ಪ್ರತಿ ಮನೆಯಲ್ಲಿ ಪುಸ್ತಕಗಳಿಗೆ ಪ್ರಮುಖ ಜಾಗವಿರಲಿ: ಹಿರಿಯ ಸಾಹಿತಿ ಹಂಪ ನಾಗರಾಜಯ್ಯ

Update: 2019-02-10 14:37 GMT

ಬೆಂಗಳೂರು, ಫೆ.10: ಶಾಲೆ, ಕಾಲೇಜುಗಳು ವಿದ್ಯಾರ್ಥಿಗಳಿಗೆ ಶಿಕ್ಷಕರು ನಮಗೆ ಮಾರ್ಗದರ್ಶಕರಾದರೆ, ಮನೆಗಳಲ್ಲಿ ಪುಸ್ತಕಗಳು ನಮಗೆ ಗುರುವಾಗಿ ಮಾರ್ಗದರ್ಶನ ನೀಡುತ್ತವೆ. ಹೀಗಾಗಿ ಪ್ರತಿಯೊಬ್ಬರ ಮನೆಯಲ್ಲಿ ಪುಸ್ತಕಗಳು ಪ್ರಮುಖ ಜಾಗ ಪಡೆಯಲಿ ಎಂದು ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ತಿಳಿಸಿದರು.

ರವಿವಾರ ಕನ್ನಡ ಪುಸ್ತಕ ಪ್ರಾಧಿಕಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ರಿಯಾಯಿತಿ ಪುಸ್ತಕ ಮೇಳದಲ್ಲಿ ಭಾಗವಹಿಸಿ ಹಾಗೂ ಓದುಗರೊಂದಿಗೆ ಸೆಲ್ಫಿ ತೆಗೆಸಿಕೊಂಡು ಮಾತನಾಡಿದ ಅವರು, ಪುಸ್ತಕಗಳನ್ನು ಸ್ನೇಹಿತರನ್ನಾಗಿ, ಆತ್ಮೀಯ ಬಂಧುವಾಗಿ ಅಪ್ಪಿಕೊಂಡರೆ ನಮ್ಮ ಚಿಂತನಾಮಟ್ಟ ಹೆಚ್ಚಲಿದೆ ಎಂದು ತಿಳಿಸಿದರು.

ಬೇರೆ ಭಾಷೆಗಳಿಗಿಂತ ಕನ್ನಡದಲ್ಲಿ ಹೆಚ್ಚು ಪುಸ್ತಕಗಳು ಪ್ರಕಟಗೊಳ್ಳುತ್ತಿವೆ. ರಾಜ್ಯಾದ್ಯಂತ ಪ್ರತಿ ತಿಂಗಳು ನೂರಾರು ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳು ಪ್ರಕಟಗೊಳ್ಳುತ್ತವೆ. ಪುಸ್ತಕಗಳ ವಿನ್ಯಾಸವು ಸಹ ಮಗುವಿನಷ್ಟೆ ಮುದ್ದಾಗಿವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿರಿಯ ಸಾಹಿತಿ ಕಮಲಾ ಹಂಪನ ಮಾತನಾಡಿ, ಸಾಹಿತ್ಯವೆಂದರೆ ಕೇವಲ ಬರವಣಿಗೆಯಲ್ಲ. ಬದುಕಿಗೆ ಅಗತ್ಯವಾದ ಜೀವಸತ್ವ ಇರುತ್ತದೆ. ಹೀಗಾಗಿ ಪ್ರತಿಯೊಬ್ಬರು ಗ್ರಂಥಾಲಯಗಳಿಗೆ ಭೇಟಿ ಕೊಡುವುದನ್ನು ದಿನನಿತ್ಯದ ಪ್ರಮುಖ ಭಾಗವಾಗಿಸಿಕೊಳ್ಳಬೇಕೆಂದು ತಿಳಿಸಿದರು

ಪುಸ್ತಕಗಳ ಓದಿನಿಂದ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ನಮ್ಮ ಚಿಂತನೆಗಳನ್ನು ಮತ್ತಷ್ಟು ಉತ್ತಮಗೊಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಮಕ್ಕಳ ಸೃಜನಾತ್ಮಕ ಚಿಂತನೆಗಳು ಪುಸ್ತಕಗಳ ಓದಿನಿಂದ ಗುಣಾತ್ಮಕವಾಗಿ ಬೆಳೆಯಲಿವೆ. ಈ ಹಿನ್ನಲೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ರಿಯಾಯಿತಿ ದರದಲ್ಲಿ ಪುಸ್ತಕ ಮೇಳವನ್ನು ಆಯೋಜಿಸಿರುವುದು ಶ್ಲಾಘನೀಯವೆಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಟಿ.ಎಸ್.ನಾಗಾಭರಣ, ಹಿರಿಯ ಪತ್ರಕರ್ತ ಜೋಗಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News