ವಿಧಾನಪರಿಷತ್ ಕಲಾಪ ನಡೆದಿದ್ದು 10 ಗಂಟೆ 20 ನಿಮಿಷ

Update: 2019-02-14 13:40 GMT

ಬೆಂಗಳೂರು, ಫೆ14: ಆರು ದಿನಗಳ ಕಾಲ ನಡೆದ ವಿಧಾನ ಪರಿಷತ್ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಿದ್ದು, ಈ ಅವಧಿಯಲ್ಲಿ ಕೇವಲ 10 ಗಂಟೆ 20 ನಿಮಿಷ ಮಾತ್ರ ಕಲಾಪ ನಡೆದಿದೆ ಎಂದು ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ತಿಳಿಸಿದರು.

ಗುರುವಾರದ ಮಧ್ಯಾಹ್ನದ ಕಲಾಪದಲ್ಲಿ ಧನವಿನಿಯೋಗ ವಿಧೇಯಕ ಸೇರಿದಂತೆ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿ ಬಂದಿದ್ದ ವಿಧೇಯಕಗಳನ್ನು ಪ್ರತಿಪಕ್ಷದ ಧರಣಿ ನಡುವೆ ಎಲ್ಲ ವಿಧೇಯಕಗಳನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು. ನಂತರ ಸದನದ ಕಾರ್ಯಕಲಾಪಗಳು ನಡೆದ ಬಗ್ಗೆ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ಮಾಹಿತಿ ನೀಡಿ, ಫೆ.6 ರಂದು ಆರಂಭಗೊಂಡ ಅಧಿವೇಶನ 14 ರವರೆಗೆ ನಡೆದಿದ್ದು, ಈ ವೇಳೆ ಒಟ್ಟು 10 ಗಂಟೆ 20 ನಿಮಿಷ ಮಾತ್ರ ಕಲಾಪ ನಡೆದಿದೆ. ಮೊದಲ ದಿನ ಅಗಲಿದ 3 ಗಣ್ಯರಿಗೆ ಸಂತಾಪ ಸೂಚಿಸಲಾಗಿದೆ. ಫೆ.8ರಂದು ಆಯವ್ಯಯವನ್ನು ಮಂಡಿಸಲಾಯಿತು ಎಂದರು.

ಒಟ್ಟು 671 ಚುಕ್ಕೆ ಗುರುತಿನ ಪ್ರಶ್ನೆಗಳನ್ನು ಸ್ವೀಕರಿಸಿದ್ದು ಅದರಲ್ಲಿ 90 ಪ್ರಶ್ನೆಗಳನ್ನು ಅಂಗೀಕರಿಸಿ 16 ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಿಸಲಾಯಿತು. ಇನ್ನುಳಿದ 49 ಪ್ರಶ್ನೆಗಳಿಗೆ ಉತ್ತರವನ್ನು ಸದನದಲ್ಲಿ ಮಂಡಿಸಲಾಯಿತು. 581 ಲಿಖಿತ ರೂಪದ ಪ್ರಶ್ನೆಗಳಲ್ಲಿ 337ಕ್ಕೆ ಉತ್ತರ ಮಂಡಿಸಲಾಯಿತು. ನಿಯಮ 72 ರ ಅಡಿ 120 ಸೂಚನೆ ಸ್ವೀಕರಿಸಿದ್ದು, 330 ರ ಅಡಿ 52 ಸೂಚನೆ ಸ್ವೀಕರಿಸಿ 9 ಸೂಚನೆಗೆ ಉತ್ತರ ಮಂಡಿಸಲಾಯಿತು. ಶೂನ್ಯ ವೇಳೆಯಲ್ಲಿ 6 ಪ್ರಸ್ತಾವನೆ ಸ್ವೀಕರಿಸಿ 2 ಕ್ಕೆ ಉತ್ತರ ಮಂಡಿಸಲಾಯಿತು. ನಿಯಮ 59 ರ ಅಡಿ ಒಂದು ಸೂಚನೆ ಸ್ವೀಕರಿಸಿ ಅದನ್ನು ನಿಯಮ 68ಕ್ಕೆ ಪರಿವರ್ತಿಸಲಾಯಿತು.

ಐವಾನ್ ಡಿಸೋಜ ಅವರು ನಿಯಮ 342ರ ಅಡಿ ಮಂಡಿಸಿದ್ದ ಸೂಚನೆಯನ್ನು ಸ್ವೀಕರಿಸಲು ಸೂಕ್ತವಲ್ಲ ಎಂದು ತೀರ್ಮಾನಿಸಲಾಯಿತು. 1 ಹಕ್ಕುಚ್ಯುತಿ ಸ್ವೀಕರಿಸಿದ್ದು ಅದನ್ನು ಹಕ್ಕು ಬಾಧ್ಯತೆ ಸಮಿತಿಗೆ ಕಳುಹಿಸಿಕೊಡಲಾಗಿದೆ. ವಿಧಾನಸಭೆಯಿಂದ ತಿದ್ದು ಒಡಿಯೊಂದಿಗೆ ಅಂಗೀಕೃತ ರೂಪದಲ್ಲಿದ್ದ 2 ಮತ್ತು ತಿದ್ದುಪಡಿ ಇಲ್ಲದೇ ಬಂದಿದ್ದು 9 ವಿಧೇಯಕ ಸೇರಿ ಒಟ್ಟು11 ವಿಧೇಯಕಗಳನ್ನು ಅಂಗೀಕರಿಸಲಾಯಿತು ಎಂದು ಸದನಕ್ಕೆ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News