ ಬಿಸಿಯೂಟ ನೌಕರರಿಗೆ ಕನಿಷ್ಠ ವೇತನ ನೀಡುವವರೆಗೂ ಐದು ಸಾವಿರ ರೂ. ವೇತನ ಹೆಚ್ಚಳ ಮಾಡಬೇಕು ಸೇರಿದಂತೆ ಮತ್ತಿತರೆ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ರಾಜ್ಯ ಬಿಸಿಯೂಟ ನೌಕರರು ಇಂದು ನಗರದಲ್ಲಿ ಧರಣಿ ನಡೆಸಿದರು.

ನಗರದ ಸಂಗೊಳ್ಳಿ ರಾಯಣ್ಣ ಸಿಟಿ ರೈಲು ನಿಲ್ದಾಣದಿಂದ ಸ್ವಾತಂತ್ರ ಉದ್ಯಾನವನದವರೆಗೂ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿ, ಪ್ರಸ್ತುತ ಸಾಲಿನಲ್ಲಿ ಕೇಂದ್ರದ ಮೋದಿ ಸರಕಾರ ಬಜೆಟ್‌ನಲ್ಲಿ ಬಿಸಿಯೂಟ ನೌಕರರಿಗೆ ಅನ್ಯಾಯವೆಸಗಿದ್ದಾರೆ ಎಂದು ಆರೋಪಿಸಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರಕಾರದ 2019-20 ರ ಬಜೆಟ್‌ನಲ್ಲಿ ಬಿಸಿಯೂಟ ನೌಕರರಿಗೆ ನಯಾ ಪೈಸೆಯನ್ನೂ ಮೀಸಲಿಟ್ಟಿಲ್ಲ. ಕೇವಲ ತೋರಿಕೆಗಾಗಿ ಬೇಟಿ ಬಚಾವೋ, ಮಾತೃ ದೇವೋಭವ ಎನ್ನುವ ಬಿಜೆಪಿಯು ಲಕ್ಷಾಂತರ ಮಹಿಳೆಯರ ದುಡಿಮೆಯನ್ನು ಅವರ ಪ್ರಜಾಸತ್ತಾತ್ಮಕ ಹೋರಾಟವನ್ನು ಅವಹೇಳನ ಮಾಡಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಬಿಸಿಯೂಟ ನೌಕರರ ಮುಖಂಡರಾದ ಮಾಲಿನಿ ಮೇಸ್ತಾ ಮಾತನಾಡಿ, ಸರಕಾರಗಳ ಮಹತ್ವವಾದ ಯೋಜನೆಯಾದ ಅಕ್ಷರ ದಾಸೋಹ ಯೋಜನೆ ಅಡಿಯಲ್ಲಿ ಲಕ್ಷಾಂತರ ಜನರು ಕೋಟ್ಯಂತರ ಮಕ್ಕಳಿಗೆ ಊಟ ಬಡಿಸುತ್ತಿದ್ದಾರೆ. ಆದರೆ, ನೌಕರರಿಗೆ ಕನಿಷ್ಠ ವೇತನ ನೀಡಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಮುಂದಾಗುತ್ತಿಲ್ಲ ಎಂದು ದೂರಿದರು.

