ಸೇವಾ ಭದ್ರತೆಗೆ ಕೃಷಿಪತ್ತಿನ ಸಹಕಾರ ಸಂಘದ ನೌಕರರ ಆಗ್ರಹ

Update: 2019-02-12 17:06 GMT

ಬೆಂಗಳೂರು, ಫೆ.12: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ದುಡಿಯುತ್ತಿರುವ ಎಲ್ಲ ವರ್ಗದ ನೌಕರರಿಗೆ ಸೇವಾ ಭದ್ರತೆ, ವೇತನ ಶ್ರೇಣಿ, ಪಿಂಚಣಿ ಮತ್ತು ಇತರೆ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಧರಣಿ ನಡೆಸಲಾಯಿತು.

ಮಂಗಳವಾರ ನಗರದ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇಮಾಭಿವದ್ಧಿ ಮಹಾಮಂಡಳಿ ನೇತೃತ್ವದಲ್ಲಿ ನೂರಾರು ನೌಕರರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಡಿ.ಎಸ್. ಬಡಗಿಗೌಡ, ಸರಕಾರವು ಗ್ರಾಮೀಣ ಭಾಗದ ರೈತರಿಗೆ ಒದಗಿಸುತ್ತಿರುವ ಸೌಲಭ್ಯಗಳಾದ ಕಾರ್ಮಿಕರ ಬಡ ಕುಟುಂಬಗಳಿಗೆ ಆರ್ಥಿಕ ನೆರವು, ಪಡಿತರ, ಕೃಷಿಗೆ ಬೇಕಾಗುವಂತಹ ಸಲಕರಣೆ ಹಾಗೂ ಬೀಜ ಪೂರೈಕೆ ಸೇರಿದಂತೆ ಹಲವು ಕೆಲಸಗಳನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನೌಕರರು ಮಾಡುತ್ತಾರೆ ಎಂದರು.

ರೈತರ ಸೇವೆ ಮಾಡುತ್ತಿರುವ ನೌಕರರಿಗೆ ಯಾವುದೇ ರೀತಿಯ ಸೇವಾ ಭದ್ರತೆ, ವೇತನ ಶ್ರೇಣಿಗಳನ್ನು ನೀಡುತ್ತಿಲ್ಲ. ಕಳೆದ ಮೂವತ್ತು ವರ್ಷಗಳಿಂದ ಬೇಡಿಕೆಗಳನ್ನು ಈಡೇರಿಸುವಂತೆ ಹೋರಾಟ ನಡೆಸುತ್ತಿದ್ದರು, ಇದುವರೆಗಿನ ಎಲ್ಲ ಸರಕಾರಗಳು ನಿರ್ಲಕ್ಷ್ಯ ತೋರುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

 2 ವರ್ಷಗಳ ಹಿಂದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನೌಕರರ ಸೇವಾ ಭದ್ರತೆ, ವೇತನ ಶ್ರೇಣಿ, ಪಿಂಚಣಿ ಸೇರಿದಂತೆ ಇತರೆ ಸೌಲಭ್ಯಗಳನ್ನು ನೀಡಲು ಅಧ್ಯಯನ ಸಮಿತಿ ರಚಿಸಲಾಗಿತ್ತು. ಸಮಿತಿಯು ಕೇರಳ ರಾಜ್ಯದ ಸಂಘಗಳ ನೌಕರರಿಗೆ ಅಲ್ಲಿನ ಸರಕಾರ ನೀಡುತ್ತಿರುವ ಸೌಲಭ್ಯಗಳನ್ನು ಅಧ್ಯಯನ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಿತ್ತು.

ಅಂದಿನ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರು ನೌಕರರ ಬೇಡಿಕೆಗಳನ್ನು ಜಾರಿಗೊಳಿಸಲು ಸಹಕಾರ ಕಾಯ್ದೆ 1959 ತಿದ್ದುಪಡಿಗೊಳಿಸಿ 98ಇಎ, 98ಇಬಿ ಮತ್ತು 98ಇಸಿಯನ್ನು ಹೊಸದಾಗಿ ಸೇರ್ಪಡೆ ಮಾಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಸಹಕಾರ ಸಚಿವ ಬಂಡೆಪ್ಪಕಾಶೆಂಪೂರ್ ಅವರು ಬೀದರ್‌ನಲ್ಲಿ ನಡೆದ ಸಹಕಾರ ಸಪ್ತಾಹದಲ್ಲಿ ಸಮಿತಿ ಸೂಚಿಸಿದ್ದ ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ ಭರವಸೆ ನೀಡಿದ್ದರು. ಇದಾದ ಬಳಿಕ ಸಕಾರಾತ್ಮಕ ಉತ್ತರ ಸಿಗುತ್ತಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News