ಬಿಸಿಯೂಟ ನೌಕರರಿಗೆ ಕೆಲಸದ ಭದ್ರತೆಯಾಗಲಿ, ಸಮರ್ಪಕ ಕೂಲಿಯಾಗಲಿ ಇಲ್ಲ. ಕೆಲಸ ಖಾಯಂ ಮಾಡದೇ ಮಹಿಳೆಯರನ್ನು ಶೋಷಣೆ ಮಾಡುತ್ತಿದ್ದಾರೆ. ಅಲ್ಲದೆ, ಬಿಸಿಯೂಟಕ್ಕೆ ಅನುದಾನವನ್ನು ಕಡಿಮೆ ಮಾಡುವ ಮೂಲಕ ಯೋಜನೆಯನ್ನು ಖಾಸಗೀಕರಣ ಮಾಡಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ರಾಜ್ಯ ವ್ಯಾಪ್ತಿಯ 54,839 ಶಾಲೆಗಳಲ್ಲಿ 53,43,501 ಮಕ್ಕಳು ದಿನನಿತ್ಯ ಬಿಸಿಯೂಟ ಫಲಾನುಭವಿಗಳಾಗಿದ್ದಾರೆ. ಈ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ 1,18,130 ಮಹಿಳೆಯರು ದುಡಿಯುತ್ತಿದ್ದಾರೆ. ಇವರ ಮಾಸಿಕ ವೇತನ ಕೇಂದ್ರ ಮತ್ತು ರಾಜ್ಯ ಸರಕಾರ ಎರಡೂ ಸೇರಿ ನೀಡಬೇಕು. ಆದರೆ, ಕೇಂದ್ರ ಸರಕಾರ ಮಂಡಿಸಿದ ಬಜೆಟ್‌ನಲ್ಲಿ ಒಂದು ರೂ. ವೇತನ ಹೆಚ್ಚಿಸಿಲ್ಲ. ಹೀಗಾಗಿ, ರಾಜ್ಯ ಸರಕಾರ ತನ್ನ ಬಜೆಟ್‌ನಲ್ಲಿ ವೇತನವನ್ನು ಹೆಚ್ಚಿಸಬೇಕು ಎಂದು ಅವರು ಒತ್ತಾಯಿಸಿದರು.

45ನೇ ಭಾರತೀಯ ಕಾರ್ಮಿಕ ಸಮ್ಮೇಳನದ ಪ್ರಕಾರ ಬಿಸಿಯೂಟ ನೌಕರರನ್ನು ಕಾರ್ಮಿಕರು ಎಂದು ಪರಿಗಣಿಸಿ ಕನಿಷ್ಠ ವೇತನ ಜಾರಿ ಮಾಡಬೇಕೆಂದು ಶಿಫಾರಸು ಮಾಡಲಾಗಿದೆ. ಆದರೆ, ಇದುವರೆಗೂ ಅದನ್ನು ಪರಿಗಣಿಸಿಲ್ಲ. ಯಾರನ್ನೂ ದುಡಿಸತಕ್ಕದ್ದಲ್ಲ ಎಂದು ಶಿಫಾರಸು ಮಾಡಿದರೂ, ಕೇಂದ್ರ ಸರಕಾರ ಕಿಂಚಿತ್ತೂ ಬೆಲೆ ಕೊಡದೆ ಈ ಯೋಜನೆಗೆ ಬರುವ ಅರ್ಧದಷ್ಟು ಅನುದಾನ ಕಡಿತ ಮಾಡಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಬೇಡಿಕೆಗಳು:

- ಕೇಂದ್ರ ಸರಕಾರ ಕೂಡಲೇ ಬಜೆಟ್ ಪರಿಷ್ಕರಣೆ ಮಾಡಿ, ಬಿಸಿಯೂಟ ನೌಕರರ ವೇತನ ಹೆಚ್ಚಿಸಬೇಕು.

- ರಾಜ್ಯ ಬಜೆಟ್‌ನಲ್ಲಿ ಐದು ಸಾವಿರ ವೇತನ ಹೆಚ್ಚಳ ಮಾಡಬೇಕು.

- ಬಿಸಿಯೂಟ ನೌಕರರಿಗೆ ಕನಿಷ್ಠ ವೇತನ ನೀಡಬೇಕು.

- ಎಲ್ಲರಿಗೂ ಪಿಂಚಣಿ, ಹೆಲ್ತ್‌ಕಾರ್ಡ್, ಆರೋಗ್ಯವಿಮೆ ಸೇವೆ ಕಲ್ಪಿಸಬೇಕು.

- ದಸರಾ ರಜೆ ಕಡ್ಡಾಯವಾಗಿ ಜಾರಿ ಮಾಡಬೇಕು.

- ಈ ಹಿಂದೆ ನೌಕರರ ಜತೆ ಮಾತುಕತೆ ಮಾಡಿದ, ನೀಡಿದ ಭರವಸೆಗಳೆಲ್ಲವನ್ನೂ ಈಡೇರಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News